ಅಯ್ಯಪ್ಪ ದರ್ಶನ ಮಾಡಿ, ಹುಂಡಿಗೆ ಕಾಸು ಹಾಕದಿರಿ : ಕಪಿಲಾಶ್ರಮದ ರಾಮಚಂದ್ರ ಸ್ವಾಮೀಜಿ ಸಲಹೆ

Update: 2019-12-08 14:24 GMT

ಮಂಗಳೂರು, ಡಿ.8: ಭಾರೀ ಸಂಖ್ಯೆಯಲ್ಲಿ ಶಬರಿಮಲೆ ಅಯ್ಯಪ್ಪನ ದರ್ಶನ ಮಾಡಿ ಬನ್ನಿ. ಆದರೆ ಸುಪ್ರೀಂ ಕೋರ್ಟ್‌ನಲ್ಲಿ ಕೋಟ್ಯಂತರ ಅಯ್ಯಪ್ಪ ಭಕ್ತರ ಆಶಯದಂತೆ ತೀರ್ಪು ಬರುವವರೆಗೂ ಅಲ್ಲಿನ ಹುಂಡಿಗೆ ಕಾಸು ಹಾಕದಿರಿ ಎಂದು ಉತ್ತರಾಖಂಡ ಕಪಿಲಾಶ್ರಮದ ರಾಮಚಂದ್ರ ಭಾರತೀ ಸ್ವಾಮೀಜಿ ಅಯ್ಯಪ್ಪ ಭಕ್ತರಿಗೆ ಸಲಹೆ ನೀಡಿದ್ದಾರೆ.

ಶ್ರೀ ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ದ.ಕ. ಜಿಲ್ಲಾ ಘಟಕ ನಗರದ ಪುರಭವನದಲ್ಲಿ ರವಿವಾರ ಏರ್ಪಡಿಸಿದ ಅಯ್ಯಪ್ಪ ಭಕ್ತರ ಸಮಾವೇಶದಲ್ಲಿ ಅವರು ಆಶೀರ್ವಚ ನೀಡಿದರು.

ಹಿಂದೂ ಧರ್ಮವನ್ನೇ ಒಡೆಯಲು ಹೊರಟ ಕಮ್ಯುನಿಸ್ಟರಿಗೆ ತಕ್ಕ ಪಾಠ ಕಲಿಸಬೇಕು. ಶಬರಿಮಲೆ ಭಕ್ತರು ಹಾಕುವ ಕೋಟ್ಯಂತರ ಹಣವನ್ನು ಬ್ಯಾಂಕ್‌ನಲ್ಲಿಟ್ಟು ಅದರ ಬಡ್ಡಿ ತಿನ್ನುವವರಿಗೆ ಪಾಠ ಕಲಿಸಬೇಕಿದೆ. ಅಯ್ಯಪ್ಪನಲ್ಲಿ ಭಕ್ತಿ ಕಡಿಮೆಯಾಗದಿರಲಿ. ಅಲ್ಲಿನ ಪ್ರಸಾದ, ಭಸ್ಮವನ್ನೂ ತನ್ನಿ, ಆದರೆ ಅಯ್ಯಪ್ಪನ ಸಾನಿಧ್ಯದ ಮುಂದಿರುವ ಹುಂಡಿಗೆ ಹಣ ಹಾಕದಿರುವ ಮೂಲಕ ಕೇರಳ ಸರಕಾರಕ್ಕೆ ಬಿಸಿ ಮುಟ್ಟಿಸಬೇಕು ಎಂದು ರಾಮಚಂದ್ರ ಭಾರತೀ ಸ್ವಾಮೀಜಿ ಹೇಳಿದರು.

ದೇಶದಲ್ಲೇ ಅತ್ಯಧಿಕ ಸಂಖ್ಯೆಯ ಅಯ್ಯಪ್ಪ ಭಕ್ತರು ಕರ್ನಾಟಕದಿಂದ ಶಬರಿಮಲೆಗೆ ಭೇಟಿ ನೀಡುತ್ತಾರೆ, ಅನಂತರದ ಸ್ಥಾನಗಳಲ್ಲಿ ಆಂಧ್ರ, ತಮಿಳುನಾಡು ಹಾಗೂ ನಾಲ್ಕನೇ ಸ್ಥಾನದಲ್ಲಿ ಕೇರಳವಿದೆ. ಕೇರಳಿಗರು ಬುದ್ಧಿವಂತರು, ಹುಂಡಿಗೆ ಹಣ ಹಾಕುವುದಿಲ್ಲ. ಆದರೆ ಹೊರರಾಜ್ಯಗಳ ಮಂದಿ ಹುಂಡಿಗೆ ಹಣ ಹಾಕುತ್ತಾರೆ. ವಿವಾದ ಶುರುವಾದ ಬಳಿಕ 67 ಕೋ.ರೂ. ಸರಕಾರಕ್ಕೆ ನಷ್ಟ ಆಗಿದೆ ಎಂದರು.

