ಭಾರತವನ್ನು ಹಳ್ಳಿಯ ಬಾಗಿಲಲ್ಲಿ ನಿಂತು ಪರಿಭಾವಿಸಬೇಕು-ಡಾ. ನರೇಂದ್ರ ರೈ ದೇರ್ಲ

Update: 2019-12-07 14:37 GMT

ಪುತ್ತೂರು: ಭಾರತವನ್ನು ದೆಹಲಿಯಲ್ಲಿ ನಿಂತು ನೋಡುವ, ಪರಿಭಾವಿಸುವ ಕ್ರಮವಿದೆ, ಸಂಸತ್ತಿನಲ್ಲಿ, ವಿಧಾನ ಸೌಧದ ಬಾಗಿಲಲ್ಲಿ ನಿಂತು ಭಾರತವನ್ನು ನೋಡಲಾಗುತ್ತಿದೆ. ನನ್ನ ಪ್ರಕಾರ ಭಾರತವನ್ನು ಹಳ್ಳಿಯ ಬಾಗಿಲಲ್ಲಿ ನಿಂತು ನೋಡುವ, ಪರಿಭಾವಿಸುವ ಕೆಲಸವಾಗಬೇಕು. ಅಭಿವೃದ್ಧಿ ವ್ಯವಸ್ಥೆ ಎಂದಿಗೂ ಮೇಲ್ಮುಖವಾಗಿರಬೇಕು. ಹಳ್ಳಿಯಿಂದ ಡಿಲ್ಲಿಯ ಕಡೆಗೆ ಚಲಿಸಬೇಕು. ಇಂತಹ ಅಭಿವೃದ್ಧಿಯಿಂದ ಮಾತ್ರ ರಾಷ್ಟ್ರಾಭಿವೃದ್ಧಿಯ ಕಲ್ಪನೆಗಳನ್ನು ಸಮೀಕರಿಸಲು, ವ್ಯಾಖ್ಯಾನಿಸಲು, ನಿರ್ಧರಿಸಲು ಸಾಧ್ಯ. ರಾಷ್ಟ್ರದ ಅಭಿವೃದ್ಧಿಯಲ್ಲಿ ಗ್ರಾಮಾಭಿವೃದ್ಧಿಯನ್ನು ಪ್ರಧಾನ ಸ್ತರವಾಗಿ ಪರಿಗಣಿಸಬೇಕು ಎಂದು ತಾಲೂಕು ಸಾಹಿತ್ಯ ಸಮ್ಮೇಳದನ ಸರ್ವಾಧ್ಯಕ್ಷ ಡಾ. ನರೇಂದ್ರ ರೈ ದೇರ್ಲ ಹೇಳಿದರು.

