ಮಕ್ಕಳ ಭವಿಷ್ಯಕ್ಕಾಗಿ ತಾಪಮಾನ ಬೆದರಿಕೆಯನ್ನು ಹಿಮ್ಮೆಟ್ಟಿಸೋಣ

Update: 2019-12-06 14:34 GMT

ಮ್ಯಾಡ್ರಿಡ್ (ಸ್ಪೇನ್), ಡಿ. 6: ನಮ್ಮ ಮಕ್ಕಳಿಗೆ ಸಹಜವಾಗಿ ಸಿಗಬೇಕಾಗಿರುವ ಭವಿಷ್ಯವನ್ನು ನೀಡುವುದಕ್ಕಾಗಿ, ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ ಪರಿಸರ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಸರಕಾರಗಳು ಜಾಗತಿಕ ತಾಪಮಾನದ ಬೆದರಿಕೆಯನ್ನು ಹಿಮ್ಮೆಟ್ಟಿಸಬೇಕು ಎಂದು ಇದೇ ಸಮ್ಮೇಳನದಲ್ಲಿ ಭಾಗವಹಿಸುತ್ತಿರುವ ಹೆತ್ತವರು ಹೇಳಿದ್ದಾರೆ.

‘‘ಪರಿಸರನಾಶಗೊಂಡಿರುವ ಹಾಗೂ ವಾತಾವರಣ ಹದಗೆಟ್ಟಿರುವ ಹಾಳಾದ ಭೂಮಿಯನ್ನು ನಾವು ನಮ್ಮ ಮಕ್ಕಳಿಗೆ ನೀಡುತ್ತಿದ್ದೇವೆ’’ ಎಂದು 27 ದೇಶಗಳ 222 ಸಂಘಟನೆಗಳ ಪರವಾಗಿ ಬಂದಿರುವ ಹೆತ್ತವರು ಬಹಿರಂಗ ಘೋಷಣೆಯಲ್ಲಿ ಹೇಳಿದರು.

ಸ್ವೀಡನ್‌ನ ಹದಿಹರಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ನೇತೃತ್ವದಲ್ಲಿ ಯುವ ಪರಿಸರ ಹೋರಾಟಗಾರರು ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಶುಕ್ರವಾರ ‘ಫ್ರಾಯ್ಡೇ ಫಾರ್ ಫ್ಯೂಚರ್’ ಬ್ಯಾನರ್‌ನಡಿ ಮೆರವಣಿಗೆ ನಡೆಸಲಿರುವ ಒಂದು ದಿನ ಮುಂಚೆ ಜಗತ್ತಿನಾದ್ಯಂತದಿಂದ ಬಂದಿರುವ ಹೆತ್ತವರು ಈ ಬೇಡಿಕೆಯನ್ನು ಮುಂದಿಟ್ಟಿದ್ದಾರೆ.

ವಿಶ್ವಸಂಸ್ಥೆಯ ಪರಿಸರ ಸಮ್ಮೇಳನವು ಡಿಸೆಂಬರ್ 2ರಂದು ಮ್ಯಾಡ್ರಿಡ್‌ನಲ್ಲಿ ಆರಂಭಗೊಂಡಿದ್ದು, ಡಿಸೆಂಬರ್ 13ರವರೆಗೆ ನಡೆಯಲಿದೆ.

‘‘ವಿಶ್ವಸಂಸ್ಥೆಯ ಪರಿಸರ ಸಮ್ಮೇಳನ ‘ಸಿಒಪಿ25’ರಲ್ಲಿ ಭಾಗವಹಿಸುತ್ತಿರುವ ಪ್ರತಿನಿಧಿಗಳ ಪೈಕಿ ಹೆಚ್ಚಿನವರು ಹೆತ್ತವರೇ ಆಗಿದ್ದಾರೆ. ನಾವು ಮುಖ್ಯವಾಗಿ ಈ ಪ್ರತಿನಿಧಿಗಳಿಗೆ ಮನವಿ ಮಾಡುತ್ತಿದ್ದೇವೆ’’ ಎಂದು ಘೋಷಣೆ ತಿಳಿಸಿದೆ.

‘‘ಪರಿಸರ ಬಿಕ್ಕಟ್ಟನ್ನು ಪರಿಹರಿಸುವ ಹೊಣೆ ನಮ್ಮ ಮಕ್ಕಳದಲ್ಲ. ಅದು ವಯಸ್ಕರಾಗಿ ಹಾಗೂ ಹೆತ್ತವರಾಗಿ ನಮ್ಮ ಕೆಲಸವಾಗಿದೆ’’ ಎಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News