‘ಇರಿದರು, ಪೆಟ್ರೋಲ್ ಸುರಿದರು...’

Update: 2019-12-06 15:42 GMT

ಲಕ್ನೋ, ಡಿ. 6: ಉತ್ತರಪ್ರದೇಶದ ಉನ್ನಾವೊ ಗ್ರಾಮದ ಸಮೀಪ ತನಗೆ ಐವರು ಬೆಂಕಿ ಹಚ್ಚುವ ಮೊದಲು ಥಳಿಸಿದ್ದರು ಹಾಗೂ ಚೂರಿಯಿಂದ ಇರಿದಿದ್ದರು. ಇವರಲ್ಲಿ ತನ್ನನ್ನು ಅತ್ಯಾಚಾರ ಎಸಗಿದ ಪ್ರಕರಣದ ಇಬ್ಬರು ಆರೋಪಿಗಳು ಹಾಗೂ ಅವರ ತಂದೆಯಂದಿರು ಕೂಡ ಸೇರಿದ್ದರು ಎಂದು ಶೇ. 90 ಸುಟ್ಟ ಗಾಯಗಳಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ 23ರ ಹರೆಯದ ಅತ್ಯಾಚಾರ ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾರೆ.

ಶೇ. 80ರಷ್ಟು ಸುಟ್ಟ ಗಾಯಗಳಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿ ಆ್ಯಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ತೆರಳುವ ಸಂದರ್ಭ ಐವರು ದಾಳಿಕೋರರ ಹೆಸರನ್ನು ಪೊಲೀಸರಿಗೆ ತಿಳಿಸಿದ್ದಾರೆ. ‘‘ನಾನು ರಾಯ್ ‌ಬರೇಲಿಗೆ ತೆರಳಲು ರೈಲಿಗಾಗಿ ಬೆಳಗ್ಗೆ 4 ಗಂಟೆಗೆ ಸ್ಥಳೀಯ ರೈಲ್ವೆ ನಿಲ್ದಾಣಕ್ಕೆ ತೆರಳುತ್ತಿದ್ದೆ. ಐವರು ನನಗಾಗಿ ಕಾಯುತ್ತಿದ್ದರು. ಅವರು ನನ್ನನ್ನು ಸುತ್ತುವರಿದರು ಹಾಗೂ ದೊಣ್ಣೆಯಿಂದ ನನ್ನ ಕಾಲಿಗೆ ಥಳಿಸಿದರು. ಚೂರಿಯಿಂದ ನನ್ನ ಕುತ್ತಿಗೆಗೆ ಇರಿದರು. ಅನಂತರ ನನ್ನ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ನಾನು ಬೊಬ್ಬೆ ಹೊಡೆದಾಗ ಜನರು ಸೇರಿದರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದರು’’ ಎಂದು ಯುವತಿ ಉನ್ನಾವೊದಲ್ಲಿರುವ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸಂದರ್ಭ ಪೊಲೀಸರಿಗೆ ತಿಳಿಸಿದ್ದಾರೆ. ದಾಳಿಕೋರರಲ್ಲಿ ಓರ್ವನಾಗಿದ್ದ ಶಿವಂ ತ್ರಿವೇದಿ ಅತ್ಯಾಚಾರ ಪ್ರಕರಣದಿಂದ 5 ದಿನಗಳ ಹಿಂದೆ ಬಿಡುಗಡೆಯಾಗಿದ್ದ. ನಾಪತ್ತೆಯಾಗಿದ್ದ ಸಹ ಆರೋಪಿ ಶುಭಂ ತ್ರಿವೇದಿ ಕೂಡ ಈ ದಾಳಿಯಲ್ಲಿ ಪಾಲ್ಗೊಂಡಿದ್ದ.

