ಪಡುಬಿದ್ರಿ: ಅತಿಕ್ರಮಿತ ಅಂಗಡಿಗಳ ತೆರವು

Update: 2019-12-07 17:21 GMT

ಪಡುಬಿದ್ರಿ: ಪಡುಬಿದ್ರಿ ಮಾರುಕಟ್ಟೆ ಬಳಿ ಅಕ್ರಮವಾಗಿ ಶೆಡ್‍ಗಳನ್ನು ನಿರ್ಮಿಸಿ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ ಎನ್ನಲಾದ ಮಳಿಗೆಗಳನ್ನು ಪಡುಬಿದ್ರಿ ಪಂಚಾಯಿತಿ ಪಿಡಿಒ ಪಂಚಾಕ್ಷರಿ ಸ್ವಾಮಿ ಕೆರಿಮಠ ನೇತೃತ್ವದಲ್ಲಿ ಶನಿವಾರ ತೆರವುಗೊಳಿಸಲಾಯಿತು.

ಜಿಲ್ಲಾಧಿಕಾರಿಯವರ  ಆದೇಶದಂತೆ ಮಾರುಕಟ್ಟೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿರ್ಮಿಸಿರುವ ಅಂಗಡಿಗಳು, ಒತ್ತುವರಿಗಳನ್ನು ತೆರವು ಮಾಡುವ ಕಾರ್ಯಾಚರಣೆಯನ್ನು ಮುಂದುವರಿಸಲಾಗಿದೆ. ಈ ಹಿಂದೆ ಖಾಸಗಿ ಕಟ್ಟಡದ ಮಾಲಕರೊಬ್ಬರು ಮಾರುಕಟ್ಟೆ ಬಳಿ ಗಿಡಗಳನ್ನು ನೆಟ್ಟು ನಿರ್ಮಿಸಿರುವ ಕಟ್ಟೆಗಳನ್ನು ತೆರವುಗೊಳಿಸಲಾಗಿತ್ತು. ಏಲಂನಲ್ಲಿ ಅಂಗಡಿ ಕೋಣೆಗಳನ್ನು ಪಡೆದು ಬಾಡಿಗೆ ಪಾವತಿಸದ ಅಂಗಡಿಗಳಿಗೆ ಬೀಗ ಹಾಕುವ ಕಾರ್ಯವನ್ನು ಅ ಬಳಿಕ ಮಾಡಲಾಗಿತ್ತು. ಇದೀಗ ತೆರವು ಮಾಡಿರುವ ಎರಡು ಅಂಗಡಿಗಳವರಿಗೆ ಮಾರುಕಟ್ಟೆಯೊಳಗಡೆ ಸ್ಥಳ ಬಾಡಿಗೆಯಲ್ಲಿ ಅಂಗಡಿಗಳನ್ನು ನೀಡಲಾಗಿದೆ. ಅವರನ್ನು ಅಲ್ಲಿಗೆ ಸ್ಥಳಾಂತರಿ ಸುವಂತೆ ಪಿಡಿಒ ಖಡಕ್ ಎಚ್ಚರಿಕೆ ನೀಡಿದರು.

ಅಂಗಡಿ ತೆರವು ಸಂದರ್ಭದಲ್ಲಿ ಕೆಲ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿ, ಮಾರುಕಟ್ಟೆಯಲ್ಲಿ, ಪಡುಬಿದ್ರಿ ಪೇಟೆ ರಾಷ್ಟ್ರೀಯ ಹೆದ್ದಾರಿ ಖಾಸಗಿ ಕಟ್ಟಡಗಳಲ್ಲಿ ಅಂಗಡಿ ಮಳಿಗೆಗಳನ್ನು ಬಾಡಿಗೆಗೆ ಪಡೆದು ಪಾದಾಚಾರಿ ಮಾರ್ಗವನ್ನು ಅತಿಕ್ರಮಿಸಿರುವ ಹಾಗೂ ಕಾರ್ಕಳ ಹೆದ್ದಾರಿ ಬದಿಯಲ್ಲಿ ಒತ್ತುವರಿ ಮಾಡಿ ನಿರ್ಮಿಸಿರುವ ಗೂಡಂಗಡಿಗಳನ್ನೂ ತೆರವು ಮಾಡುವಂಂತೆ ಆಗ್ರಹಿಸಿದರು. ಈ ಬಗ್ಗೆಯೂ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ ಎಂದು ಪಿಡಿಒ ತಿಳಿಸಿದರು.

ಪಂ. ಅಧ್ಯಕ್ಷೆ ದಮಯಂತಿ ಅಮೀನ್ ಹಾಗೂ ಸದಸ್ಯರು ಕಾರ್ಯಾಚರಣೆ ವೇಳೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News