ಹಫೀಝ್ ಸಯೀದ್ ವಿರುದ್ಧದ ದೋಷಾರೋಪಣೆ ಮುಂದೂಡಿಕೆ

Update: 2019-12-07 15:13 GMT

ಲಾಹೋರ್, ಡಿ. 6: ಭಯೋತ್ಪಾದಕ ಕೃತ್ಯಗಳನ್ನು ನಡೆಸುವುದಕ್ಕಾಗಿ ಭಯೋತ್ಪಾದಕರಿಗೆ ಹಣ ಪೂರೈಸಿದ ಆರೋಪದಲ್ಲಿ ಲಾಹೋರ್‌ನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಿಂದ ದೋಷಾರೋಪಣೆಗೆ ಒಳಗಾಗುವುದನ್ನು ಸ್ವಲ್ಪ ಸಮಯ ಮುಂದೂಡುವಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ಹಾಗೂ ಲಷ್ಕರೆ ತಯ್ಯಬ ಭಯೋತ್ಪಾದಕ ಸಂಘಟನೆಯ ಮುಖ್ಯಸ್ಥ ಹಫೀಝ್ ಸಯೀದ್ ಶನಿವಾರ ಯಶಸ್ವಿಯಾಗಿದ್ದಾನೆ.

ವಿಚಿತ್ರವೆಂಬಂತೆ, ವಿಚಾರಣೆಯ ವೇಳೆ ಅವನ ಸಹ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಅಧಿಕಾರಿಗಳು ವಿಫಲರಾಗಿರುವುದು ಈ ಬೆಳವಣಿಗೆಗೆ ಕಾರಣವಾಗಿದೆ.

ಮುಂಬೈ ಭಯೋತ್ಪಾದಕ ದಾಳಿಯ ಸೂತ್ರಧಾರಿ ‘ಮುಕ್ತವಾಗಿ ತಿರುಗಾಡುತ್ತಿದ್ದಾನೆ ಹಾಗೂ ಪಾಕಿಸ್ತಾನದ ಆತಿಥ್ಯವನ್ನು ಸವಿಯುತ್ತಿದ್ದಾನೆ’ ಎನ್ನುವುದು ತಿಳಿದಿದೆ ಎಂದು ಭಾರತ ಹೇಳಿದ ಒಂದು ದಿನದ ಬಳಿಕ ಈ ಬೆಳವಣಿಗೆ ನಡೆದಿದೆ.

ಮುಂಬೈ ದಾಳಿಯಲ್ಲಿ ಶಾಮೀಲಾದವರ ವಿರುದ್ಧದ ಎಲ್ಲ ಪುರಾವೆಗಳನ್ನು ಭಾರತ ಪಾಕಿಸ್ತಾನಕ್ಕೆ ಸಲ್ಲಿಸಿದೆ ಹಾಗೂ ಅವರ ವಿರುದ್ಧ ಕ್ರಮ ತೆಗೆದುಕೊಳ್ಳುವುದು ಈಗ ಪಾಕಿಸ್ತಾನದ ಜವಾಬ್ದಾರಿಯಾಗಿದೆ ಎಂದು ಶುಕ್ರವಾರ ಹೊಸದಿಲ್ಲಿಯಲ್ಲಿ ವಿದೇಶ ವ್ಯವಹಾರಗಳ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಹೇಳಿದ್ದಾರೆ.

ಇಲ್ಲಿನ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವು ಇನ್ನು ಸಯೀದ್ ಮತ್ತು ಸಹ ಆರೋಪಿ ಮಲಿಕ್ ಝಫರ್ ಇಕ್ಬಾಲ್ ವಿರುದ್ಧ ದೋಷಾರೋಪಣೆ ಹೊರಿಸಲು ಡಿಸೆಂಬರ್ 11ನ್ನು ನಿಗದಿಪಡಿಸಿದೆ.

ಇನ್ನು ಡಿ. 11ರಂದು ದೋಷಾರೋಪಣೆ

‘‘ಭಯೋತ್ಪಾದಕ ಕೃತ್ಯಗಳಿಗೆ ಹಣ ಪೂರೈಸಿದ ಪ್ರಕರಣದಲ್ಲಿ, ಹಫೀಝ್ ಸಯೀದ್ ಮತ್ತು ಇತರರ ವಿರುದ್ಧ ಶನಿವಾರ ದೋಷಾರೋಪಣೆ ಹೊರಿಸಲು ನಿಗದಿಯಾಗಿತ್ತು. ಆದರೆ, ವಿಚಿತ್ರವೆಂಬಂತೆ, ಸಹ ಆರೋಪಿ ಮಲಿಕ್ ಝಫರ್ ಇಕ್ಬಾಲ್‌ನನ್ನು ನ್ಯಾಯಾಲಕ್ಕೆ ಹಾಜರುಪಡಿಸಲಾಗಿರಲಿಲ್ಲ. ಈ ಕಾರಣದಿಂದಾಗಿ, ಪ್ರಕರಣವನ್ನು ಡಿಸೆಂಬರ್ 11ಕ್ಕೆ ಮುಂದೂಡಲಾಗಿದೆ’’ ಎಂದು ಪಿಟಿಐ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದರು.

ಪಂಜಾಬ್ ಪೊಲೀಸ್‌ನ ಭಯೋತ್ಪಾದನೆ ನಿಗ್ರಹ ಇಲಾಖೆಯು, ಪಂಜಾಬ್ ರಾಜ್ಯದ ವಿವಿಧ ಭಾಗಗಳಲ್ಲಿ ಭಯೋತ್ಪಾದನೆ ಚಟುವಟಿಕೆಗಳಿಗೆ ಹಣಕಾಸು ಪೂರೈಕೆ ಮಾಡಿದ ಆರೋಪಗಳಲ್ಲಿ ಸಯೀದ್ ಮತ್ತು ಅವನ ಸಹಚರರ ವಿರುದ್ಧ 23 ಎಫ್‌ಐಆರ್‌ಗಳನ್ನು ದಾಖಲಿಸಿದೆ. ಅದು ಜುಲೈ 17ರಂದು ಹಫೀಝ್ ಸಯೀದ್‌ನನ್ನು ಬಂಧಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News