“ಯುವತಿ ಬೊಬ್ಬೆ ಹಾಕುತ್ತಾ ನೆರವಿಗಾಗಿ ಓಡುತ್ತಿದ್ದುದನ್ನು ನಾನು ನೋಡಿದೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ. “ನಾನು 100ಕ್ಕೆ ಕರೆ ಮಾಡಿದೆ ಹಾಗೂ ಯುವತಿ ಪೊಲೀಸರೊಂದಿಗೆ ಮಾತನಾಡಲು ಅನುಕೂಲವಾಗುವಂತೆ ಸ್ಪೀಕರ್ ಆನ್ ಮಾಡಿದೆ” ಎಂದು ಅವರು ಹೇಳಿದ್ದಾರೆ. ಅನಂತರ ಯುವತಿಯನ್ನು ವಿಮಾನ ಮೂಲಕ ದಿಲ್ಲಿಯ ಸಪ್ಧರ್‌ಜಂಗ್ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಯಿತು. ಯುವತಿಯ ಪರಿಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

‘ಬದುಕಲು ಬಿಡೆವು’: ಅತ್ಯಾಚಾರ ಸಂತ್ರಸ್ತೆಯ ಮಾವನಿಗೆ ಬೆದರಿಕೆ

ಉನ್ನಾವೊ: ಆರೋಪಿ ಶಿವಂ ತ್ರಿವೇದಿ ತನಗೆ ಕರೆ ಮಾಡಿ ಬೆದರಿಕೆ ಒಡ್ಡಿದ್ದಾನೆ ಎಂದು ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಮಾವ ಆರೋಪಿಸಿದ್ದಾರೆ. ‘‘ನಿನ್ನ ಅಂಗಡಿಗೆ ಬೆಂಕಿ ಹಚ್ಚಲಾಗುವುದು ಹಾಗೂ ನಿನ್ನನ್ನು ಜೀವಿಸಲು ಬಿಡೆವು’’ ಎಂದು ಶಿವಂ ಬೆದರಿಕೆ ಒಡ್ಡಿರುವುದಾಗಿ ಇಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಾ ಸಣ್ಣ ಅಂಗಡಿ ನಡೆಸುತ್ತಿರುವ ಅವರು ಹೇಳಿದ್ದಾರೆ.

ನಾನು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಿದ್ದೇನೆ ಹಾಗೂ ಈ ಸಂಬಂಧ ಕ್ರಮಕೈಗೊಳ್ಳುವಂತೆ ಆಗ್ರಹಿಸಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

‘ಆತ ನನ್ನನ್ನು ಲೈಂಗಿಕ ಗುಲಾಮಳನ್ನಾಗಿ ಇರಿಸಿಕೊಂಡಿದ್ದ’

ಲಕ್ನೋ: ತನ್ನನ್ನು ಲೈಂಗಿಕ ಗುಲಾಮಳಾಗಿ ಇರಿಸಿಕೊಳ್ಳಲಾಗಿತ್ತು. ಪೊಲೀಸರನ್ನು ಸಂಪರ್ಕಿಸಿದರೆ ವೀಡಿಯೊವನ್ನು ಪೋಸ್ಟ್ ಮಾಡಲಾಗುವುದು ಎಂದು ಬೆದರಿಕೆ ಒಡ್ಡಲಾಗಿತ್ತು ಎಂದು ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಆರೋಪಿಸಿದ್ದಾರೆ.

