'ಪ್ರತಿಯೊಬ್ಬರು ಸಂವಿಧಾನ ರೂಪಿಸಿರುವ ನ್ಯಾಯಕ್ಕೆ ತಲೆಬಾಗಲೇಬೇಕು'

Update: 2019-12-07 16:21 GMT

ಉಡುಪಿ, ಡಿ.7: ಈ ದೇಶದ ಪ್ರತಿಯೊಬ್ಬರು ಕೂಡ ನ್ಯಾಯ ಸಮ್ಮತವಾಗಿ ಬಾಳಬೇಕಾಗಿರುವುದು ಇಂದಿನ ಅಗತ್ಯ. ನ್ಯಾಯವನ್ನು ಯಾರು ಕೂಡ ಕೈಗೆ ತೆಗೆದುಕೊಳ್ಳಬಾರದು. ಸಂವಿಧಾನ ಬದ್ಧವಾಗಿ ಈ ದೇಶ ನಡೆಯುತ್ತಿರುವಾಗ ಆ ಸಂವಿಧಾನ ರೂಪಿಸಿರುವ ನ್ಯಾಯಕ್ಕೆ ಎಷ್ಟೆ ದೊಡ್ಡ ಧರ್ಮಜೀವಿ, ಧರ್ಮ ಗುರು, ಜದಗ್ಗುರು, ಆರಕ್ಷಕರಾಗಿರಾಗಿದ್ದರೂ ತಲೆ ಬಾಗಲೇಬೇಕು ಎಂದು ರಂಗಕರ್ಮಿ ಉದ್ಯಾವರ ಮಾಧವ ಆಚಾರ್ಯ ಹೇಳಿದ್ದಾರೆ.

ಅಲೆವೂರು ಗ್ರೂಪ್ ಫಾರ್ ಎಜುಕೇಶನ್ ಆಶ್ರಯದಲ್ಲಿ ಅಲೆವೂರು ಶಾಂತಿನಿಕೇತನ ಆಂಗ್ಲ ಮಾಧ್ಯಮ ಶಾಲೆಯ ಸಭಾಂಗಣದಲ್ಲಿ ಶನಿವಾರ ನಡೆದ ಶಾಲಾ ವಾರ್ಷಿಕೋತ್ಸವ ಸಮಾರಂಭದಲ್ಲಿ ಅಲೆವೂರು ಗ್ರೂಪ್ ಅವಾರ್ಡ್ ಪ್ರಶಸ್ತಿಯನ್ನು ಸ್ವೀಕರಿಸಿ ಅವರು ಮಾತನಾಡುತಿದ್ದರು.

ಈ ದೇಶದ ಬಹಳ ದೊಡ್ಡ ಹೆಗ್ಗಳಿಕೆ ಅಂದರೆ ಈ ದೇಶ ಈವರೆಗೆ ಮಿಲಿಟರಿ ಕೈಗೆ ಹೋಗಿಲ್ಲ. ಅದನ್ನು ನಮ್ಮ ಕೈಯಲ್ಲಿಯೇ ಉಳಿಸಿ ಕೊಳ್ಳಬೇಕು. ಅದಕ್ಕಾಗಿ ಮಕ್ಕಳಿಗೆ ನ್ಯಾಯದ ಪಾಠ ಹಾಗೂ ಪೌರ ನೀತಿಯನ್ನು ಹೇಳಿ ಕೊಡಬೇಕಾಗಿದೆ. ಸೌಹಾರ್ದತೆಯಿಂದ ಯಾವುದೇ ಸಂಘರ್ಷ ಇಲ್ಲದೆ ಪ್ರೀತಿಯನ್ನು ಹರಡುವ ಸಮಾಜವನ್ನು ನಾು ಸೃಷ್ಠಿ ಮಾಡಬೇಕಾಗಿದೆ ಎಂದರು.

