ಡಿ.8ರಂದು ಉರ್ವ ಚರ್ಚ್ ವಾರ್ಷಿಕೋತ್ಸವ

Update: 2019-12-05 17:15 GMT

ಮಂಗಳೂರು, ಡಿ.5: ನಗರದ ಉರ್ವ ಚರ್ಚ್‌ನ ಪೊಂಪೈ ಮಾತೆಯ ಪುಣ್ಯಕ್ಷೇತ್ರದ ವಾರ್ಷಿಕೋತ್ಸವ ಕಾರ್ಯಕ್ರಮವು ಡಿ.8ರಂದು ನಡೆಯಲಿದೆ.

ಉರ್ವ ಚರ್ಚ್‌ನಲ್ಲಿ ಗುರುವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚರ್ಚ್‌ನ ಧರ್ಮಗುರು ಫಾ.ಸ್ಟಾನಿ ಪಿರೇರಾ, ಡಿ.8ರಂದು ಬೆಳಗ್ಗೆ 7, 8:15 ಹಾಗೂ 10:15ಕ್ಕೆ ವಿವಿಧ ಪ್ರಾರ್ಥನೆ ಹಾಗೂ ಪೂಜಾ ಕಾರ್ಯಕ್ರಮಗಳು ನಡೆಯಲಿವೆ. ಅನಾರೋಗ್ಯದಿಂದ ಬಳಲುವವರಿಗೋಸ್ಕರ ಚರ್ಚ್‌ನಲ್ಲಿ 10:15ಕ್ಕೆ ವಿಶೇಷ ಪೂಜೆ, ಪ್ರಾರ್ಥನೆ ನಡೆಯಲಿದೆ. ಸಂಜೆ 5:30ಕ್ಕೆ ಮಂಗಳೂರು ಕಥೋಲಿಕ್ ಕ್ರೈಸ್ತ ಧರ್ಮಪ್ರಾಂತದ ಧರ್ಮಾಧ್ಯಕ್ಷ ಡಾ.ಪೀಟರ್ ಪಾವ್ಲ್ ಸಲ್ಡಾನ್ಹ ಅವರು ಪವಿತ್ರ ಬಲಿಪೂಜೆ ನೆರವೇರಿಸಲಿದ್ದಾರೆ. ಪೂಜಾ ಕಾರ್ಯಕ್ರಮದ ಬಳಿಕ ಧಾರ್ಮಿಕ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.

ಯೇಸುವಿನ ತಾಯಿ ಮರಿಯಳನ್ನು ಪೊಂಪೈ ಮಾತೆ ಎಂದು ಕರೆಯಲಾಗುತ್ತದೆ. ಇಟಲಿಯ ಪೊಂಪೈ ಕಣಿವೆ ಪ್ರದೇಶದಲ್ಲಿ ಜನರು ದೈವಭಕ್ತಿಯಾಗಲಿ, ಪರಸ್ಪರ ಕಾಳಜಿಯಾಗಲೀ ಇಲ್ಲದೆ ಅನಾಗರಿಕರಂತೆ ಬಾಳುತ್ತಿದ್ದ ಸಂದರ್ಭದಲ್ಲಿ ಅಲ್ಲಿನ ಜನರ ಮನಪರಿವರ್ತನೆಗಾಗಿ ಬಾರ್ತೊಲೊ ಲೊಂಗೊ ಎಂಬ ಯುವ ವಕೀಲರಿಗೆ ಮಾತೆ ಮರಿಯಳು ದರ್ಶನವಿತ್ತು ಪ್ರಾರ್ಥಿಸಲು ಕರೆನೀಡಿದರು ಎಂದರು.

ಈ ದರ್ಶನದ ನಂತರ ಪೊಂಪೈ ಊರಿನಲ್ಲಿ ಜನರ ಮನ ಪರಿವರ್ತನೆಯಾಯಿತು. ಊರಿಗೆ ಊರೇ ಸರಿದಾರಿಗೆ ಬಂದಿತು. ಪೊಂಪೈ ನಗರದಲ್ಲಿ ಮಾತೆ ಮರಿಯಳ ದರ್ಶನವಾಗಿರುವುದರಿಂದ ಆಕೆಯನ್ನು ಪೊಂಪೈ ಮಾತೆ ಎಂದು ಕರೆಯುತ್ತಾರೆ. ಉರ್ವ ಚರ್ಚ್‌ನಲ್ಲಿ ಪೊಂಪೈ ಮಾತೆಗಾಗಿ ಪೀಠವನ್ನು ಸ್ಥಾಪಿಸುವುದರ ಮುಖಾಂತರ ಪೊಂಪೈ ಮಾತೆಯ ಭಕ್ತಿ ಆರಂಭವಾಯಿತು ಎಂದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ಧರ್ಮಗುರು ಫಾ.ಜೇಸಸ್ ಲೋಬೊ, ಚರ್ಚ್ ಪಾಲನಾ ಪರಿಷತ್‌ನ ಉಪಾಧ್ಯಕ್ಷ ಫ್ರಾನ್ಸಿಸ್ ಸಲ್ಢಾನ್ಹಾ, ಕಾರ್ಯದರ್ಶಿ ಲೂಸಿ ಡಿಸೋಜ, ಫಾರ್ ವಿಂಡ್ಸ್ ಕಮ್ಯುನಿಕೇಶನ್‌ನ ಎಲಿಯಾಸ್ ಫೆರ್ನಾಂಡಿಸ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News