ಉಪ್ಪಿನಂಗಡಿ: ಕಿರು ಹೊಳೆಯ ಕಿಂಡಿ ಅಣೆಕಟ್ಟು ಉದ್ಘಾಟನೆ

Update: 2019-12-07 12:23 GMT

ಉಪ್ಪಿನಂಗಡಿ: ಪಶ್ಚಿಮ ವಾಹಿನಿ ಯೋಜನೆಗಳ ಮೂಲಕ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ಅಂತರ್ಜಲ ಅಭಿವೃದ್ಧಿಗೆ ರಾಜ್ಯ ಸರಕಾರ ಆದ್ಯತೆ ನೀಡುತ್ತಿದೆ. ಇದರಿಂದ ಜಲ ಸಂಪನ್ಮೂಲವನ್ನು ಕ್ರೂಢೀಕರಿಸುವ ಕೆಲಸ ಒಂದೆಡೆಯಾದರೆ, ಇನ್ನೊಂದೆಡೆ ಎರಡೂ ಕಡೆಗಳಿಗೆ ಸಂಪರ್ಕ ಕೂಡಾ ಸಾಧ್ಯವಾಗುತ್ತದೆ. ಕಡಿಮೆ ಖರ್ಚಿನಲ್ಲಿ ಉತ್ತಮ ಪ್ರಯೋಜನ ನೀಡುವ ಯೋಜನೆ ಇದಾಗಿದ್ದು, ಇಂತಹ ಯೋಜನೆಗಳನ್ನು ಕರಾವಳಿಗೆ ಇನ್ನಷ್ಟು ಅನುಷ್ಠಾನಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಸಚಿವ ಜೆ.ಸಿ. ಮಾಧುಸ್ವಾಮಿ ತಿಳಿಸಿದರು.

ಸಣ್ಣ ನೀರಾವರಿ ಹಾಗೂ ಅಂತರ್ಜಲ ಅಭಿವೃದ್ಧಿ ಇಲಾಖೆಯ ವತಿಯಿಂದ ಉಪ್ಪಿನಂಗಡಿ ಗ್ರಾಮದ ನಾಲಾಯಗುಂಡಿ ಎಂಬಲ್ಲಿ ಕಿರು ಹೊಳೆಗೆ ಒಂದು ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾದ ಕಿಂಡಿ ಅಣೆಕಟ್ಟನ್ನು ಶನಿವಾರ ಉದ್ಘಾಟಿಸಿ, ಅಣೆಕಟ್ಟಿನಲ್ಲಿ ಸಂಗ್ರಹವಾದ ನೀರಿಗೆ ಬಾಗಿನ ಅರ್ಪಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮನುಷ್ಯರಿಗೆ ಪ್ರಕೃತಿ, ನೆಲ- ಜಲದ ಮೇಲೆ ಪ್ರೀತಿ ಇರಬೇಕು. ನೆಲ-ಜಲವನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸುವ ಕೆಲಸ ನಡೆಯಬೇಕು. ಅಂತರ್ಜಲ ಅಭಿವೃದ್ಧಿಯೊಂದಿಗೆ ವೃಕ್ಷದ ಬೇರಿಗೆ ತಂಪನ್ನು ನೀಡುವ ಕೆಲಸವಾದಾಗ ಮಾತ್ರ ನಮ್ಮ ಜೀವನ ಪಾವನವಾಗಲು ಸಾಧ್ಯ. ಒಂದು ಟಿಎಂಸಿ ನೀರಿಗೂ ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುವ ಸ್ಥಿತಿಯಿದೆ ನಮಗಿದೆ. ಆದರೆ ಈ ಬಾರಿಯ ಮಳೆಗಾಲದಲ್ಲಿ ಮೊದಲ ಬಾರಿಯ ಅತೀವೃಷ್ಟಿಯಿಂದ ಸುಮಾರು 80 ಟಿಎಂಸಿ ಹಾಗೂ ಎರಡನೇ ಬಾರಿ ಸುಮಾರು 40ರಿಂದ 50 ನೀರು ನಮ್ಮ ರಾಜ್ಯದಿಂದ ಹೊರಗೆ ಹರಿದು ಹೋಗಿದೆ. ನೀರನ್ನು ಯಾವತ್ತೂ ಸುಮ್ಮನೆ ಹರಿದು ಹೋಗಲು ಬಿಡದೇ ಅದನ್ನು ಸಂರಕ್ಷಿಸಿ ಅಂತರ್ಜಲ ವೃದ್ಧಿಮಾಡುವ ಯೋಜನೆಗಳನ್ನು ನಾವು ಹಾಕಿಕೊಳ್ಳಬೇಕು. ಅತೀ ವೃಷ್ಠಿಯಿಂದ ಜಿಲ್ಲೆಯಲ್ಲಿಯೂ ಹಲವು ಕಡೆ ಸಾಕಷ್ಟು ಹಾನಿ ಸಂಭವಿಸಿದ್ದು, ಆ ಪ್ರದೇಶದಲ್ಲಿ ತಕ್ಷಣದ ಕಾಮಗಾರಿಗಳನ್ನು ನಡೆಸಲು ಸರಕಾರ ಮೊದಲ ಆದ್ಯತೆ ನೀಡಿದೆ. ಬಳಿಕ ಇನ್ನುಳಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಿದೆ. ಆದ್ದರಿಂದ ಕಿಂಡಿ ಅಣೆಕಟ್ಟುಗಳ ನಿರ್ಮಾಣದ ಅಗತ್ಯತೆ ಎಲ್ಲಿದೆಯೋ ಅದನ್ನು ಅಧಿಕಾರಿಗಳು ತಿಳಿದುಕೊಂಡು ಯೋಜನೆಯ ಅಂದಾಜುಪಟ್ಟಿ ಕಳುಹಿಸಿ ಆ ಯೋಜನೆಗಳನ್ನು ಅನುಷ್ಠಾನಿಸಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ಬೇಸಿಗೆಯಲ್ಲಿ ನೀರಿಲ್ಲದೆ ಬಣಗುಡುತ್ತಿದ್ದ ಈ ಪ್ರದೇಶ ಇಂದು ನಂದನವನದಂತೆ ಗೋಚರಿಸುತ್ತಿದೆ. ಒಂದೆಡೆ ಇಲ್ಲೀಗ ಉಪ್ಪಿನಂಗಡಿ- ಹಿರೇಬಂಡಾಡಿ ಗ್ರಾಮಗಳ ಸಂಪರ್ಕ ಸಾಧ್ಯವಾದರೆ, ಇನ್ನೊಂದೆಡೆ ಸಮೃದ್ಧ ಜಲರಾಶಿ ಶೇಖರಗೊಂಡು ಅಂತರ್ಜಲ ವೃದ್ಧಿಯಾಗುತ್ತದೆಯಲ್ಲದೆ, ಸುತ್ತಮುತ್ತಲ ರೈತರಿಗೆ ಪ್ರಯೋಜಕಾರಿಯಾಗಲಿದೆ. ಜಿಲ್ಲೆಯಲ್ಲಿ ವಾರ್ಷಿಕವಾಗಿ ಸುಮಾರು 5 ಸಾವಿರ ಮಿ.ಮೀ. ಮಳೆಯಾದರೂ ಬೇಸಿಗೆಯಲ್ಲಿ ನೀರಿಗೆ ಮಾತ್ರ ಬರ ಬರುತ್ತದೆ. ಆದ್ದರಿಂದ ಪಶ್ಚಿಮ ವಾಹಿನಿ ಯೋಜನೆಗಳ ಮೂಲಕ ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಿ ನೀರು ಶೇಖರಣೆಗೆ ಆದ್ಯತೆ ನೀಡಲಾಗುವುದು ಎಂದರು.

