ಪೌರತ್ವ ಮಸೂದೆಯಲ್ಲಿ ಸಾಗರೋತ್ತರ ಭಾರತೀಯರಿಗೆ ‘ಕಠಿಣ ನಿಯಮಗಳು’

Update: 2019-12-19 05:48 GMT

ಹೊಸದಿಲ್ಲಿ,ಡಿ.5: ಕೇಂದ್ರ ಸಂಪುಟವು ಅನುಮೋದಿಸಿರುವ ಪೌರತ್ವ (ತಿದ್ದುಪಡಿ) ಮಸೂದೆಯನ್ನು ಸೋಮವಾರ ಸಂಸತ್ತಿನಲ್ಲಿ ಮಂಡಿಸಲಾಗುತ್ತದೆ. ಪೌರತ್ವ ಕಾಯ್ದೆ ಅಥವಾ ಇತರ ಯಾವುದೇ ಅಧಿಸೂಚಿತ ಕಾನೂನಿನ ನಿಯಮಗಳನ್ನು ಉಲ್ಲಂಘಿಸುವ ಸಾಗರೋತ್ತರ ಭಾರತೀಯ ಪ್ರಜೆ (ಒಸಿಐ) ಕಾರ್ಡ್ ಹೊಂದಿರುವವರ ನೋಂದಣಿಯನ್ನು ರದ್ದುಗೊಳಿಸಲು ಸರಕಾರಕ್ಕೆ ಅವಕಾಶವನ್ನು ಕಲ್ಪಿಸುವ ಪ್ರಸ್ತಾವವನ್ನು ನೂತನ ಮಸೂದೆಯು ಒಳಗೊಂಡಿದೆ.

ಕರಡು ಮಸೂದೆಯು ವ್ಯಾಪಕ ಪ್ರತಿಭಟನೆಗಳಿಗೆ ಸಾಕ್ಷಿಯಾಗಿದ್ದ ಈಶಾನ್ಯ ಭಾರತದ ಭಾಗಗಳಿಗೆ ವಿನಾಯಿತಿಯನ್ನು ನೀಡಿದ್ದು, ಪಾಕಿಸ್ತಾನ,ಬಾಂಗ್ಲಾದೇಶ ಮತ್ತು ಅಫಘಾನಿಸ್ತಾನಗಳ ಮುಸ್ಲಿಮೇತರ ನಿರಾಶ್ರಿತರು ಭಾರತೀಯ ಪ್ರಜೆಗಳಾಗುವುದನ್ನು ಸುಲಭಗೊಳಿಸಿದೆ.

ಮಸೂದೆಯು ಅಂಗೀಕಾರಗೊಂಡರೆ ಅದು ಧರ್ಮದ ಆಧಾರದಲ್ಲಿ ಪೌರತ್ವವನ್ನು ಮಂಜೂರು ಮಾಡಲು ಅವಕಾಶ ನೀಡುವ ಮೊದಲ ಮಸೂದೆಯಾಗಲಿದೆ. ಮಸೂದೆಯ ಈ ಹಿಂದಿನ ಆವೃತ್ತಿಯು ಲೋಕಸಭೆಯಲ್ಲಿ ಅಂಗೀಕಾರ ಗೊಂಡಿತ್ತಾದರೂ ರಾಜ್ಯಸಭೆಯಲ್ಲಿ ತಡೆ ಹಿಡಿಯಲ್ಪಟ್ಟ ಬಳಿಕ ವ್ಯರ್ಥಗೊಂಡಿತ್ತು.

ಕಾನೂನಿನ ಉಲ್ಲಂಘನೆಗಾಗಿ ನೋಂದಣಿಯನ್ನು ರದ್ದುಗೊಳಿಸುವ ಮುನ್ನ ಒಸಿಐ ಕಾರ್ಡ್ ಹೊಂದಿರುವವರಿಗೆ ತಮ್ಮ ಅಹವಾಲುಗಳನ್ನು ಹೇಳಿಕೊಳ್ಳಲು ಅವಕಾಶವನ್ನು ಒದಗಿಸಲಾಗುವುದು. ಒಸಿಐ ಕಾರ್ಡ್‌ದಾರರಾಗಿ ಅವರ ನೋಂದಣಿ ರದ್ದುಗೊಳಿಸಿರುವುದನ್ನು ವ್ಯಾಪಕವಾಗಿ ಪ್ರಚುರಪಡಿಸಲಾಗುವುದು ಎಂದೂ ಕರಡು ಮಸೂದೆಯಲ್ಲಿ ಹೇಳಲಾಗಿದೆ.

ಪ್ರತಿಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸಿವೆ. ಮುಸ್ಲಿಮರ ವಿರುದ್ಧ ತಾರತಮ್ಯದ ನೀತಿಯನ್ನು ಅನುಸರಿಲಾಗುತ್ತಿದೆ ಎಂದು ಅವು ಆರೋಪಿಸಿವೆ.

‘ಭಾರತವು ಮುಸ್ಲಿಮರಿಗೆ ರಾಷ್ಟ್ರವಾಗುಳಿದಿಲ್ಲ’ ಎಂದು ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಅವರ ಪುತ್ರಿ ಇಲ್ತಿಜಾ ಮುಫ್ತಿ ಟ್ವೀಟಿಸಿದ್ದಾರೆ.

ಬುಧವಾರ ಸಂಪುಟ ಸಭೆಯು ಪೌರತ್ವ (ತಿದ್ದುಪಡಿ) ಮಸೂದೆಗೆ ಒಪ್ಪಿಗೆ ನೀಡುವ ಮುನ್ನ ಗೃಹಸಚಿವ ಅಮಿತ್ ಶಾ ಅವರು ಈಶಾನ್ಯ ರಾಜ್ಯಗಳ ಕಳವಳಗಳನ್ನು ದೂರಮಾಡಲು ಆ ಪ್ರದೇಶದ ರಾಜಕೀಯ ನಾಯಕರು,ನಾಗರಿಕ ಸಮಾಜದ ಸದಸ್ಯರು ಮತ್ತು ಸಂಸ್ಥೆಗಳೊಂದಿಗೆ ಸರಣಿ ಮಾತುಕತೆಗಳನ್ನು ನಡೆಸಿದ್ದರು. ಇದರ ಪರಿಣಾಮವಾಗಿ ಅಸ್ಸಾಂ, ಮಿರೆರಾಂ,ಮೇಘಾಲಯ ಮತ್ತು ತ್ರಿಪುರಾಗಳನ್ನು ತಿದ್ದುಪಡಿಯ ವ್ಯಾಪ್ತಿಯಿಂದ ಹೊರಗಿರಿಸಲಾಗಿದೆ.

ಆಡಳಿತ ಬಿಜೆಪಿಯು ಭಾರೀ ಬಹುಮತವನ್ನು ಹೊಂದಿರುವುದರಿಂದ ಲೋಕಸಭೆಯಲ್ಲಿ ಮಸೂದೆಯು ಸುಲಭವಾಗಿ ಅಂಗೀಕಾರಗೊಳ್ಳಲಿದೆ,ಆದರೆ ರಾಜ್ಯಸಭೆಯಲ್ಲಿ ಕಷ್ಟಕ್ಕೆ ಸಿಲುಕಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News