ಉಳ್ಳಾಲ ದರ್ಗಾವನ್ನು ಸರಕಾರ ಅಧೀನಕ್ಕೆ ಪಡೆದಿಲ್ಲ: ಇಬ್ರಾಹೀಂ ಗೂನಡ್ಕ ಸ್ಪಷ್ಟನೆ

Update: 2019-12-07 15:19 GMT

ಮಂಗಳೂರು, ಡಿ. 7: ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾವನ್ನು ಸರಕಾರ ವಶಕ್ಕೆ ಪಡೆದಿದೆ ಎನ್ನುವ ವದಂತಿಯ ಕುರಿತು ಸ್ಪಷ್ಟನೆ ನೀಡಿರುವ ದರ್ಗಾದ ನೂತನ ಆಡಳಿತಾಧಿಕಾರಿ ಹಾಜಿ ಇಬ್ರಾಹೀಂ ಗೂನಡ್ಕ, ದರ್ಗಾಕ್ಕೆ ತಾತ್ಕಾಲಿಕ ನೆಲೆಯಲ್ಲಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿದೆ. ಸರಕಾರ ದರ್ಗಾವನ್ನು ಅಧೀನಕ್ಕೆ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ನಗರದ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ಕರೆಯಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಅನೇಕ ಕಡೆ ಮಸೀದಿಗಳಲ್ಲಿ ಆಡಳಿತಾಧಿಕಾರಿಗಳನ್ನು ತಾತ್ಕಾಲಿಕ ನೆಲೆಯಲ್ಲಿ ನೇಮಕ ಮಾಡಿದಂತೆಯೇ ಇದೀಗ ಉಳ್ಳಾಲ ದರ್ಗಾಕ್ಕೂ ನೇಮಕ ಮಾಡಿದೆ. ಆಡಳಿತಾಧಿಕಾರಿಯಾಗಿ ನ. 25ರಿಂದಲೇ ಅಧಿಕಾರ ಸ್ವೀಕಾರ ಮಾಡಿದ್ದೇನೆ. ದರ್ಗಾದ ಹೊಸ ಆಡಳಿತ ಮಂಡಳಿ ರಚನೆ ಹೊಣೆ, ದರ್ಗಾದ ದೈನಂದಿನ ಆಡಳಿತ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿಯನ್ನು ಸರಕಾರ ನೀಡಿದೆ. ನನ್ನ ಅಧಿಕಾರಾವಧಿ ಇರುವುದು ಕೇವಲ ಆರು ತಿಂಗಳು ಮಾತ್ರ. ಸರಕಾರ ಅಪೇಕ್ಷೆಪಟ್ಟರೆ ಈ ಅವಧಿಯನ್ನು ವಿಸ್ತರಿಸಲೂ ಬಹುದು ಎಂದು ಸ್ಪಷ್ಟನೆ ನೀಡಿದರು.

ದರ್ಗಾದ ಈ ಹಿಂದಿನ ಆಡಳಿತ ಮಂಡಳಿಯನ್ನು ಸರಕಾರ ಈಗಾಗಲೇ ಬರ್ಕಾಸ್ತುಗೊಳಿಸಿದೆ. ಇನ್ನು ಆರು ತಿಂಗಳೊಳಗೆ ಹೊಸ ಆಡಳಿತ ಮಂಡಳಿಗೆ ಚುನಾವಣೆ ನಡೆಸಿ ನನ್ನ ಅಧಿಕಾರವನ್ನು ಬಿಟ್ಟು ಕೊಡಬೇಕಿದೆ. ಈ ಚುನಾವಣೆಗೆ ಮತದಾರರ ಪಟ್ಟಿ ಪ್ರಕ್ರಿಯೆ ಆರಂಭಿಸಬೇಕಿದೆ ಎಂದರು.