ಪಂದಳರಾಜರಿಂದ ಚಾಲನೆ

ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಕೇರಳ ಪಂದಳದ ಪಂದಳ ಸಂಸ್ಥಾನಂನ ಪಂದಳರಾಜ ಶಶಿಕುಮಾರ್ ವರ್ಮ ಕಳೆದ ಒಂದೂವರೆ ವರ್ಷದಿಂದ ಎಲ್ಲಾ ಅಯ್ಯಪ್ಪ ಭಕ್ತರ ಮನಸ್ಸೂ ವ್ಯಾಕುಲಗೊಂಡಿದೆ. ಕೇರಳ ಸರಕಾರ ಕೈಗೊಂಡ ತೀರ್ಮಾನಗಳು ಅಯ್ಯಪ್ಪ ಭಕ್ತರ ಸ್ವಾಭಿಮಾನಕ್ಕೆ ಧಕ್ಕೆ ಉಂಟು ಮಾಡಿವೆ ಎಂದರು.

ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಅಧ್ಯಕ್ಷ ಟಿ.ಬಿ. ಶೇಖರ್‌ಜೀ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರ ಶರವು ದೇವಸ್ಥಾನದ ಆಡಳಿತ ಮೊಕ್ತೇಸರ ಶರವು ರಾಘವೇಂದ್ರ ಶಾಸ್ತ್ರಿ ಶೋಭಾಯಾತ್ರೆಗೆ ಚಾಲನೆ ನೀಡಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಈರೋಡ್ ಎನ್. ರಾಜನ್‌ಜೀ, ರಾಜ್ಯ ಉಪಾಧ್ಯಕ್ಷ ವಿ.ಕೃಷ್ಣಪ್ಪ ಜಿ., ಆಳ್ವಾಸ್ ಹೋಮಿ ಯೋಪತಿ ಕಾಲೇಜು ಪ್ರಾಂಶುಪಾಲ ಡಾ.ಪ್ರವೀಣ್‌ರಾಜ್ ಆಳ್ವ, ಕೃಷ್ಣ ಶೆಟ್ಟಿ ಕೆಳಗಿನಗುತ್ತು ಕೋಟೆಕಾರು, ಪತಂಜಲಿ ಯೋಗ ಶಿಕ್ಷಣ ತರಬೇತಿಯ ಪ್ರಾಂತ ಸಂಚಾಲಕ ರವೀಶ್, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ರಾಷ್ಟ್ರೀಯ ಕೋಶಾಧಿ ಕಾರಿ ವಿನೋದ್‌ಜಿ, ಉಪಾಧ್ಯಕ್ಷ ಡಾ.ಮುನಿರಾಜ್, ಸಾರ್ವಜನಿಕ ಸಂಪನ್ಮೂಲ ಅಧಿಕಾರಿ ಎನ್. ಜಯರಾಮ, ಕೇರಳ ಹಿಂದೂ ಐಕ್ಯ ವೇದಿಕೆಯ ಶ್ರೀಧರನ್, ವಿಶ್ವ ಹಿಂದು ಪರಿಷತ್ ಜಿಲ್ಲಾಧ್ಯಕ್ಷ ಗೋಪಾಲ್ ಕುತ್ತಾರ್, ಗುರುಸ್ವಾಮಿ ಯಾದವ ಅತಿಥಿಗಳಾಗಿದ್ದರು.

ಮಂಗಳೂರು ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂನ ಅಧ್ಯಕ್ಷ ಗಣೇಶ್ ಪೊದುವಾಳ್, ಗೌರವಾಧ್ಯಕ್ಷ ವಿಶ್ವನಾಥ ಕಾಯರ್ ಪಳಿಕೆ, ಕೋಶಾಧಿಕಾರಿ ಚಂದ್ರಹಾಸ್ ಪಂಡಿತ್ ಹೌಸ್, ಗೌರವಾಧ್ಯಕ್ಷರಾದ ಮೋಹನ್ ಪಡೀಲ್, ಮೋಹನ್ ಬರ್ಕೆ, ಪ್ರಧಾನ ಕಾರ್ಯದರ್ಶಿ ಶರತ್ ಕೇಂಬಾರ್, ಸಂಘಟನಾ ಕಾರ್ಯದರ್ಶಿ ಪುರುಷೋತ್ತಮ್ ಕಲ್ಲಾಪು ಉಪಸ್ಥಿತರಿದ್ದರು.

ಆನಂದ ಶೆಟ್ಟಿ ಸ್ವಾಗತಿಸಿದರು. ಕುಮಾರ್ ಮಾಲೆಮಾರ್ ವಂದಿಸಿದರು. ಪ್ರವೀಣ್ ಎಸ್.ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News