ಚೀನಾದ ರಕ್ಷಣಾ ಬಜೆಟ್ 20 ವರ್ಷಗಳಲ್ಲಿ 850 ಶೇ. ಹೆಚ್ಚಳ

Update: 2019-12-06 14:26 GMT

ವಾಶಿಂಗ್ಟನ್, ಡಿ. 6: ಚೀನಾದ ರಕ್ಷಣಾ ಬಜೆಟ್‌ನಲ್ಲಿ ಕಳೆದ 20 ವರ್ಷಗಳ ಅವಧಿಯಲ್ಲಿ 850 ಶೇಕಡ ಹೆಚ್ಚಳವಾಗಿದೆ. ರಕ್ಷಣಾ ಬಜೆಟ್ 20 ಬಿಲಿಯ ಡಾಲರ್ (ಸುಮಾರು 1.42 ಲಕ್ಷ ಕೋಟಿ ರೂಪಾಯಿ)ನಿಂದ 2018ರಲ್ಲಿ 170 ಬಿಲಿಯ ಡಾಲರ್ (ಸುಮಾರು 12.12 ಲಕ್ಷ ಕೋಟಿ ರೂಪಾಯಿ)ಗೆ ಏರಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್‌ನ ಅಧೀನ ಕಾರ್ಯದರ್ಶಿ ಜಾನ್ ಸಿ. ರೂಡ್ ಗುರುವಾರ ಸಂಸತ್ತಿಗೆ ತಿಳಿಸಿದರು.

ಚೀನಾವು ಜಗತ್ತಿನ ಅತಿ ದೊಡ್ಡ ಸೇನೆಗಳ ಪೈಕಿ ಒಂದಾಗಿದೆ. ಅದು ತನ್ನ ಸಾಮರ್ಥ್ಯವನ್ನು ನಿರಂತರವಾಗಿ ಹೆಚ್ಚಿಸುತ್ತಲೇ ಇದೆ ಹಾಗೂ ದಕ್ಷಿಣ ಚೀನಾ ಸಮುದ್ರ ಮತ್ತು ಆಫ್ರಿಕಗಳಲ್ಲಿ ಅದರ ಚಟುವಟಿಕೆಗಳು ಪ್ರಚೋದನಕಾರಿಯಾಗಿದೆ ಎಂದು ಅವರು ಹೇಳಿದರು.

‘‘ಚೀನಾದ ಅಧಿಕೃತ ರಕ್ಷಣಾ ಬಜೆಟ್ ಕಳೆದ 20 ವರ್ಷಗಳ ಅವಧಿಯಲ್ಲಿ 850 ಶೇಕಡಷ್ಟು ಏರಿದೆ’’ ಎಂದು ಸೆನೆಟ್ ಸಶಸ್ತ್ರ ಸೇವೆಗಳ ಸಮಿತಿಯ ಮುಂದೆ ನೀಡಿದ ಸಾಕ್ಷದಲ್ಲಿ ರೂಡ್ ಹೇಳಿದರು.

ಅದೇ ವೇಳೆ, ನಿಜವಾದ ಸಂಖ್ಯೆಗಳು ಚೀನಾದ ಅಧಿಕೃತ ಬಜೆಟ್‌ಗಿಂತ ಗಣನೀಯವಾಗಿ ಹೆಚ್ಚಾಗಿದೆ ಎಂದೂ ಅವರೂ ಅಭಿಪ್ರಾಯಪಟ್ಟರು.

ಅಮೆರಿಕ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಹೆಚ್ಚು ಹಣ ಹೂಡಿಕೆ

ಅಮೆರಿಕ ಸೇನೆಯು ಪ್ರಾಬಲ್ಯ ಹೊಂದಿರುವ ರಕ್ಷಣಾ ಕ್ಷೇತ್ರಗಳಲ್ಲಿ ಚೀನಾವು ಹೆಚ್ಚು ಹಣ ಖರ್ಚು ಮಾಡುತ್ತಿದೆ ಎಂದು ಹೇಳಿದ ಪೆಂಟಗನ್ ಅಧೀನ ಕಾರ್ಯದರ್ಶಿ ಜಾನ್ ಸಿ. ರೂಡ್ , ಬಾಹ್ಯಾಕಾಶ, ಸೈಬರ್, ಇಲೆಕ್ಟ್ರಾನಿಕ್ ಯುದ್ಧ, ಸಮುದ್ರದಡಿಯ ಯುದ್ಧ, ಯುದ್ಧ ವಿಮಾನಗಳು, ದೀರ್ಘ ವ್ಯಾಪ್ತಿಯ ಕ್ರೂಸ್ ಕ್ಷಿಪಣಿಗಳಿಂದ ಸಜ್ಜಿತವಾದ ಬಾಂಬರ್ ವಿಮಾನಗಳು ಮತ್ತು ಇತರ ‘ಆ್ಯಂಟಿ-ಎಕ್ಸೆಸ್, ಏರಿಯ ಡಿನೈಯಲ್’ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯವನ್ನು ವೃದ್ಧಿಸುತ್ತಿದೆ ಎಂದರು.

ಚೀನಾವು ತನ್ನ ಸೇನೆ ಮತ್ತು ಯುದ್ಧತಂತ್ರವನ್ನು ಬಲಪಡಿಸಲು ಸೈಬರ್ ಸಾಮರ್ಥ್ಯಗಳನ್ನು ಬಳಸುತ್ತಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News