​ತೆಂಕನಿಡಿಯೂರು: ಡಿ.11ರಿಂದ ದಕ್ಷಿಣ ವಲಯ ಅಂತರ ವಿವಿ ಪುರುಷರ ಕಬಡ್ಡಿ

Update: 2019-12-07 12:04 GMT

ಉಡುಪಿ, ಡಿ.7: ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ಹಾಗೂ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ದಕ್ಷಿಣ ವಲಯ ಅಂತರ ವಿವಿ ಪುರುಷರ ಕಬಡ್ಡಿ ಚಾಂಪಿಯನ್‌ ಷಿಪ್ ಡಿ.11ರಿಂದ 14ರವರೆಗೆ ತೆಂಕನಿಡಿಯೂರಿನ ಸರಕಾರಿ ಪ್ರಥಮ ದರ್ಜೆ ಕಾಲೇಜು ಮೈದಾನದಲ್ಲಿ ನಡೆಯಲಿದೆ ಎಂದು ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಟೂರ್ನಿಯ ಸಂಘಟನಾ ಕಾರ್ಯದರ್ಶಿ ಡಾ.ಕಿಶೋರ್‌ ಕುಮಾರ್ ಸಿ.ಕೆ. ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಕಿಶೋರ್ ಕುಮಾರ್, ಇದೇ ಮೊದಲ ಬಾರಿಗೆ ದಕ್ಷಿಣ ವಲಯದ ಆರು ರಾಜ್ಯಗಳ 100 ವಿವಿ ತಂಡಗಳು ಇದರಲ್ಲಿ ಪಾಲ್ಗೊಳ್ಳಲಿವೆ. ಹೀಗಾಗಿ ಸುಮಾರು 1500 ಕ್ರೀಡಾಪಟುಗಳು ಹಾಗೂ 200 ರಿಂದ 300 ಮಂದಿ ಅಧಿಕಾರಿಗಳು ನಾಲ್ಕು ದಿನಗಳ ಚಾಂಪಿಯನ್‌ಶಿಪ್‌ನಲ್ಲಿ ಪಾಲ್ಗೊಳ್ಳುವರು ಎಂದರು.

ಕ್ರೀಡಾಕ್ಷೇತ್ರದಲ್ಲಿ ಮಂಗಳೂರು ವಿವಿ ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒಳ್ಳೆಯ ಸಾಧನೆಯನ್ನು ಮಾಡಿದೆ. ಇದೀಗ ರಾಷ್ಟ್ರೀಯ ಮಟ್ಟದ ಕ್ರೀಡಾಕ್ಷೇತ್ರದಲ್ಲಿ ಮಂಗಳೂರು ವಿವಿ, ದೇಶದ 800ಕ್ಕೂ ಅಧಿಕ ವಿವಿಗಳಲ್ಲಿ ಆರನೇ ಸ್ಥಾನದಲ್ಲಿದೆ ಎಂದು ಡಾ.ಕುಮಾರ್ ವಿವರಿಸಿದರು.

ಕಬಡ್ಡಿ ಸ್ಪರ್ಧೆಗಳಿಗಾಗಿ ಈಗಾಗಲೇ ತೆಂಕನಿಡಿಯೂರು ಕಾಲೇಜು ಮೈದಾನದಲ್ಲಿ ನಾಲ್ಕು ಮ್ಯಾಟ್ ಅಂಕಣಗಳನ್ನು ತಯಾರು ಗೊಳಿಸಲಾಗಿದೆ. ಸ್ಪರ್ಧೆಯ ಮೊದಲ ದಿನವಾದ ಡಿ.11ಬುಧವಾರದಂದು ಬೆಳಗ್ಗೆ 9:30ರಿಂದ 50ಕ್ಕೂ ಅಧಿಕ ಪಂದ್ಯಗಳು ನಡೆಯಲಿವೆ. ಪಂದ್ಯಗಳು ಹೊನಲು ಬೆಳಕಿನಲ್ಲಿ ರಾತ್ರಿ 10ಗಂಟೆಯವರೆಗೂ ನಡೆಯಲಿದೆ ಎಂದರು.

ಚಾಂಪಿಯನ್‌ಷಿಪ್‌ನ್ನು ಡಿ.11ರ ಸಂಜೆ 6 ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ರಾಜ್ಯ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಉದ್ಘಾಟಿಸಲಿದ್ದಾರೆ. ರಾಜ್ಯ ಯುವಜನ ಸಬಲೀಕರಣ ಹಾಗೂ ಕ್ರೀಡಾ ಸಚಿವ ಕೆ.ಎಸ್.ಈಶ್ವರಪ್ಪ, ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಹಾಗೂ ಇತರ ಗಣ್ಯರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಕೆ.ರಘುಪತಿ ಭಟ್ ವಹಿಸಲಿದ್ದಾರೆ.
ಸಮಾರೋಪ ಸಮಾರಂಭವು ಡಿ.14ರ ಶನಿವಾರ ಸಂಜೆ 5 ಗಂಟೆಗೆ ನಡೆಯಲಿದೆ.

