2020ರ ಎಚ್-1ಬಿ ವೀಸಾಗಳಿಗಾಗಿ ಎಪ್ರಿಲ್ 1ರಿಂದ ಅರ್ಜಿ ಸ್ವೀಕಾರ

Update: 2019-12-07 15:09 GMT

ವಾಶಿಂಗ್ಟನ್, ಡಿ. 7: 2021ನೇ ಸಾಲಿಗಾಗಿ ಎಚ್-1ಬಿ ಇಲೆಕ್ಟ್ರಾನಿಕ್ ನೋಂದಣಿ ಪ್ರಕ್ರಿಯೆಯನ್ನು ಅಮೆರಿಕ ಪೂರ್ಣಗೊಳಿಸಿದೆ ಹಾಗೂ ಮಾಹಿತಿ ತಂತ್ರಜ್ಞಾನ (ಐಟಿ) ಉದ್ಯೋಗಿಗಳಲ್ಲಿ ಜನಪ್ರಿಯವಾಗಿರುವ ಈ ಉದ್ಯೋಗ ವೀಸಾಕ್ಕಾಗಿ ಅರ್ಜಿಗಳನ್ನು 2020 ಎಪ್ರಿಲ್ 1ರಿಂದ ಸ್ವೀಕರಿಸಲಾಗುವುದು ಎಂದು ದೇಶದ ವಲಸೆ ಇಲಾಖೆ ಘೋಷಿಸಿದೆ.

ಭಾರತ ಮತ್ತು ಚೀನಾ ಮುಂತಾದ ದೇಶಗಳಿಂದ ಪ್ರತಿ ವರ್ಷ ಸಾವಿರಾರು ಉದ್ಯೋಗಿಗಳನ್ನು ನೇಮಿಸಲು ಅಮೆರಿಕದ ತಂತ್ರಜ್ಞಾನ ಕಂಪೆನಿಗಳು ಎಚ್-1ಬಿ ವೀಸಾಗಳನ್ನೇ ಅವಲಂಬಿಸಿವೆ.

2021ರ ಆರ್ಥಿಕ ವರ್ಷಕ್ಕಾಗಿ ವಿದೇಶಿ ಉದ್ಯೋಗಿಗಳನ್ನು ನೇಮಿಸಲು ಬಯಸುವ ಅಮೆರಿಕದ ಕಂಪೆನಿಗಳು ಎಚ್-1ಬಿ ವೀಸಾಗಳಿಗಾಗಿ ಅರ್ಜಿಗಳನ್ನು ಸಲ್ಲಿಸುತ್ತಿವೆ. ಇದಕ್ಕಾಗಿ ಕಂಪೆನಿಗಳು ಆನ್‌ಲೈನ್‌ನಲ್ಲಿ ನೋಂದಣಿ ಮಾಡಬೇಕು ಹಾಗೂ ಪ್ರತಿ ಅರ್ಜಿಗೆ 10 ಡಾಲರ್ (ಸುಮಾರು 710 ರೂಪಾಯಿ)ಗಳ ಸಂಸ್ಕರಣೆ ಶುಲ್ಕವನ್ನು ಪಾವತಿಸಬೇಕಾಗಿದೆ.

ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (ಯುಎಸ್‌ಸಿಐಎಸ್)ಯು ಮುಂದಿನ ಹಣಕಾಸು ವರ್ಷಕ್ಕಾಗಿ ಎಚ್-1ಬಿ ಅರ್ಜಿಗಳನ್ನು 2020 ಎಪ್ರಿಲ್ 1ರಿಂದ ಸ್ವೀಕರಿಸುವುದು.

 ‘‘ಇಲೆಕ್ಟ್ರಾನಿಕ್ ನೋಂದಣಿ ಪ್ರಕ್ರಿಯೆಯು ಕಾಗದ ಪತ್ರಗಳ ಕೆಲಸ ಮತ್ತು ದತ್ತಾಂಶ ವಿನಿಮಯವನ್ನು ಕಡಿತಗೊಳಿಸುವ ಮೂಲಕ ಪ್ರಕ್ರಿಯೆಯನ್ನು ನಾಟಕೀಯವಾಗಿ ಸರಳಗೊಳಿಸುತ್ತದೆ ಹಾಗೂ ಅರ್ಜಿ ಸಲ್ಲಿಸುವ ಉದ್ಯೋಗದಾತರ ಒಟ್ಟಾರೆ ವೆಚ್ಚವನ್ನು ಕಡಿಮೆಗೊಳಿಸುತ್ತದೆ’’ ಎಂದು ಯುಎಸ್‌ಸಿಐಎಸ್ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News