ಬಾಹ್ಯಾಕಾಶ ಸಾಧನೆಯಲ್ಲಿ ಭಾರತ ವಿಶ್ವಶಕ್ತಿ: ಡಾ.ಜಿ.ಮಾಧವನ್ ನಾಯರ್

Update: 2019-12-06 13:47 GMT

ಮಂಗಳೂರು, ಡಿ.6: ಮಾನವ ಕುಲದ ಅಭಿವೃದ್ಧಿಗೆ ಬಾಹ್ಯಾಕಾಶ ಸಂಶೋಧನೆ ಸಹಕಾರಿಯಾಗಿದೆ. ಈ ಮಧ್ಯೆ ಬಾಹ್ಯಾಕಾಶ ಸಾಧನೆಯಲ್ಲಿ ಭಾರತವು ವಿಶ್ವಶಕ್ತಿಯಾಗಿ ಮೂಡಿ ಬರುತ್ತಿರುವುದು ಸಂತಸದ ವಿಚಾರ ಎಂದು ಭಾರತೀಯ ಬಾಹ್ಯಾಕಾಶ ಸಂಸ್ಥೆಯ (ಇಸ್ರೋ) ಮಾಜಿ ಅಧ್ಯಕ್ಷ ಡಾ. ಜಿ. ಮಾಧವನ್ ನಾಯರ್ ಹೇಳಿದರು.

ಎಜೆ ಸಮೂಹ ಶಿಕ್ಷಣ ಸಂಸ್ಥೆಗಳ ಅಂಗ ಸಂಸ್ಥೆ ಲಕ್ಷ್ಮೀ ಮೆಮೋರಿಯಲ್ ಫಿಸಿಯೋಥೆರಪಿ ಕಾಲೇಜು ವತಿಯಿಂದ ಎರಡು ದಿನ ನಡೆಯುವ ‘ಕಾನ್‌ಫ್ಲುಯೆನ್ಸ್ -2019’ ರಾಷ್ಟ್ರ ಮಟ್ಟದ ಫಿಸಿಯೋಥೆರಪಿ ಸಮ್ಮೇಳನದಲ್ಲಿ ಶುಕ್ರವಾರ ಅವರು ದಿಕ್ಸೂಚಿ ಭಾಷಣ ಮಾಡಿದರು.

ಭಾರತದ ವಿಜ್ಞಾನಿಗಳು ಬಾಹ್ಯಾಕಾಶ ರಂಗದಲ್ಲಿ ಹಲವು ರೀತಿಯ ಸಂಶೋಧನೆಗಳನ್ನು ನಡೆಸುತ್ತಿದ್ದಾರೆ. ಇದಕ್ಕೆ ಚಂದ್ರಯಾನ-2 ಹೊಸ ಉತ್ತೇಜನ ಕಲ್ಪಿಸಿಕೊಟ್ಟಿದೆ. ಅಮೆರಿಕಾ, ರಷ್ಯಾದಂತಹ ದೇಶಗಳಿಗೆ ಸರಿಸಮಾನಾಗಿ ಭಾರತ ಸಾಧನೆ ಮಾಡುತ್ತಿರುವುದು ಎಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಮಾನವಸಹಿತ ಬಾಹ್ಯಾಕಾಶಯಾನಕ್ಕೆ ಸಿದ್ಧತೆ ನಡೆಸುತ್ತಿವುದು ಭಾರತದ ಸಾಧನೆಯ ಪಟ್ಟಿಯಲ್ಲಿ ಹೊಸದು. ಇದರಲ್ಲಿರುವ ಸವಾಲುಗಳನ್ನು ಮೆಟ್ಟಿ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಡಾ. ಜಿ. ಮಾಧವನ್ ನಾಯರ್ ನುಡಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ದೇಶದಲ್ಲೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದ.ಕ. ಜಿಲ್ಲೆಯ ಹೆಸರಿದೆ. ಗುಣಮಟ್ಟದ ಶಿಕ್ಷಣ ಮತ್ತು ಆರೋಗ್ಯ ಸೇವೆ ಹಲವಾರು ವರ್ಷಗಳಿಂದ ಪಾರದರ್ಶಕವಾಗಿ ನಡೆದುಕೊಂಡು ಬಂದಿರುವುದೇ ಇದಕ್ಕೆ ಕಾರಣ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಎ. ಜೆ. ಶೆಟ್ಟಿ ಮಾತನಾಡಿ, ಫಿಸಿಯೋಥೆರಪಿ ಮೂಲಕ ಕಡಿಮೆ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ಪಡೆಯಬಹುದು. ಆದರೆ ಈ ಬಗ್ಗೆ ಜನರಿಗೆ ಮಾಹಿತಿ ಕೊರತೆ ಇದ್ದು, ಫಿಸಿಯೋಥೆರಪಿಸ್ಟ್‌ಗಳು ಮಾಹಿತಿ ನೀಡುವ ಕೆಲಸ ಮಾಡಬೇಕು ಎಂದರು.

ಐಜಿಪಿ ಎಂ. ಚಂದ್ರಶೇಖರ್, ಕೊಚ್ಚಿನ್ ಲೇಕ್‌ಶೋರ್ ಆಸ್ಪತ್ರೆ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ.ವಿ.ಪಿ. ಗಂಗಾಧರನ್, ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಉಪಾಧ್ಯಕ್ಷ ಎ. ಪ್ರಶಾಂತ್ ಶೆಟ್ಟಿ, ರಾಜೀವಗಾಂಧಿ ಆರೋಗ್ಯ ವಿಶ್ವವಿದ್ಯಾನಿಲ ಯದ ಸಿಂಡಿಕೇಟ್ ಸದಸ್ಯ ಡಾ.ಶಿವಶರಣ್ ಶೆಟ್ಟಿ, ಎ.ಜೆ. ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ, ಕಾರ್ಯಕ್ರಮ ಸಂಘಟನಾ ಅಧ್ಯಕ್ಷ ಡಾ. ಅಭಿಲಾಶ್ ಪಿ.ವಿ., ಕಾರ್ಯದರ್ಶಿ ಡಾ. ಹರೀಶ್ ಎಸ್. ಕೃಷ್ಣ ಉಪಸ್ಥಿತರಿದ್ದರು.

ಕಾರ್ಯಕ್ರಮ ಸಂಯೋಜಕ ಡಾ. ಸಂಜಯ್ ಏಪೆನ್ ಸ್ಯಾಮ್ಯುವೆಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News