ವಯಲಾರ್ ಸೋದರಿಯರ ಅತ್ಯಾಚಾರ, ಸಾವು ಪ್ರಕರಣ: ಆರೋಪ ಮುಕ್ತ ವ್ಯಕ್ತಿಗೆ ಗುಂಪಿನಿಂದ ಥಳಿತ

Update: 2019-12-07 15:37 GMT

ಪಾಲಕ್ಕಾಡ್ (ಕೇರಳ),ಡಿ.7: ವಯಲಾರ್ ದಲಿತ ಸೋದರಿಯರ ಸಾವಿನ ಪ್ರಕರಣದಲ್ಲಿ ನ್ಯಾಯಾಲಯದಿಂದ ಖುಲಾಸೆಗೊಂಡಿರುವ ಆರೋಪಿಗಳ ಪೈಕಿ ಕುಟ್ಟಿ ಮಧು ಎಂಬಾತನನ್ನು ಸ್ಥಳೀಯರು ಥಳಿಸಿರುವ ಘಟನೆ ಶನಿವಾರ ಬೆಳಿಗ್ಗೆ ಅಟ್ಟಪಾಳ್ಳಂ ಎಂಬಲ್ಲಿ ನಡೆದಿದ್ದು,ತೀವ್ರವಾಗಿ ಗಾಯಗೊಂಡಿರುವ ಆತನನ್ನು ಪೊಲೀಸರು ಪಾಲಕ್ಕಾಡ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ.

2013,ಜ.13ರಂದು ವಯಲಾರ್‌ನ 13ರ ಹರೆಯದ ಬಾಲಕಿಯ ಶವವು ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ,2017,ಮಾ.4ರಂದು ಆಕೆಯ ಒಂಭತ್ತು ವರ್ಷ ಪ್ರಾಯದ ಸೋದರಿಯ ಶವವೂ ಇದೇ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆದಿತ್ತೆನ್ನಲಾಗಿದೆ.

 ಸೆ.3ರಂದು ಪಾಲಕ್ಕಾಡ್‌ನ ವಿಶೇಷ ಪೊಕ್ಸೊ ನ್ಯಾಯಾಲಯವು ಪ್ರಕರಣದ ಓರ್ವ ಆರೋಪಿಯನ್ನು ಮತ್ತು ಅ.25ರಂದು ಕುಟ್ಟಿ ಮಧು ಸೇರಿದಂತೆ ಇತರ ಮೂವರು ಆರೋಪಿಗಳನ್ನು ಬಿಡುಗಡೆಗೊಳಿಸಿತ್ತು.

ಶನಿವಾರ ತನ್ನ ಹೊಸ ಬೈಕಿನಲ್ಲಿ ಪ್ರಯಾಣಿಸುತ್ತಿದ್ದ ಕುಟ್ಟಿ ಮಧುವನ್ನು ತಡೆದು ನಿಲ್ಲಿಸಿದ ಗುಂಪು ವಯಲಾರ್ ಘಟನೆಯ ಬಗ್ಗೆ ಪ್ರಶ್ನಿಸಿ ಯದ್ವಾತದ್ವಾ ಥಳಿಸಿದೆ. ಆತನೊಂದಿಗಿದ್ದ ಕೃಷ್ಣಪ್ರಸಾದ ಸುರಕ್ಷಿತವಾಗಿ ಪಾರಾಗಿದ್ದಾನೆ.

ತನ್ಮಧ್ಯೆ,ಬೆಜೆಪಿ ಬೆಂಬಲಿಗರು ತನ್ನ ಪುತ್ರನನ್ನು ಥಳಿಸಿದ್ದಾರೆ. ಆತನಿಗೂ ಪ್ರಕರಣಕ್ಕೂ ಸಂಬಂಧವಿಲ್ಲ ಎಂದು ಕುಟ್ಟಿ ಮಧುವಿನ ತಾಯಿ ಹಾಗೂ ಮೃತ ಬಾಲಕಿಯರ ಸೋದರತ್ತೆ ಕನಕಮಣಿ ಸುದ್ದಿಗಾರರಿಗೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News