ಉಡುಪಿ: ದಸಂಸದಿಂದ ಸಂವಿಧಾನ ಸಂರಕ್ಷಣಾ ದಿನ

Update: 2019-12-06 16:05 GMT

ಉಡುಪಿ, ಡಿ.6: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪರಿನಿಬ್ಬಾಣ ದಿನವಾದ ಡಿ.6ನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಉಡುಪಿ ಜಿಲ್ಲಾ ಸಮಿತಿ ಹಾಗೂ ಕರ್ನಾಟಕ ಬೌದ್ಧ ಮಹಾಸಭಾ ಉಡುಪಿ ಜಿಲ್ಲಾ ಘಟಕಗಳು ವಿವಿಧ ಪ್ರಗತಿಪರ ಸಂಘಟನೆ ಗಳೊಂದಿಗೆ ‘ಸಂವಿಧಾನ ಸಂರಕ್ಷಣಾ ದಿನ’ವಾಗಿ ಇಂದು ಆಚರಿಸಿದವು.

ಈ ಪ್ರಯುಕ್ತ ಶುಕ್ರವಾರ ಸಂಜೆ ನಗರದ ಜೋಡುಕಟ್ಟೆಯಿಂದ ಪ್ರಾರಂಭಗೊಂಡ ಮೊಂಬತ್ತಿ ಜಾಥಾಕ್ಕೆ ವಂ.ವಿಲಿಯ ಮಾರ್ಟಿಸ್ ಚಾಲನೆ ನೀಡಿದರು. ಜಾಥಾ ಪ್ರಮುಖ ಬೀದಿಗಳಲ್ಲಿ ಸಾಗಿ ಸರ್ವಿಸ್ ಬಸ್‌ನಿಲ್ದಾಣ ಬಳಿಯ ಬೋರ್ಡ್ ಹೈಸ್ಕೂಲ್ ಆವರಣದಲ್ಲಿ ಮುಕ್ತಾಯಗೊಂಡಿತು. ಅಲ್ಲಿ ಸೇರಿದ ಗಣ್ಯರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಚಿಂತಕ ಜಿ.ರಾಜಶೇಖರ್ ಅವರು ಡಿ.6 ನಮಗೆ ಎರಡು ಕಾರಣಗಳಿಗಾಗಿ ಮುಖ್ಯವಾಗುತ್ತದೆ. ಒಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಪರಿನಿಬ್ಬಾಣ ಹಾಗೂ ಇನ್ನೊಂದು ದೇಶದ ಸೌಹಾರ್ದತೆಯ ಪರಂಪರೆಗೆ ಧಕ್ಕೆಯನ್ನುಂಟುಮಾಡಿದ ಬಾಬರಿ ಮಸೀದಿ ಧ್ವಂಸಕ್ಕಾಗಿ. ಆ ದಿನದಿಂದ ಕೆಲವು ತಿಂಗಳುಗಳವರೆಗೆ ಮುಂಬಯಿಯಲ್ಲಿ ನಡೆದ ಕೋಮುಗಲಭೆಯ ನೈಜ ಸ್ವರೂಪವನ್ನು ಶ್ರೀಕೃಷ್ಣ ಆಯೋಗ ಪುರಾವೆಗಳೊಂದಿಗೆ ತೆರೆದಿಟ್ಟರೂ ಆ ಬಗ್ಗೆ ಯಾವುದೇ ಕ್ರಮ ಜರಗಿಸಿಲ್ಲ ಎಂದರು.

ಇಂದು ಡಾ.ಬಿ.ಆರ್.ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನವನ್ನು ಸಂಪೂರ್ಣ ಕಡೆಗಣಿಸುತ್ತಿರುವ ಪಕ್ಷವೊಂದರ ಆಡಳಿತ ನಡೆಯುತ್ತಿದೆ. ಹಿಂದುತ್ವದ ನೆಲೆಯಲ್ಲಿ ನಡೆದಿರುವ ಆಡಳಿತವನ್ನು ಬಿಟ್ಟು ಸಂವಿಧಾನವನ್ನು ಎತ್ತಿ ಹಿಡಿಯುವ ಕೆಲಸವನ್ನು ಎಲ್ಲರೂ ಮಾಡಬೇಕಾಗಿದೆ ಎಂದರು.