ವೇದಿಕೆಯಲ್ಲಿ ತಿಪಟೂರು ಶಾಸಕ ಬಿ.ಸಿ. ನಾಗೇಶ್, ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮೀನಾಕ್ಷಿ ಶಾಂತಿಗೋಡು, ಪುತ್ತೂರು ತಾ.ಪಂ. ಉಪಾಧ್ಯಕ್ಷೆ ಲಲಿತಾ ಈಶ್ವರ್, ಉಪ್ಪಿನಂಗಡಿ ಗ್ರಾ.ಪಂ. ಅಧ್ಯಕ್ಷ ಅಬ್ದುರ್ರಹ್ಮಾನ್ ಕೆ., ಉಪಾಧ್ಯಕ್ಷೆ ಹೇಮಲತಾ ಶೆಟ್ಟಿ, ಜಿ.ಪಂ. ಸದಸ್ಯೆ ಶಯನಾ ಜಯಾನಂದ್, ತಾ.ಪಂ. ಸದಸ್ಯರಾದ ಮುಕುಂದ ಬಜತ್ತೂರು, ಸಾಜ ರಾಧಾಕೃಷ್ಣ ಆಳ್ವ, ಹರೀಶ್ ಬಿಜತ್ರೆ, ಸುಜಾತಕೃಷ್ಣ ಆಚಾರ್ಯ, ಮೀನಾಕ್ಷಿ ಮಂಜುನಾಥ್, ಎಪಿಎಂಸಿ ಅಧ್ಯಕ್ಷ ದಿನೇಶ್ ಮೆದು, ಬಜತ್ತೂರು ಗ್ರಾ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಪಂರ್ದಾಜೆ, ಹಿರೇಬಂಡಾಡಿ ಗ್ರಾ.ಪಂ. ಅಧ್ಯಕ್ಷ ಹಮ್ಮಬ್ಬ ಶೌಕತ್ ಅಲಿ, ಉಪ್ಪಿನಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ಯಶವಂತ ಜಿ., ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಮೈಸೂರು ವೃತ್ತದ ಅಧೀಕ್ಷಕ ಅಭಿಯಂತರ ರಾಜಶೇಖರ ಯಡಹಳ್ಳಿ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಗೋಪಾಲ ಹೆಗ್ಡೆ, ಚಂದ್ರಶೇಖರ ಮಡಿವಾಳ, ಯು.ಟಿ. ತೌಸೀಫ್, ಇಬ್ರಾಹೀಂ, ಸುಂದರಿ, ಚಂದ್ರಾವತಿ, ಕವಿತಾ,  ಸಿಎ ಬ್ಯಾಂಕ್ ನಿರ್ದೇಶಕ ರಾಮಚಂದ್ರ ಮಣಿಯಾಣಿ, ಬಜತ್ತೂರು ಗ್ರಾ.ಪಂ. ಉಪಾಧ್ಯಕ್ಷೆ ಸುಜಾತ, ಸದಸ್ಯರಾದ ಮಾಧವ ಒರುಂಬೋಡಿ, ರಾಜೇಶ್ ಪಿಜಕ್ಕಳ, ಆನಂದ ಕೆ.ಎಸ್., ಗಣೇಶ್ ಕಿಂಡೋವು, ಶಶಿತಾ, ಚಂಪಾ, ಉಮೇಶ್ ಓಡ್ರಪಾಲು, ಸಿಎ ಬ್ಯಾಂಕ್ ಉಪಾಧ್ಯಕ್ಷ ಯತೀಶ್ ಶೆಟ್ಟಿ, ತಾ.