ಉದ್ಯೋಗ, ಬೆಲೆ ಏರಿಕೆ, ಜೀವನ ಸಾಮರಸ್ಯದ ಸಮಸ್ಯೆ, ಅನುಕೂಲತೆಯ ಸಮಸ್ಯೆ, ಸಾರ್ವಜನಿರ ಜೀವನಕ್ಕೆ ನೆಮ್ಮದಿ ಕೊಡುವ ರಕ್ಷಣೆಯ ಸಮಸ್ಯೆಯಿಂದ ದೇಶ ಇಂದು ಛಿದ್ರ ಛಿದ್ರವಾಗುತ್ತಿದೆ. ಇಂದು ನಮ್ಮ ಮುಂದೆ ಹಲವು ಎದೆ ನಡುಗಿಸುವ ಸಮಸ್ಯೆಗಳಿವೆ. ದೇಶದ ಸಮಸ್ಯೆಗಿಂತ ನಮ್ಮ ಎದುರು ಇರುವ ಸೂಕ್ಷ್ಮ ಸಮಸ್ಯೆಗಳ ಬಗ್ಗೆ ನಾವು ಗಮನ ಕೊಡಬೇಕು. ಅದರ ಮೊದಲ ಹಂತವೇ ನಾವು ನ್ಯಾಯದ ಹಾದಿಯಲ್ಲಿ ನಡೆಯುವುದಾಗಿದೆ ಎಂದು ಅವರು ತಿಳಿಸಿದರು.

ಇಂದು ಸಣ್ಣ ಪ್ರಾಯದ ಮಕ್ಕಳಲ್ಲಿ ಕ್ರೌರ್ಯ ಅಡಗಿರುವುದು ನೋಡಿದರೆ ಭಯ ಹುಟ್ಟಿಸುತ್ತದೆ. ನಾವು ಎಲ್ಲಿ ತಪ್ಪಿ ಬಿದ್ದಿದ್ದೇವೆ ಎಂಬುದರ ಬಗ್ಗೆ ಮನನ ಮಾಡಿಕೊಳ್ಳಬೇಕು. ನಮ್ಮ ಮುಂದಿರುವ ಅನೇಕ ಸವಾಲುಗಳನ್ನು ನಾವು ಪರಿಹರಿಸದಿದ್ದರೆ ಅನ್ಯರು ನಮ್ಮ ಮೇಲೆ ದಾಳಿ ನಡೆಸಬಹುದು. ಅದಕ್ಕೆ ನಾವು ಅವಕಾಶ ಮಾಡಿಕೊಡಬಾರದು. ಈ ನಿಟ್ಟಿನಲ್ಲಿ ಹಿರಿಯರು ಬಾಲ್ಯದಲ್ಲೇ ಎಳೆಯ ಮನಸ್ಸುಗಳಿಗೆ ಯಾವುದು ತಪ್ಪು ಯಾವುದು ಸರಿ ಎಂಬ ನ್ಯಾಯ ಪಾಠ ಹೇಳಿಕೊಡಬೇಕು ಎಂದರು.

ಪ್ರಶಸ್ತಿಯನ್ನು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರದಾನ ಮಾಡಿದರು. ಮುಖ್ಯ ಅತಿಥಿಗಳಾಗಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ವಿನ್ಸೆಂಟ್ ಆಳ್ವ, ಸಂಸ್ಥೆಯ ಅಧ್ಯಕ್ಷ ಎ.ಗಣಪತಿ ಕಿಣಿ, ಸಲಹಾ ಮಂಡಳಿ ಸದಸ್ಯೆ ಶಾಂತಿ ಜಿ.ಕಿಣಿ ಉಪಸ್ಥಿತರಿದ್ದರು.

ಶಾಲಾ ಪ್ರಾಂಶುಪಾಲೆ ರೂಪಾ ಡಿ.ಕಿಣಿ ವಾರ್ಷಿಕ ವರದಿ ವಾಚಿಸಿದರು. ಕೋಶಾಧಿಕಾರಿ ಹರೀಶ್ ಕಿಣಿ ಸ್ವಾಗತಿಸಿದರು. ಕಾರ್ಯದರ್ಶಿ ದಿನೇಶ್ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಸುವರ್ಣ ನಾಯಕ್ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಶ್ರೀನಿವಾಸ ಉಪಾಧ್ಯಾಯ ಹಾಗೂ ಗಾಯತ್ರಿ ಅರುಣ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News