ಅವರು ಕೆಯ್ಯೂರು ಜಯಕರ್ನಾಟಕ ಸಭಾಭವನ ಆವರಣದಲ್ಲಿ ನಡೆದ 19ನೆ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಇಲ್ಲಿನ ನೆಲ, ಜಲ, ಗಾಳಿಯನ್ನು ನಾವೇ ಹಾಳು ಮಾಡಿದ್ದೇವೆ. ದೆಹಲಿಯಲ್ಲಿ ಈಗ ಆಮ್ಲಜನಕ ಮಾರಾಟವಾಗುತ್ತಿದೆ. ಆಕ್ಸಿಜನ್ ಟಿನ್‍ನಲ್ಲಿ ಆಮ್ಲಜನಕ ತುಂಬಿ ಮಾರುವ ವ್ಯಾಪಾರ ನಡೆಯುತ್ತಿದೆ. ಇದೀಗ ಇದು ಶುದ್ಧ ಪರಿಶುದ್ಧ ಅನ್ನ, ನೀರು ಎಂದು ಮಾರಾಟ ಮಾಡುವ ಕೆಲಸ ಮಾಡುತ್ತಿದ್ದೇವೆ. ಮುಂದೊಂದು ದಿನ ಎತ್ತಿನ ಹೊಳೆ, ರಾಷ್ಟ್ರೀಯ ಹೆದ್ದಾರಿ, ಅಣೆಕಟ್ಟುಗಳನ್ನು ನಿರ್ಮಾಣ ಮಾಡಿದ ಗುತ್ತಿಗೆದಾರರು ಆ ಕೆಲಸ ಬಿಟ್ಟು ಅತ್ಯಂತ ಸುಲಭದ, ಲಾಭದಾಯಕವಾದ ಆಮ್ಲಜನಕ ಮಾರಾಟದ ಉದ್ಯಮವನ್ನು ಆರಂಭಿಸಬಹುದು. ಈ ಸಂಘರ್ಷ ಮತ್ತು ಸಂಕಷ್ಟದಲ್ಲಿ ದೇಶದ ರಾಜಕಾರಣಿ, ಸಾಹಿತಿ, ಪತ್ರಕರ್ತರು, ಕಲಾವಿದರು, ರೈತರು ಎಲ್ಲರೂ ಪರಿಸರವಾದಿಯಾಗದಿದ್ದಲ್ಲಿ ಭವಿಷ್ಯದಲ್ಲಿ ಅತ್ಯಂತ ಅಪಾಯ ಎದುರಿಸಬೇಕಾಗಿದೆ. ನಾವು ಉಳಿದಾಗ ಸಾಹಿತ್ಯ ಉಳಿಯುತ್ತದೆ. ನಮ್ಮೆಲ್ಲರ ಮೊದಲ ಆದ್ಯತೆ , ಉದ್ದೇಶ, ಚರ್ಚೆ ಪರಿಸರ ಹಾಗೂ ನಿಸರ್ಗದ ಪರ ಆಗಬೇಕಾಗಿದೆ ಎಂದರು.

ಇಂದು ಜನರ ಬದುಕು ಪಲ್ಲಟಕ್ಕೆ ಒಳಗಾಗಿದೆ. ಎಲ್ಲರೂ ಒಟ್ಟಾಗಿ ಬದುಕುತ್ತಿದ್ದ ನಮ್ಮಲ್ಲಿ ಪರಸ್ಪರ ಗಲಾಟೆ, ದೊಂಬಿಗಳು ನಡೆಯುತ್ತಿದೆ. ಯಾರೋ ಸಾಮಾಜಿಕ ಜಾಲತಾಣದಲ್ಲಿ ತೇಲಿ ಬಿಟ್ಟ ಎರಡು ವಾಕ್ಯಗಳಿಂದ ಪ್ರೇರಿತರಾಗಿ ಎಂ.ಎಂ. ಕಲ್ಬುರ್ಗಿಯಂತರ ಶ್ರೇಷ್ಟ ವ್ಯಕ್ತಿಯು ಕೊಲೆಯಾಗುತ್ತಾರೆ. ಇವೆಲ್ಲಾ ನವ ಮಾಧ್ಯಮಗಳ ಕೊಡುಗೆಗಳಾಗಿವೆ. ಕಾಲ, ದೇಶ, ವ್ಯಾಪ್ತಿಯ ಒಳಗಡೆ ನಾವು ಬದುಕುವ ಸಂದರ್ಭದಲ್ಲಿಯೇ ಹತ್ತಾರು ಸಮಸ್ಯೆಗಳಿರುವಾಗ ಮತ್ತು ಅವುಗಳನ್ನು ಎದುರಿಸಲು ಸಜ್ಜಾಗಬೇಕಾಗದ ಸಂದರ್ಭದಲ್ಲಿ ನಮ್ಮ ಕಾಲ, ಪರಿಧಿಯಲ್ಲಿ ನಡೆಯದ ಯಾವುದೋ ಊರಿನ ಯೋವುದೋ ಕಾಲದ ಯಾರಿಗೋ ಸಂಬಂಧಿಸಿದ ಸಮಸ್ಯೆಯೊಂದನ್ನು ತೇಲಿಬಿಡುವ ಮತ್ತು ನಮ್ಮ ಮನಸ್ಸನ್ನು ಆ ಚಕ್ರ ಸುಳಿಗೆ ಸಿಕ್ಕುವಂತೆ ಮಾಡುವ, ಮನಸ್ಸುಗಳನ್ನು ಕೆಡಿಸುವ, ಉದ್ವೇಗ, ಉದ್ರೇಕಗಳಿಗೆ, ಜಾತಿ, ಮತ, ಕೋಮು ದೊಂಬಿಗಳಿಗೆ ತುಪ್ಪ ಸುರಿಯುವ ಕೆಲಸವನ್ನು ಇಂದು ಇಂತಹ ನವ ಮಾಧ್ಯಮಗಳು ಮಾಡುತ್ತಿದೆ. ಗಾಂಧಿ ಎಂಬ ಸಾರ್ವಕಾಲಿಕ ಸತ್ಯ, ಪಠ್ಯ ಇಂದು ನಿಧಾನವಾಗಿ ಕಾಲದ ಹಿತಾಸಕ್ತಿಗೆ ಅಪಥ್ಯವಾಗಿ ಗಾಂಧಿಯನ್ನು ಕೊಂದವನೇ ಸತ್ಯವಾಗಿ ಗೋಚರವಾಗುತ್ತಿದೆ ಎಂದರು.

ಹಿರಿಯ ಪತ್ರಕರ್ತ ಈಶ್ವರ ದೈತೋಟ ಸಮಾರಂಭ ಉದ್ಘಾಟಿಸಿ ಮಾತನಾಡಿ ಕನ್ನಡ ಭಾಷೆಯು ಇತರ ಭಾಷೆಗಳಿಗೆ ಆಶ್ರಯ ನೀಡುವ ಕೆಲಸ ಮಾಡಿಕೊಂಡು ಬಂದಿದೆ. ಕನ್ನಡದಲ್ಲಿ ಇತರ ಭಾಷೆಯ ಹಲವು ಪದಗಳು ಸೇರಿಕೊಂಡಿದೆ. ಹಾಗೆಂದು ಕನ್ನಡದಲ್ಲಿ ಪದಗಳ ಕೊರತೆಯಿಲ್ಲ. ಆದರೂ ಕನ್ನಡದಲ್ಲಿ ಪದಗಳ ಕೊರತೆಯಿದೆ ಎಂಬ ಆರೋಪ, ಅಸಮಾಧಾನವಿದೆ. ಜಯಲಲಿತಾ ತಮಿಳು ನಾಡಿಗೆ ಹೋದರೂ ಕನ್ನಡ ಭಾಷೆಯನ್ನು ಮಾತನಾಡುತ್ತಿದ್ದರು. ಆದರೆ ಕೆಲವು ಕನ್ನಡಿಗರು ಹೊರಗಡೆಯಲ್ಲಿ ಕನ್ನಡ ಮಾತನಾಡಲು ಹಿಂಜರಿಕೆಯಿದೆ. ಕನ್ನಡಿಗರಿಗೆ ಕನ್ನಡದ ಪ್ರಾಮುಖ್ಯತೆ ಬಗ್ಗೆ ಹೇಳುವ ಹಕ್ಕಿದೆ ಅದು ನಮ್ಮ ಕರ್ತವ್ಯವಾಗಿದೆ ಎಂದರು.

ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಆಶಯ ನುಡಿಗಳನ್ನಾಡಿದರು. ತಾಲೂಕು  ಸಾಹಿತ್ಯ ಸಮ್ಮೇಳನದ ನಿಕಟ ಪೂರ್ವ ಅಧ್ಯಕ್ಷ ಡಾ. ಪೀಟರ್ ವಿಲ್ಸನ್ ಪ್ರಭಾಕರ್ `ಕೆಯ್ಯೂರಿನ ಕೊಯ್ಲು' ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದರು. ತಾಲೂಕು ಪಂಚಾಯತ್ ಸದಸ್ಯೆ ಭವಾನಿ ಚಿದಾನಂದ ಪುಸ್ತಕ ಪ್ರದರ್ಶನ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್.ಬಿ. ಜಯರಾಮ ರೈ ಬಳಜ್ಜ ಕಲಾ ಪ್ರದರ್ಶನ ಉದ್ಘಾಟಿಸಿದರು. ಬಿ.ವಿ. ಸೂರ್ಯನಾರಾಯಣ ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು. ತಾಲೂಕು ಕಸಾಪ ಗೌರವ ಕಾರ್ಯದರ್ಶಿ ಡಾ. ಶ್ರೀಧರ್ ಎಚ್.ಜಿ ಸಮಾರಂಭದ ಉದ್ಘಾಟಕದ ಪರಿಚಯ ಮಾಡಿದರು.

ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಎಚ್, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣು ಪ್ರಸಾದ್, ಸ್ವಾಗತ ಸಮಿತಿ ಗೌರವ ಅಧ್ಯಕ್ಷ ದಂಬೆಕಾನ ಸದಾಶಿವ ರೈ, ಸಂಚಾಲಕ ಬಿ. ರಘುನಾಥ ರೈ ಕೆಯ್ಯೂರು, ಕಾರ್ಯದರ್ಶಿ ವಿನೋದ್ ಕುಮಾರ್ ಕೆ.ಎಸ್, ವಿವಿಧ ಸಮಿತಿಗಳ ಸಂಚಾಲಕರು ಉಪಸ್ಥಿತರಿದ್ದರು.

ತಾಲೂಕು ಕಸಾಪ ಅಧ್ಯಕ್ಷ ಬಿ. ಐತ್ತಪ್ಪ ನಾಯ್ಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸ್ವಾಗತ ಸಮಿತಿ ಅಧ್ಯಕ್ಷ ಎ.ಕೆ. ಜಯರಾಮ ರೈ ಸ್ವಾಗತಿಸಿದರು. ಕೆ.ಎಸ್ ವಿನೋದ್ ಕುಮಾರ್ ವಂದಿಸಿದರು. ತಾರಾನಾಥ ರೈ ಎಂ ನಿರೂಪಿಸಿದರು. ಅಬ್ದುಲ್ ಬಶೀರ್ ಕೆ ನಿರೂಪಿಸಿದರು.

ಪೂರ್ವಾಹ್ನ ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಿಂದ ಸಾಹಿತ್ಯ ಸಮ್ಮೇಳನ  ಸ್ಥಳದ ತನಕ ಕನ್ನಡ ಭುವನೇಶ್ವರಿಯ ದಿಬ್ಬಣ ಮೆರವಣಿಗೆ ನಡೆಯಿತು. ಮೆರವಣಿಗೆಯನ್ನು ಕೆಯ್ಯೂರು ಗ್ರಾಪಂ ಅಧ್ಯಕ್ಷ ಬಾಬು ಬಿ ಉದ್ಘಾಟಿಸಿದರು. ಕೆಯ್ಯೂರು ಕರ್ನಾಟಕ ಪಬ್ಲಿಕ್ ಸ್ಕೂಲ್ ಕಾಲೇಜು ವಿಭಾಗದ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಕೆ. ಶಶಿಧರ್ ರಾವ್ ಬೊಳಿಕಳ ಕನ್ನಡ ಭುವನೇಶ್ವರಿ ಪುಷ್ಪಾರ್ಚನೆ ಮಾಡಿದರು. ಪ್ರಾಥಮಿಕ ಶಾಲಾ ವಿಭಾಗದ ಎಸ್‍ಡಿಎಂಸಿ ಅಧ್ಯಕ್ಷ ಪ್ರಫುಲ್ಲಚಂದ್ರ ದಟ್ಟ ದೀಪ ಪ್ರಜ್ವಲನ ಮಾಡಿದರು.

ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಅನಿತಾ ಹೇಮನಾಥ ಶೆಟ್ಟಿ ರಾಷ್ಟ್ರಧ್ವಜಾರೋಹಣ ನೆರವೇರಿಸಿದರು. ದ.ಕ.ಜಿಲ್ಲಾ ಕಸಾಪ ಅಧ್ಯಕ್ಷ ಎಸ್. ಪ್ರದೀಪ್ ಕುಮಾರ್ ಕಲ್ಕೂರಾ ಪರಿಷತ್ತು ಧ್ವಜಾರೋಹಣ ನೆರವೇರಿಸಿದರು. ತಾಲೂಕು ಕಸಾಪ ಅಧ್ಯಕ್ಷ ಐತ್ತಪ್ಪ ನಾಯ್ಕ್ ಸಮ್ಮೇಳನ ಧ್ವಜಾರೋಹಣ ನೆರವೇರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News