ಕತರ್: ಅಮೆರಿಕ-ತಾಲಿಬಾನ್ ಮಾತುಕತೆಗೆ ಮತ್ತೆ ಚಾಲನೆ?

Update: 2019-12-07 14:28 GMT

ದೋಹಾ (ಕತರ್), ಡಿ. 7: ಅಫ್ಘಾನಿಸ್ತಾನದ ಭಯೋತ್ಪಾದಕ ಸಂಘಟನೆ ತಾಲಿಬಾನ್ ಜೊತೆಗಿನ ಮಾತುಕತೆಗಳನ್ನು ಅಮೆರಿಕ ಶನಿವಾರ ಕತರ್‌ನಲ್ಲಿ ಮುಂದುವರಿಸಿದೆ ಎಂದು ಅಮೆರಿಕದ ಮೂಲವೊಂದು ತಿಳಿಸಿದೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕ ನಡೆಸುತ್ತಿರುವ ಸುದೀರ್ಘ ಯುದ್ಧವನ್ನು ಕೊನೆಗೊಳಿಸುವ ಉದ್ದೇಶದ ರಾಜತಾಂತ್ರಿಕ ಪ್ರಯತ್ನಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಾತ್ತನೆ ನಿಲ್ಲಿಸಿದದ ಮೂರು ತಿಂಗಳ ಬಳಿಕ ತಾಲಿಬಾನ್ ಜೊತೆಗಿನ ಮಾತುಕತೆಗಳು ಪುನರಾರಂಭಗೊಂಡಿವೆ.

ಸೆಪ್ಟಂಬರ್‌ನಲ್ಲಿ ಅಮೆರಿಕ ಮತ್ತು ತಾಲಿಬಾನ್ ಶಾಂತಿ ಒಪ್ಪಂದವೊಂದಕ್ಕೆ ಸಹಿ ಹಾಕುವ ಹೊಸ್ತಿಲಲ್ಲಿದ್ದವು. ಆ ಒಪ್ಪಂದದ ಪ್ರಕಾರ, ತಾಲಿಬಾನ್‌ನ ಭದ್ರತೆಯ ಖಾತರಿಗೆ ಪ್ರತಿಯಾಗಿ, ಅಫ್ಘಾನಿಸ್ತಾನದಲ್ಲಿರುವ ಸಾವಿರಾರು ಅಮೆರಿಕ ಸೈನಿಕರು ತಮ್ಮ ದೇಶಕ್ಕೆ ವಾಪಸಾಗುತ್ತಿದ್ದರು.

ಅದೂ ಅಲ್ಲದೆ, ತಾಲಿಬಾನ್ ಮತ್ತು ಅಫ್ಘಾನಿಸ್ತಾನ ಸರಕಾರದ ನಡುವೆ ನೇರ ಮಾತುಕತೆಗೆ ಆ ಒಪ್ಪಂದ ಅವಕಾಶ ಮಾಡಿಕೊಡುತ್ತಿತ್ತು ಹಾಗೂ, ಅಂತಿಮವಾಗಿ, ಅಫ್ಘಾನಿಸ್ತಾನದಲ್ಲಿ 18 ವರ್ಷಗಳ ಸುದೀರ್ಘ ಯುದ್ಧದ ಬಳಿಕ ಶಾಂತಿ ಒಪ್ಪಂದವೊಂದು ಜಾರಿಗೆ ಬರುವ ಸಾಧ್ಯತೆಯಿತ್ತು.

ಆದರೆ, ಅದೇ ತಿಂಗಳು, ಒಂದು ವರ್ಷವಿಡೀ ಸಾಗಿ ಬಂದಿದ್ದ ಮಾತುಕತೆ ಪ್ರಕ್ರಿಯೆಯನ್ನು ಟ್ರಂಪ್ ‘ಶೂನ್ಯ’ ಎಂದು ಘೋಷಿಸಿದರು ಹಾಗೂ ಎಲ್ಲ ಮಾತುಕತೆಗಳನ್ನು ಸ್ಥಗಿತಗೊಳಿಸಿದರು. ಕ್ಯಾಂಪ್ ಡೇವಿಡ್‌ನಲ್ಲಿರುವ ರಿಸಾರ್ಟ್‌ನಲ್ಲಿ ನಡೆಯಲಿದ್ದ ಮಾತುಕತೆಯಲ್ಲಿ ಭಾಗವಹಿಸಲು ತಾಲಿಬಾನ್‌ಗೆ ನೀಡಿದ್ದ ಆಹ್ವಾನವನ್ನು ಹಿಂದಕ್ಕೆ ಪಡೆದುಕೊಂಡರು.

ತಾಲಿಬಾನ್ ದಾಳಿಯಲ್ಲಿ ಅಮೆರಿಕ ಸೈನಿಕನೊಬ್ಬ ಹತನಾದ ಬಳಿಕ ಟ್ರಂಪ್ ಈ ನಿರ್ಧಾರಕ್ಕೆ ಬಂದಿದ್ದರು.

‘‘ತಾಲಿಬಾನ್ ಜೊತೆಗಿನ ಮಾತುಕತೆಗೆ ಅಮೆರಿಕ ದೋಹಾದಲ್ಲಿ ಇಂದು ಮರುಸೇರ್ಪಡೆಗೊಂಡಿತು. ಹಿಂಸೆಯನ್ನು ತಗ್ಗಿಸುವುದು ಹಾಗೂ ಆ ಮೂಲಕ ಅಫ್ಘಾನಿಸ್ತಾನದಲ್ಲಿ ಆಂತರಿಕ ಮಾತುಕತೆಗೆ ಬಾಗಿಲು ತೆರೆಯುವುದು ಮತ್ತು ಯುದ್ಧವಿರಾಮ ಒಪ್ಪಂದವೊಂದಕ್ಕೆ ಬರುವುದು ಈ ಮಾತುಕತೆಯ ಉದ್ದೇಶವಾಗಿದೆ’’ ಎಂದು ಅಮೆರಿಕದ ಮೂಲ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News