ಪೌರತ್ವ ತಿದ್ದುಪಡಿ ಮಸೂದೆಗೆ ಎಸ್‌ಡಿಪಿಐ ಖಂಡನೆ : ಇಲ್ಯಾಸ್ ತುಂಬೆ

Update: 2019-12-19 06:33 GMT

ಮಂಗಳೂರು : ಕೇಂದ್ರ ಸರ್ಕಾರವು ಮಂಡಿಸಿರುವ ಪೌರತ್ವ ತಿದ್ದುಪಡಿ ಮಸೂದೆಯು ಭಾರತೀಯ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ಖಂಡಿಸಿದೆ.

ಸುದ್ದಿಗೋಷ್ಠಿಯಲ್ಲಿಂದು ಈ ಬಗ್ಗೆ ವಿರೋಧ ವ್ಯಕ್ತಪಡಿಸಿದ ಎಸ್‌ಡಿಪಿಐ ರಾಜ್ಯ ಘಟಕದ ಅಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರ ವಲಸಿಗರಿಗೆ ಭಾರತೀಯ ಪೌರತ್ವ ನೀಡುವ, ತಿದ್ದುಪಡಿ ಮಸೂದೆಗೆ ಕೇಂದ್ರ ಸಂಪುಟ ಸಭೆ ಅನುಮೋದನೆ ನೀಡಿದೆ. 1955ರ ಪೌರತ್ವ ಕಾಯ್ದೆ ಅನುಸಾರ, ಅಫ್ಘಾನಿಸ್ತಾನ, ಬಾಂಗ್ಲಾ ದೇಶ ಹಾಗೂ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಾಗಿರುವ ಹಿಂದೂ, ಸಿಖ್, ಬೌದ್ಧ, ಜೈನ, ಪಾರ್ಸಿ ಹಾಗೂ ಕ್ರೈಸ್ತ ಧರ್ಮೀಯ ವಲಸಿಗರು ಭಾರತದಲ್ಲಿ 12 ಅಥವಾ ಅದಕ್ಕಿಂತ ಹೆಚ್ಚು ವರ್ಷ ವಾಸವಿದ್ದಲ್ಲಿ ಮಾತ್ರ ಭಾರತೀಯ ಪೌರತ್ವ ಪಡೆಯಲು ಅರ್ಹರಾಗಿದ್ದಾರೆ. ಆದರೆ ಈ ಕಾಯ್ದೆಗೆ ತಿದ್ದುಪಡಿಯಲ್ಲಿ 6 ವರ್ಷ ವಾಸವಿದ್ದರೆ ಪೌರತ್ವ ಪಡೆಯಲು ಅರ್ಹರಾಗುತ್ತಾರೆ ಎಂದು ಹೇಳಿದರು.

ಮಾತ್ರವಲ್ಲದೆ, ಈ ಕಾಯ್ದೆಯಲ್ಲಿ ಮುಸ್ಲಿಮರನ್ನು ಹೊರತುಪಡಿಸಿರುವುದು ಸಂವಿಧಾನದ ಸಮಾನ ಹಕ್ಕುಗಳ ಆಶಯಕ್ಕೆ ವಿರುದ್ಧವಾಗಿದೆ. ಇದು ಮುಸ್ಲಿಮರನ್ನು ನಿರ್ಬಂಧಿಸುವ ಹಾಗೂ ಜಾತ್ಯತೀತ ಭಾರತವನ್ನು ಕೋಮು ಆಧಾರಿತ ರಾಷ್ಟ್ರ ಮಾಡುವ ಷಡ್ಯಂತ್ರ ಎಂದು ಅವರು ಆರೋಪಿಸಿದರು.

ಅಸ್ಸಾಂ ಹಾಗೂ ಈಶಾನ್ಯ ಭಾಗದ ರಾಜ್ಯಗಳ ಜನರು ಈ ಮಸೂದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅಸ್ಸಾಂನಲ್ಲಿ ಎನ್‌ಆರ್ ಸಿ  (ರಾಷ್ಟ್ರೀಯ ನಾಗರಿಕರ ದಾಖಲೆ)ಯನ್ನು ಸುಮಾರು 62 ಸಾವಿರ ಮಾನವ ದಿನಗಳು ಹಾಗೂ 1,600 ಕೋಟಿ ಖರ್ಚು ಮಾಡಿ ಮಾಡಲಾಗಿತ್ತು.. ಇದರನ್ವಯ ಅಲ್ಲಿರುವ 19 ಲಕ್ಷ ಜನರನ್ನು ಹೊರಗಿಡಲಾಯಿತು. ಈ ಪೈಕಿ 14 ಲಕ್ಷಕ್ಕಿಂತಲೂ ಹೆಚ್ಚು ಮುಸ್ಲಿಮೇತರರೇ ಇದ್ದಾರೆ ಎಂದು ಅವರು ವಿವರಿಸಿದರು.