ಚಿಂತಕ ಕೆ.ಫಣಿರಾಜ್ ಮಾತನಾಡಿ, ನಮ್ಮ ಸಂವಿಧಾನ ಎಲ್ಲಾ ಜಾತಿ,ಮತ, ವರ್ಗ, ಧರ್ಮೀಯರಿಗೂ ಪವಿತ್ರ ಗ್ರಂಥ, ಆಧ್ಯಾತ್ಮಿಕ ಗ್ರಂಥವಾಗಿದೆ. ಈ ಆಧ್ಯಾತ್ಮಿಕದ ಮೂಲ ಬುದ್ಧ ಧರ್ಮದಲ್ಲಿದೆ, ಬುದ್ಧ ಧರ್ಮದ ಸಂದೇಶದಲ್ಲಿದೆ. ನಮ್ಮ ಸಂವಿಧಾನ ಹೇಳಿದ ಸ್ವಾತಂತ್ರ, ಸಹೋರತ್ವ ಹಾಗೂ ಸಮಾನತೆಯ ಸಮಾಜ ನಮಗಿಂದು ಬೇಕಾಗಿದೆ. ಇಂದಿನ ಪವಿತ್ರ ದಿನದಂದು ಈ ಮೂರನ್ನೂ ಒಳಗೊಂಡ ಸಮಾಜವನ್ನು ಸ್ಥಾಪಿಸಲು ನಾವೆಲ್ಲಾ ಪಣತೊಡಬೇಕಾಗಿದೆ ಎಂದರು.

ಈಗ ದೇಶದಲ್ಲಿರುವ ಹೊರ ಅಂಧಕಾರ ನಮ್ಮನ್ನು ಹೆದರಿಸುತ್ತಿದೆ. ಇದರ ವಿರುದ್ಧ ನಾವೆಲ್ಲ ಧೀಮಂತ ಹೋರಾಟ ನಡೆಸಬೇಕಾ ಗಿದೆ. ಈ ಮೂಲಕ ಸಂವಿಧಾನದ ಮೂಲ ತತ್ವಗಳನ್ನು ಪಾಲಿಸಬೇಕಾಗಿದೆ. ಸಮಾನತೆ ಇಲ್ಲದೇ ಸ್ವಾತಂತ್ರಕ್ಕೆ ಅರ್ಥವೇ ಇಲ್ಲ. ನಾವೆಲ್ಲರೂ ನಿರ್ಭಯವಾಗಿ ಸಮಾನತೆ ಬೇಡುವ ಸ್ವಾತಂತ್ರ ನಮಗಿಂದು ಬೇಕಾಗಿದೆ. ಈ ಸಮಾನತೆಗೆ ಸಹಬಾಳ್ವೆಯ ಅಗತ್ಯವಿದೆ ಎಂದವರು ನುಡಿದರು.

ದಲಿತ ಮುಖಂಡ ಹಾಗೂ ಚಿಂತಕ ನಾರಾಯಣ ಮಣೂರು ಮಾತನಾಡಿ, ನಮ್ಮ ಕತ್ತಲಿನ ಜಗತ್ತಿಗೆ ಬೆಳಕನ್ನು ನೀಡಿ, ಜಗತ್ತಿನ ಅರಿವು ಮೂಡಿಸಿದ ಅಂಬೇಡ್ಕರ್, ದೈಹಿಕವಾಗಿ, ಭೌತಿಕವಾಗಿ ನಮ್ಮ ನಡುವೆ ಇಲ್ಲದೇ ಇದ್ದರೂ, ಅವರ ವಿಚಾರಧಾರೆ, ಎಲ್ಲರಿಗೂ ಸಮಪಾಲು, ಸಮಭಾವದ ಚಿಂತನೆ ಹಾಗೂ ಅವರ ತಾಯ್ತನದ ಪ್ರೀತಿಯನ್ನು ಸಂವಿಧಾನದ ಮೂಲಕ ಒದಗಿಸಿಕೊಟ್ಟಿದ್ದಾರೆ ಎಂದರು.

ಸಿಪಿಎಂ ನಾಯಕ ಬಾಲಕೃಷ್ಣ ಶೆಟ್ಟಿ, ವಂ. ವಿಲಿಯಂ ಮಾರ್ಟಿಸ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ದಲಿತ ಮುಖಂಡ ಶ್ಯಾಮರಾಜ್ ಬಿರ್ತಿ ಕಾರ್ಯಕ್ರಮ ನಿರೂಪಿಸಿದರು. ಸುಂದರ ಮಾಸ್ತರ್, ದಿವಾಕರ ಬೇಂಗ್ರೆ, ಹುಸೇನ್ ಕೋಡಿಬೇಂಗ್ರೆ, ಯಾಸಿನ್ ಕೋಡಿಬೇಂಗ್ರೆ, ಎಸ್.ಎಸ್.ಪ್ರಸಾದ್, ಸಿರಿಲ್ ಮಥಾಯಸ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News