ಅಬ್ದುಲ್ಲಾ ಉಸ್ತಾದರ ನಿಧನ: ಖಿಲ್ ರಿಯಾ ಹಳೆ ವಿದ್ಯಾರ್ಥಿಗಳ ವೇದಿಕೆ ಸಂತಾಪ

Update: 2019-12-07 17:00 GMT

ಹಳೆಯಂಗಡಿ: ಅಬ್ದುಲ್ಲಾ ಉಸ್ತಾದರ ಅಕಾಲಿಕ ನಿಧನಕ್ಕೆ ಖಿಲ್ ರಿಯಾ ಹಳೆ ವಿದ್ಯಾರ್ಥಿಗಳ ವೇದಿಕೆಯು ತೀವ್ರ ಸಂತಾಪ ಸೂಚಿಸಿದೆ.

ಹಳೆಯಂಗಡಿ ವ್ಯಾಪ್ತಿಯ ಇಂದಿರಾನಗರ ಪ್ರದೇಶದಲ್ಲಿ ಕಾರ್ಯಾಚರಿಸುತ್ತಿರುವ ಅಲ್-ಮದ್ರಸತುಲ್ ಖಿಲ್ ರಿಯಾದಲ್ಲಿ ಸುದೀರ್ಘ 16 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಅಬ್ದುಲ್ಲಾ ಉಸ್ತಾದ್, ಅಪಾರ ಶಿಷ್ಯ ವೃಂದ ಹೊಂದಿದ್ದಾರೆ. ಮದ್ರಸ ಶಿಕ್ಷಣವೇ ದುರ್ಲಭ ಅನ್ನುವ ಕಾಲದಲ್ಲಿ ಇವರು ನೀಡಿದ ಅಮೋಘ ಸೇವೆ ಎಂದಿಗೂ ಸ್ಮರಣೀಯ. ಮದ್ರಸ ಪ್ರಾಧ್ಯಾಪಕ ವೃತ್ತಿ ತೊರೆದ ಬಳಿಕವೂ ಇವರು, ಶಿಷ್ಯರೊಂದಿಗೆ ಉತ್ತಮ ಒಡನಾಡವನ್ನು ಹೊಂದಿದ್ದರು. ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ತನ್ನ ಸರಳ, ನೇರ ನಡೆ-ನುಡಿಯ ಮೂಲಕ ಜನಾನುರಾಗಿಯಾಗಿದ್ದ ಅವರು, ಸಮಾಜದಲ್ಲಿ ಉತ್ಕೃಷ್ಟ ಸ್ಥಾನವನ್ನು ಹೊಂದಿದ್ದರು. ಅವರ ಹಠಾತ್ ಅಗಲುವಿಕೆಯು ಸಮುದಾಯಕ್ಕೆ ತುಂಬಾಲಾರದ ನಷ್ಟವಾಗಿದೆ. ಇಂದಿರಾನಗರ ಪರಿಸರದಲ್ಲಿ ಧಾರ್ಮಿಕ ಶಿಕ್ಷಣದ ಘಮಲನ್ನು ಹರಡಿದ ಇವರು, ಸಾಂಸ್ಕೃತಿಕ ಕಲೆ ‘ದಫ್’ಗೆ ಕೂಡ ಅಪಾರ ಕೊಡುಗೆ ನೀಡಿದ್ದಾರೆ. ದಫ್ ಉಸ್ತಾದರಾಗಿಯೂ ಸೇವೆ ಸಲ್ಲಿಸಿದ್ದ ಇವರು, ಮದ್ರಸ ಮಕ್ಕಳಿಗಾಗಿ ಸ್ವತಃ ಮುತುವರ್ಜಿಯಿಂದ ದಫ್ ತರಬೇತಿ ನೀಡುತ್ತಿದ್ದರು. ಅಬ್ದುಲ್ಲಾ ಉಸ್ತಾದರ ಶೋಕತಪ್ತ ಕುಟುಂಬಕ್ಕೆ, ಶಿಷ್ಯ ವೃಂದಕ್ಕೆ, ಹಿತೈಷಿಗಳಿಗೆ ಇವರ ಅಗಲುವಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತನು ಕರುಣಿಸಲಿ ಎಂದು ಖಿಲ್ ರಿಯಾ ಹಳೆ ವಿದ್ಯಾರ್ಥಿಗಳ ವೇದಿಕೆಯ ಅಧ್ಯಕ್ಷ ಮುಹಮ್ಮದ್ ಮುಸ್ತಫಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News