ಸುಳ್ಳು ಸುದ್ದಿ ನಂಬಬೇಡಿ

ಈ ನಡುವೆ ಬರ್ಕಾಸ್ತುಗೊಂಡ ಸಮಿತಿಯು ಆಡಳಿತಾಧಿಕಾರಿ ನೇಮಕಕ್ಕೆ ತಡೆ ಕೋರಿ ಹೈಕೋರ್ಟ್‌ಗೆ ಮನವಿ ಸಲ್ಲಿಸಿತ್ತು. ಆದರೆ ನ್ಯಾಯಾಲಯವು ಈ ನೇಮಕದ ಕುರಿತು ತಡೆಯಾಜ್ಞೆ ನೀಡಲು ನಿರಾಕರಿಸಿ ಸರಕಾರದ ಆದೇಶವನ್ನು ಎತ್ತಿ ಹಿಡಿದಿದೆ. ಆದರೆ ಈ ಬಗ್ಗೆ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿ ದರ್ಗಾವನ್ನು ವಶಪಡಿಸಿಕೊಳ್ಳಲು ಸರಕಾರ ಕುತಂತ್ರ ನಡೆಸುತ್ತಿದೆ ಎಂದು ಸುಳ್ಳು ಸುದ್ದಿ ಹರಡುತ್ತಿದ್ದಾರೆ. ಅಲ್ಲದೆ ವೈಯಕ್ತಿಕವಾಗಿಯೂ ನಿಂದನೆ ಮಾಡಲಾಗುತ್ತಿದೆ. ಜನರು ಸತ್ಯಾಸತ್ಯತೆ ತಿಳಿದುಕೊಳ್ಳಬೇಕಾಗಿದೆ ಎಂದು ಗೂನಡ್ಕ ಮನವಿ ಮಾಡಿದರು.

ದೂರು ಕುರಿತು ಕ್ರಮ

ಉಳ್ಳಾಲ ದರ್ಗಾದ ಹಿಂದಿನ ಆಡಳಿತ ಮಂಡಳಿ ಮೇಲೆ ಹಲವು ದೂರುಗಳು ಬಂದಿವೆ. 1.70 ಕೋಟಿ ರೂ. ಸರಕಾರಕ್ಕೆ ಪಾವತಿಸಬೇಕಾದ ಸೆಸ್ ಪಾವತಿಸಿಲ್ಲ, ಸಂಸ್ಥೆಯ ಅಧೀನದಲ್ಲಿರುವ 13 ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಎರಡು ವರ್ಷಗಳಿಂದ ವೇತನ ನೀಡಿಲ್ಲ ಎಂಬಿತ್ಯಾದಿ ದೂರುಗಳಿವೆ. ಈ ಕುರಿತು ಪರಿಶೀಲನೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ದರ್ಗಾದ ನೂತನ ಆಡಳಿತಾಧಿಕಾರಿ ಹಾಜಿ ಇಬ್ರಾಹೀಂ ಗೂನಡ್ಕ ತಿಳಿಸಿದರು.

ಡಿ.5ರಂದು ದರ್ಗಾಕ್ಕೆ ನಾನು ಭೇಟಿ ನೀಡಿದಾಗ ಬರ್ಕಾಸ್ತುಗೊಂಡ ಸಮಿತಿ ಅಧ್ಯಕ್ಷರ ಅನುಪಸ್ಥಿತಿಯಲ್ಲಿ ಸಮಿತಿಯ ಪದಾಧಿಕಾರಿ ಗಳು ಮುಖ್ಯ ಕಚೇರಿಯ ಬೀಗ ತೆರೆಯದೆ ದರ್ಗಾದ ವಠಾರದಲ್ಲೇ ಕಾಯುವಂತೆ ಮಾಡಿ ಸರಕಾರಿ ಕೆಲಸ ನಿರ್ವಹಿಸಲು ಅಡ್ಡಿಪಡಿಸಿದ್ದಾರೆ. ಅಲ್ಲದೆ, ಸಂಸ್ಥೆಗೆ ಸೇರಿದ ದಾಖಲೆಗಳನ್ನು ಹಸ್ತಾಂತರ ಮಾಡಲು 60 ದಿನಗಳ ಕಾಲಾವಕಾಶ ಕೋರಿ ವಿಳಂಬ ನೀತಿ ಅನುಸರಿಸಿದ್ದು, ಈ ಬಗ್ಗೆ ಈಗಾಗಲೇ ಜಿಲ್ಲಾಧಿಕಾರಿಗೆ ವರದಿ ನೀಡಲಾಗಿದೆ ಎಂದೂ ಗೂನಡ್ಕ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News