ಸಂಸದೆ ಶೋಭಾ ಕರಂದ್ಲಾಜೆ, ಡಾ.ಎನ್.ವಿಜಯ ಬಲ್ಲಾಳ್, ಪ್ರಮೋದ್ ಮಧ್ವರಾಜ್, ವಿವಿಯ ಕುಲಸಚಿವ ಪ್ರೊ.ಎ.ಎಂ.ಖಾನ್, ಡಾ.ಅಪ್ಪಾಜಿ ಗೌಡ, ಡಾ.ಮೋಹನ ಆಳ್ವ ಮುಂತಾದವರು ಉಪಸ್ಥಿತರಿರುವರು. ಟೂರ್ನಿಯ ಕ್ವಾರ್ಟರ್ ಫೈನಲ್‌ವರೆಗಿನ ಪಂದ್ಯಗಳು ನಾಕೌಟ್ ಮಾದರಿಯಲ್ಲಿ ನಡೆಯಲಿದ್ದು, ಸೆಮಿಫೈನಲ್ ಬಳಿಕ ಲೀಗ್ ಆಧಾರದಲ್ಲಿ ಪಂದ್ಯಗಳು ನಡೆಯಲಿವೆ. ಸೆಮಿಫೈನಲ್‌ಗೇರಿದ ನಾಲ್ಕು ತಂಡಗಳೂ ಉಡುಪಿಯಲ್ಲೇ ನಡೆಯುವ ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ ಎಂದು ಡಾ.ಕಿಶೋರ್‌ಕುಮಾರ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಬಾಲಕೃಷ್ಣ ಎಸ್.ಹೆಗ್ಡೆ, ಟೂರ್ನಿಯ ಸಂಚಾಲಕ ಹಾಗೂ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಡಾ.ರಾಮಚಂದ್ರ ಪಾಟ್ಕರ್, ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಆನಂದ ಪಿ.ಸುವರ್ಣ ಹಾಗೂ ಜಿಲ್ಲಾ ಯುವಜನ ಸೇವಾ ಹಾಗೂ ಕ್ರೀಡಾಧಿಕಾರಿ ಡಾ.ರೋಶನ್ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

ಉಡುಪಿಯಲ್ಲೇ ಅಖಿಲ ಭಾರತ ಟೂರ್ನಿ

ದಕ್ಷಿಣ ವಲಯ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿಯ ಬಳಿಕ ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಟೂರ್ನಿಗೂ ಉಡುಪಿಯೇ ಆತಿಥ್ಯ ವಹಿಸಿಕೊಳ್ಳಲಿದೆ ಎಂದು ಡಾ.ಕಿಶೋರಕುಮಾರ್ ತಿಳಿಸಿದರು. ಮಂಗಳೂರು ವಿವಿ ಹಾಗೂ ಪೂರ್ಣಪ್ರಜ್ಞ ಕಾಲೇಜುಗಳ ಜಂಟಿ ಆತಿಥೇಯತ್ವದಲ್ಲಿ ಅಖಿಲ ಭಾರತ ಅಂತರ ವಿವಿ ಪುರುಷರ ಕಬಡ್ಡಿ ಡಿ.18ರಿಂದ 21ರವರೆಗೆ ಪೂರ್ಣಪ್ರಜ್ಞ ಕಾಲೇಜು ಮೈದಾನದಲ್ಲಿ ನಡೆಯಲಿದೆ. ಇದಕ್ಕಾಗಿ ಎಲ್ಲಾ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದವರು ತಿಳಿಸಿದರು.

ದೇಶದ ನಾಲ್ಕು ವಲಯಗಳಿಂದ ಅಗ್ರ ನಾಲ್ಕು ತಂಡಗಳು ಈ ಟೂರ್ನಿಯಲ್ಲಿ ಸ್ಪರ್ಧಿಸುವ ಅರ್ಹತೆ ಪಡೆದಿದ್ದು, ದೇಶದ ಒಟ್ಟು 16 ಬಲಿಷ್ಟ ವಿವಿ ತಂಡಗಳು ಇದರಲ್ಲಿ ಸ್ಪರ್ಧಿಸಲಿವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News