ಜನರು ಸಾಯುತ್ತಿದ್ದಾರೆ; ಏನಾದರೂ ಕ್ರಮ ತೆಗೆದುಕೊಳ್ಳಿ

Update: 2019-12-07 15:56 GMT

ಮ್ಯಾಡ್ರಿಡ್, ಡಿ. 7: ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ತುರ್ತು ಕ್ರಮಗಳನ್ನು ತೆಗೆದುಕೊಳ್ಳುವಂತೆ ಹದಿಹರೆಯದ ಪರಿಸರ ಹೋರಾಟಗಾರ್ತಿ ಗ್ರೆಟಾ ತನ್‌ಬರ್ಗ್ ಶುಕ್ರವಾರ ವಿಶ್ವಸಂಸ್ಥೆಯ ಪರಿಸರ ಶೃಂಗ ಸಮ್ಮೇಳನಕ್ಕಾಗಿ ಮ್ಯಾಡ್ರಿಡ್‌ನಲ್ಲಿ ಸೇರಿರುವ ಜಾಗತಿಕ ನಾಯಕರನ್ನು ಒತ್ತಾಯಿಸಿದ್ದಾರೆ.

‘‘ಇನ್ನಷ್ಟು ವಿಳಂಬವನ್ನು ನಾವು ಸಹಿಸಲು ಸಾಧ್ಯವಿಲ್ಲ. ಯಾಕೆಂದರೆ ಜನರು ಸಾಯುತ್ತಿದ್ದಾರೆ’’ ಎಂದು ಅವರು ಹೇಳಿದರು.

‘‘ನೈಜ ಕ್ರಮಗಳನ್ನು ತೆಗೆದುಕೊಳ್ಳದ ಹೊರತು, ಇನ್ನಷ್ಟು ವಿಳಂಬಗಳನ್ನು ನಾವು ಸಹಿಸಲು ಸಾಧ್ಯವಿಲ್ಲ. ಪರಿಸ್ಥಿತಿಯನ್ನು ಸುಧಾರಿಸಲು ಲಭ್ಯವಿರುವ ಎಲ್ಲ ಅವಕಾಶಗಳನ್ನು ನಾವು ಬಳಸಿಕೊಳ್ಳಬೇಕು’’ ಎಂದು 16 ವರ್ಷದ ಸ್ವೀಡನ್ ಪರಿಸರ ಹೋರಾಟಗಾರ್ತಿ ಹೇಳಿದರು.

ಸ್ಪೇನ್ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಶುಕ್ರವಾರ ಸಂಜೆ ಪರಿಸರ ಮೆರವಣಿಗೆಯೊಂದರಲ್ಲಿ ಭಾಗವಹಿಸುವ ಮೊದಲು ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.

‘‘ನಾವು ಒಂದು ವರ್ಷಕ್ಕಿಂತಲೂ ಹೆಚ್ಚಿನ ಅವಧಿಯಿಂದ ಹೋರಾಡುತ್ತಿದ್ದೇವೆ. ಆದರೆ, ಮೂಲಭೂತವಾಗಿ ಏನೂ ಆಗಿಲ್ಲ. ಅಧಿಕಾರದಲ್ಲಿರುವವರು ಪರಿಸರ ಬಿಕ್ಕಟ್ಟಿನ ಬಗ್ಗೆ ನಿರ್ಲಕ್ಷ್ಯ ತೋರುವುದನ್ನು ಈಗಲೂ ಮುಂದುವರಿಸುತ್ತಿದ್ದಾರೆ’’ ಎಂದರು.

‘‘ಅಧಿಕಾರದಲ್ಲಿರುವವರು ಏನಾದರೂ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ನಾವು ಎದುರು ನೋಡುತ್ತಿದ್ದೇವೆ. ಯಾಕೆಂದರೆ, ಪರಿಸರ ಮಾಲಿನ್ಯದಿಂದಾಗಿ ಜನರು ನರಳುತ್ತಿದ್ದಾರೆ ಹಾಗೂ ಸಾಯುತ್ತಿದ್ದಾರೆ. ನಾವು ಇನ್ನು ಕಾಯುವುದು ಸಾಧ್ಯವಿಲ್ಲ’’ ಎಂದು ಗ್ರೆಟಾ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News