ಸ್ವಚ್ಛ ಪರಿಸರದಲ್ಲಿ ಜೀವಿಸುವುದು ಪ್ರತಿಯೊಬ್ಬರ ಹಕ್ಕು: ಪ್ರೊ.ಪ್ರಕಾಶ್ ಕಣಿವೆ

Update: 2019-12-07 15:06 GMT

ಉಡುಪಿ, ಡಿ.7: ಭಾರತೀಯ ಸಂವಿಧಾನವು ಎಲ್ಲರಿಗೂ ಜೀವಿಸುವ ಹಕ್ಕನ್ನು ನೀಡಿದೆ. ಅದಕ್ಕಾಗಿ ಎಲ್ಲರಿಗೂ ಸ್ವಚ್ಛ ಪರಿಸರ ಹಾಗೂ ಸಂಪನ್ಮೂಲ ಯಥೇಚ್ಛ ವಾಗಿ ಸಿಗುವಂತೆ ಆಗಬೇಕು. ಅದರಂತೆ ಈ ಪರಿಸರವನ್ನು ಉಳಿಸಿಕೊಂಡು ಮುಂದಿನ ತಲೆಮಾರಿಗೆ ಕೊಡುವ ಜವಾಬ್ದಾರಿ ಇಂದಿನ ಯುವಜನತೆ ಮೇಲೆ ಇದೆ ಎಂದು ಉಡುಪಿ ವೈಕುಂಠಾ ಬಾಳಿಗಾ ಕಾನೂನು ಕಾಲೇಜಿನ ಪ್ರಾಂಶು ಪಾಲ ಪ್ರೊ.ಪ್ರಕಾಶ್ ಕಣಿವೆ ಹೇಳಿದ್ದಾರೆ.

ಉಡುಪಿ ಎಸ್‌ಐಓ, ದೊಡ್ಡಣಗುಡ್ಡೆ ಡಾ.ಬಾಳಿಗಾ ಮೆಮೊರಿಯಲ್ ಆಸ್ಪತ್ರೆ ಮತ್ತು ಕರ್ನಾಟಕ ಸಂವೇದನಾ ಆರ್ಟ್ಸ್ ಆ್ಯಂಡ್ ಕಲ್ಚರ್ ಇವುಗಳ ಸಹಯೋಗ ದೊಂದಿಗೆ ಶನಿವಾರ ಮಣಿಪಾಲದ ಸಾಲು ಮರದ ತಿಮ್ಮಕ್ಕ ಟ್ರೀ ಪಾರ್ಕ್‌ನಲ್ಲಿ ನಡೆದ ಡಿ.30ರವರೆಗಿನ ಪರಿಸರ ಸಂರಕ್ಷಣಾ ಜಾಗೃತಿ ಅಭಿಯಾನದ ಉದ್ಘಾ ಟನಾ ಸಮಾರಂಭದಲ್ಲಿ ‘ಪಚ್ಚೆ ಗುರುತು’ ಪುಸ್ತಕ ಬಿಡುಗಡೆಗೊಳಿಸಿ ಅವರು ಮಾತನಾಡುತಿದ್ದರು.

ಪರಿಸರ ಮಾಲಿನ್ಯದಿಂದ ಆಗುವ ದುಷ್ಪಾರಿಣಾಮದಲ್ಲಿ ಯಾವುದೇ ತಾರತಮ್ಯ ಇಲ್ಲ. ಇದನ್ನು ಬಡವ ಶ್ರೀಮಂತರ, ಹಿಂದು ಮುಸ್ಲಿಮ್ ಎಂಬ ಬೇಧ ಇಲ್ಲದೆ ಎಲ್ಲರೂ ಅನುಭವಿಸಬೇಕಾಗುತ್ತದೆ. ಆದುದರಿಂದ ಎಲ್ಲರೂ ಒಂದಾಗಿ ಪರಿಸರದ ಮೇಲೆ ಆಗುವ ಅನ್ಯಾಯವನ್ನು ತಡೆಯಬೇಕಾಗಿದೆ ಎಂದರು.