ಅಫ್ಘಾನಿಸ್ತಾ, ಬಾಂಗ್ಲಾ, ಪಾಕಿಸ್ತಾನದಲ್ಲಿನ ನಿರಾಶ್ರಿತರಿಗೆ ಪೌರತ್ವ ನೀಡುತ್ತಾರೆ. ಆದರೆ, ಮ್ಯಾನ್‌ಮಾರ್ ನಿರಾಶ್ರಿತರು ಮುಸ್ಲಿಮರಾದ ಕಾರಣ ಪೌರತ್ವದಿಂದ ವಂಚಿತರಾಗುತ್ತಾರೆ. ಇದು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜಿುವ ಕುತಂತ್ರ ಎಂದು ಟೀಕಿಸಿದರು.

ಬಾಬರಿ ಧ್ವಂಸ ಪ್ರಕರಣದಲ್ಲಿ ಅನ್ಯಾಯ

27 ವರ್ಷ ಕಳೆದರೂ ಅಯೋಧ್ಯಾ ಪ್ರಕರಣದಲ್ಲಿ ಸಮರ್ಪಕ ನ್ಯಾಯ ಸಿಗದೇ ಇರುವುದು ವಿಪರ್ಯಾಸ. ಸಾಕ್ಷಿ, ದಾಖಲೆಗಳನ್ನು ಪರಿಶೀಲಿಸಿದ ಬಳಿಕವೂ ಸುಪ್ರೀಂ ಕೋರ್ಟ್ ಬಾಬರಿ ಮಸೀದಿ ಜಾಗವನ್ನು ರಾಮಲಲ್ಲಾಗೆ ನೀಡಿರುವುದ ಅನ್ಯಾಯ. ತೀರ್ಪು ಏಕಪಕ್ಷೀಯವಾಗಿದ್ದು, ಬಾಬರಿ ಧ್ವಂಸ ಪ್ರಕರಣದಲ್ಲಿ ಲಿಬರ್‌ಹಾನ್ ಆಯೋಗ ಹೆಸರಿಸಿದ 68 ಆರೋಪಿಗಳಿಗೂ ಶಿಕ್ಷೆ ನೀಡಿಲ್ಲ ಎಂದು ದೂರಿದರು.

ಎಸ್‌ಡಿಪಿಐ ರಾಜ್ಯ ಘಟಕದ ಕಾರ್ಯದರ್ಶಿ ಅಶ್ರಫ್ ಮಾಚಾರ್, ಜಿಲ್ಲಾ ಘಟಕದ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಮುನೀಬ್ ಬೆಂಗ್ರೆ ಉಪಸ್ಥಿತರಿದ್ದರು.

ಪೊಲೀಸರಿಂದ ತಾರತಮ್ಯ

ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ಮುಸ್ಲಿಂ ವಿರೋಧಿ ನಿಲುವು ಅನುಸರಿಸುತ್ತಿದ್ದಾರೆ ಎಂದು ಎಸ್‌ಡಿಪಿಐ ಜಿಲ್ಲಾ ಘಟಕದ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ದೂರಿದರು.

ಬಾಬರಿ ಮಸೀದಿ ಧ್ವಂಸ ಹಾಗೂ ಜಾಗವನ್ನು ರಾಮಲಲ್ಲಾಗೆ ನೀಡಿದ ವಿಚಾರದಲ್ಲಿ ನ್ಯಾಯ ಕೋರಿ ಪ್ರತಿಭಟನಾ ಪ್ರದರ್ಶನ ನಡೆಸಲು ನಮಗೆ ಅವಕಾಶ ನೀಡಲಿಲ್ಲ. ಈ ಕುರಿತು ಪತ್ರಿಕಾಗೋಷ್ಠಿ ನಡೆಸಲು ಎರಡು ಬಾರಿ ಉದ್ದೇಶಿಸಿದ್ದರೂ, ಅನುಮತಿ ನಿರಾಕರಿಸಿದರು. ಆದರೆ, ಇದೇ ಸಂದರ್ಭದಲ್ಲಿ ಬಾಬರಿ ಮಸೀದಿ ಧ್ವಂಸದಲ್ಲಿ ಭಾಗವಹಿಸಿದ್ದ ಕರಸೇಕವರಿಗೆ ಕಲ್ಲಡ್ಕ, ರಥಬೀದಿ ಮತ್ತಿತರೆಡೆಗಳಲ್ಲಿ ಸನ್ಮಾನಿಸಿದ್ದಾರೆ. ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. ಸೆಕ್ಷನ್ 144 ಜಾರಿಯಲ್ಲಿ ಇದ್ದಾಗಲೇ ಕಾರ್ಯಕ್ರಮ ಕೈಗೊಂಡವರ ಬಗ್ಗೆಯೂ ಕ್ರಮಕೈಗೊಂಡಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News