ಪಂ. ಮಾಜಿ ಅಧ್ಯಕ್ಷ ಶಂಭು ಭಟ್, 34ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ರತಿ ಎಸ್. ನಾಯ್ಕ, ಪ್ರಮುಖರಾದ ಜಗದೀಶ್ ಶೆಟ್ಟಿ, ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಯು.ಜಿ. ರಾಧಾ, ವೆಂಕಟ್ರಮಣ ಭಟ್ ಪಾತಾಳ, ಉದಯಶಂಕರ ಭಟ್ ಪದಾಳ, ರಾಧಾಕೃಷ್ಣ ಭಟ್ ಬೊಳ್ಳಾವು,   ಕಂಗ್ವೆ ವಿಶ್ವನಾಥ ಶೆಟ್ಟಿ, ಉಷಾಚಂದ್ರ ಮುಳಿಯ, ಲೊಕೇಶ್ ಬೆತ್ತೋಡಿ, ಉದಯ ಅತ್ರೆಮಜಲು, ಕೇಶವ ರಂಗಾಜೆ, ಶೇಖರ ಗೌಂಡತ್ತಿಗೆ, ಯು.ರಾಮ, ಅರವಿಂದ್ ಭಂಡಾರಿ, ಕೃಷ್ಣಪ್ಪ ಗೌಡ ಬೊಳ್ಳಾವು, ಎಲ್ಯಣ್ಣ ಗೌಡ ಬೊಳ್ಳಾವು, ಗಣೇಶ್ ಕುಲಾಲ್, ಜಯಂತ ಪೊರೋಳಿ, ಪ್ರಶಾಂತ ಪೆರಿಯಡ್ಕ, ಸದಾನಂದ ನೆಕ್ಕಿಲಾಡಿ ಮತ್ತಿತರರು ಉಪಸ್ಥಿತರಿದ್ದರು.

ಇಲಾಖೆಯ ಕಾರ್ಯಪಾಲಕ ಅಭಿಯಂತರ ಗೋಕುಲ್‍ದಾಸ್ ಸ್ವಾಗತಿಸಿದರು. ಬಿಜೆಪಿ ಪುತ್ತೂರು ಗ್ರಾಮಾಂತರ ಮಂಡಲ ಯುವಮೋರ್ಚಾ ಅಧ್ಯಕ್ಷ ಸುನೀಲ್ ಕುಮಾರ್ ದಡ್ಡು ವಂದಿಸಿದರು. ಸಹಾಯಕ ಅಭಿಯಂತರ ಆನಂದ್ ಬಂಜನ್ ಕಾರ್ಯಕ್ರಮ ನಿರೂಪಿಸಿದರು. ಉಪ್ಪಿನಂಗಡಿ ಗ್ರಾ.ಪಂ. ಸದಸ್ಯರಾದ ಸುರೇಶ್ ಅತ್ರೆಮಜಲು, ರಮೇಶ್ ಬಂಡಾರಿ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಕರಾವಳಿಯಲ್ಲಿ ಉತ್ತಮ ಜಲಸಂಪತ್ತಿದೆ. ಇದನ್ನು ಇಂಗಿಸಿ ಅಂತರ್ಜಲ ವೃದ್ಧಿ ಮಾಡುವ ಕೆಲಸವಾಗಬೇಕಲ್ಲದೆ, ಘಟ್ಟದ ಮೇಲಿನವರಾದ ನಮ್ಮ ಕಡೆಗೆ ನಿಮ್ಮ ಕಡೆಯಿಂದ ಸ್ವಲ್ಪ ನೀರು ಹರಿಯುವಂತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ ಎಂದು ಸಚಿವ ಮಾಧುಸ್ವಾಮಿ ಹೇಳುವ ಮೂಲಕ ಎತ್ತಿನ ಯೋಜನೆಗೆ ಸಹಕರಿಸಿ ಎಂಬ ಮಾತನ್ನು ಪರೋಕ್ಷವಾಗಿ ಹೇಳಿದರು. ಈ ಸಂದರ್ಭ ಇಲ್ಲ... ಇಲ್ಲ... ಎಂಬ ಮಾತುಗಳು ಸಭಿಕರಿಂದ ಕೇಳಿ ಬಂತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News