ದೊಡ್ಡಣಗುಡ್ಡೆ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ನಿರ್ದೇಶಕ, ಮನೋ ತಜ್ಞ ಡಾ.ಪಿ.ವಿ.ಭಂಡಾರಿ ಮಾತನಾಡಿ, ಪರಿಸರಕ್ಕೆ ಮಾಡಿದ ತೊಂದರೆಯಿಂದ ಕಳೆದ ಬಾರಿ ಕೊಡಗು, ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಅನಾಹುತಗಳು ಸಂಭವಿಸಿತು. ಇದೆಲ್ಲ ಮಾನವ ನಿರ್ಮಿತ ದುರಂತಗಳಾಗಿವೆ. ನಾವು ಪರಿಸರಕ್ಕೆ ತೊಂದರೆ ಮಾಡಿದರೆ ಮುಂದೆ ಅವು ನಮಗೆ ತೊಂದರೆಯನ್ನು ಉಂಟು ಮಾಡುತ್ತದೆ. ಈ ಬಗ್ಗೆ ನಾವು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ಪೀಳಿಗೆ ಬಹಳಷ್ಟು ಅಪಾಯವನ್ನು ಎದುರಿಸ ಬೇಕಾಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಉಡುಪಿ ವಲಯ ಅರಣ್ಯಾಧಿಕಾರಿ ಕ್ಲಿಫರ್ಡ್ ಲೋಬೊ, ಪರಿಸರವಾದಿ ಪ್ರೇಮಾನಂದ ಕಲ್ಮಾಡಿ, ಕರ್ನಾಟಕ ರಾಜ್ಯ ಎಸ್‌ಐಓ ಅಧ್ಯಕ್ಷ ನಿಹಾಲ್ ಕಿದಿಯೂರು ಉಪಸ್ಥಿತರಿದ್ದರು.

ಸಂವೇದನಾ ಆರ್ಟ್ ಅಂಡ್ ಕಲ್ಚರಲ್ ಪೋರಂನ ಕಾರ್ಯದರ್ಶಿ ದಾನಿಶ್ ಚೆಂಡಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅಭಿಯಾನ ಸಂಚಾಲಕ ನಾಸೀರ್ ಹೂಡೆ ವಂದಿಸಿದರು. ಎಸ್‌ಐಓ ಜಿಲ್ಲಾ ಕಾರ್ಯದರ್ಶಿ ಶಾರೂಕ್ ತೀರ್ಹಳ್ಳಿ ಕಾರ್ಯಕ್ರಮ ನಿರೂಪಿಸಿದರು.

ಮರಗಳ ನಾಶದ ವಿರುದ್ಧ ಪತ್ರ ಚಳವಳಿ

ಬ್ರಹ್ಮಾವರದಲ್ಲಿ ರಸ್ತೆ ಅಭಿವೃದ್ಧಿ ಹೆಸರಿನಲ್ಲಿ ಒಂದು ಸಾವಿರಕ್ಕೂ ಅಧಿಕ ಮರಗಳ ಮಾರಣಹೋಮಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಇದರ ವಿರುದ್ಧ ಈಗಾಗಲೇ ಕುಂದಾಪುರ ಅರಣ್ಯ ಉಪಸರಂಕ್ಷಣಾಧಿಕಾರಿಯವರಿಗೆ ಪತ್ರ ಬರೆಯಲಾಗಿದೆ. ಈ ಬಗ್ಗೆ ಸಾರ್ವಜನಿಕರು ಪತ್ರ ಚಳವಳಿಯ ಮೂಲಕ ಸರಕಾರ ವನ್ನು ಎಚ್ಚರಗೊಳಿಸುವ ಕಾರ್ಯ ಮಾಡಬೇಕು. ಅಭಿವೃದ್ಧಿಯ ಹೆಸರಿನಲ್ಲಿ ಮರಗಳನ್ನು ಕಡಿಯುವುದು ಸರಿಯಲ್ಲ. ಈ ಮೂಲಕ ಸರಕಾರ ಅಮಾಯಕ ರಾಗಿರುವ ಮುಂದಿನ ಪೀಳಿಗೆಯ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ ಎಂದು ಡಾ.ಪಿ.ವಿ.ಭಂಡಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News