ಬೆದರಿಕೆಯನ್ನು ನಿರ್ಲಕ್ಷಿಸಿದ್ದ ಯುವತಿ ಪೊಲೀಸ್ ಠಾಣೆಗೆ ಹೋಗಿ ಎರಡು ಎಫ್‌ಐಆರ್ ದಾಖಲಿಸಿದ್ದರು. ಮೊದಲು ಬಿಹಾರ್ ಬಹ್ತಾ ಪೊಲೀಸ್ (ಉನ್ನಾವೊ) ಠಾಣೆಯಲ್ಲಿ ಮಾರ್ಚ್ 5ರಂದು ಹಾಗೂ ಮರು ದಿನ ಲಾಲ್‌ಗಂಜ್ (ರಾಯ್‌ಬರೇಲಿ) ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದರು. ಶಿವಂ ತ್ರಿವೇದಿ (ಪ್ರಧಾನ ಆರೋಪಿ) ವಿವಾಹವಾಗುವುದಾಗಿ ಆಮಿಷ ಒಡ್ಡಿದ್ದ. ತಾನು ಶಿವಂನೊಂದಿಗೆ ಲಾಲ್‌ಗಂಜ್‌ಗೆ ತೆರಳಿದ್ದೆ. ಆದರೆ, ಅತ ಅಲ್ಲಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದ. ಕೃತ್ಯದ ವೀಡಿಯೊವನ್ನು ಮೊಬೈಲ್‌ನಲ್ಲಿ ದಾಖಲಿಸಿಕೊಂಡಿದ್ದ. ವೀಡಿಯೊವನ್ನು ಆನ್‌ಲೈನ್‌ನಲ್ಲಿ ಅಪ್‌ಲೋಡ್ ಮಾಡುವುದಾಗಿ ಬೆದರಿಕೆ ಒಡ್ಡಿ ಪದೇ ಪದೇ ಅತ್ಯಾಚಾರ ಎಸಗಿದ್ದ ಎಂದು ಅವರು ಎಫ್‌ಐಆರ್‌ನಲ್ಲಿ ಆರೋಪಿಸಿದ್ದಾರೆ. “ಆತ ನನ್ನನ್ನು ಬಾಡಿಗೆ ಕೊಠಡಿಯೊಂದರಲ್ಲಿ ಇರಿಸಿದ್ದ ಹಾಗೂ ಪಹರೆ ನಿರ್ವಹಿಸಿದ್ದ. ಹೊರಗೆ ಹೋಗಲು ಪ್ರಯತ್ನಿಸಿದರೆ, ಹತ್ಯೆಗೆಯ್ಯಲಾಗುವುದು ಎಂದು ಬೆದರಿಕೆ ಒಡ್ಡಿದ್ದ. ಆತ ನಿರಂತರ ಮನೆಯನ್ನು ಬದಲಾಯಿಸುತ್ತಿದ್ದ” ಎಂದು ಎಫ್‌ಐಆರ್‌ನಲ್ಲಿ ಯುವತಿ ಹೇಳಿದ್ದಾರೆ.

ಬದುಕುವ ಸಾಧ್ಯತೆ ತುಂಬಾ ಕಡಿಮೆ: ವೈದ್ಯರು

ಲಕ್ನೋ: ಅತ್ಯಾಚಾರಿಗಳಿಂದ ದಹನಕ್ಕೊಳಗಾದ ಯುವತಿ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಲಾಗಿದೆ ಎಂದು ದಿಲ್ಲಿಯ ಸಪ್ಧರ್‌ಜಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರು ಶುಕ್ರವಾರ ತಿಳಿಸಿದ್ದಾರೆ. ‘‘ಸಂತ್ರಸ್ತೆಯ ಆರೋಗ್ಯ ಸ್ಥಿತಿ ಚಿಂತಾಜನಕವಾಗಿದೆ. ಅವರು ಬದುಕಿ ಉಳಿಯುವ ಸಾಧ್ಯತೆ ತುಂಬಾ ಕಡಿಮೆ. ನಾವು ಅವರನ್ನು ಕೃತಕ ಉಸಿರಾಟ ವ್ಯವಸ್ಥೆಯಲ್ಲಿ ಇರಿಸಿದ್ದೇವೆ’’ ಎಂದು ವೈದ್ಯಕೀಯ ಅಧೀಕ್ಷಕ ಸುನೀಲ್ ಗುಪ್ತಾ ಹೇಳಿದ್ದಾರೆ. ‘‘ನಾವು ಅವರಿಗಾಗಿ ಪ್ರತ್ಯೇಕ ತುರ್ತು ನಿಗಾ ಘಟಕವನ್ನು ರೂಪಿಸಿದ್ದೇವೆ. ಅವರ ಆರೋಗ್ಯ ಸ್ಥಿತಿ ಬಗ್ಗೆ ವೈದ್ಯರ ತಂಡವೊಂದು ನಿಗಾ ವಹಿಸುತ್ತಿದೆ’’ ಎಂದು ಸುನೀಲ್ ಗುಪ್ತಾ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News