'ಸಾಮಾಜಿಕ ಭದ್ರತಾ ಯೋಜನೆಗಳು ನೇರ ಫಲಾನುಭವಿ ಮನೆ ಬಾಗಿಲಿಗೆ'

Update: 2019-12-08 15:01 GMT

ಹೆಬ್ರಿ, ಡಿ.8: ವೃದ್ದಾಪ್ಯ ವೇತನ, ವಿಧವಾ ವೇತನ ಮುಂತಾದ ಸಾಮಾಜಿಕ ಭದ್ರತಾ ಯೋಜನೆಗಳಿಗೆ ಇನ್ನು ಮುಂದೆ ಸಾರ್ವಜನಿಕರಿಂದ ಅರ್ಜಿಗಳನ್ನು ಆಹ್ವಾನಿಸದೇ, ‘ಆಧಾರ್’ನ ಆಧಾರದಿಂದ ಸರಕಾರವೇ ಪಿಂಚಣಿಗೆ ಅರ್ಹ ರಾದವರನ್ನು ಗುರುತಿಸಿ ನೇರವಾಗಿ ಅವರ ಮನೆ ಬಾಗಿಲಿಗೇ ಈ ಸೌಲಭ್ಯ ಗಳನ್ನು ತಲುಪಿಸಲು ಕ್ರಮಕೈಗೊಳ್ಳಲಾಗುತ್ತಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.

ರವಿವಾರ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಹೆಬ್ರಿ ತಾಲೂಕಿಗೆ ಹೆಬ್ರಿಯಲ್ಲಿ 10 ಕೋಟಿ ರೂ ವೆಚ್ಚದಲ್ಲಿ ಸುಮಾರು ಐದು ಎಕರೆ ಜಾಗದಲ್ಲಿ ತಲೆಎತ್ತಲಿರುವ ಮಿನಿ ವಿಧಾನಸೌಧದ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡುತಿದ್ದರು.

ರಾಜ್ಯದಲ್ಲಿ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳಿಗಾಗಿ ಪ್ರತಿ ವರ್ಷ ಕಂದಾಯ ಇಲಾಖೆ ಮೂಲಕ 7000 ಕೋಟಿ ರೂ.ಗಳನ್ನು ನೀಡಲಾಗುತ್ತಿದೆ. ಇದರಲ್ಲಿ ಮಧ್ಯವರ್ತಿಗಳ  ಹಾವಳಿ ಹಾಗೂ ಅನರ್ಹ ಫಲಾನುಭವಿ ಗಳಿಂದಾಗಿ ಸುಮಾರು 1000 ಕೋಟಿ ರೂ. ನಿಜವಾದ ಅರ್ಹರನ್ನು ತಲುಪುತ್ತಿಲ್ಲ. ಇದನ್ನು ತಪ್ಪಿಸುವ ಸಲುವಾಗಿ, ಪಿಂಚಣಿ ಪಡೆಯಲು ಆಧಾರ್ ಲಿಂಕ್‌ನ್ನು ಕಡ್ಡಾಯಗೊಳಿಸಲಾಗುತ್ತಿದ್ದು, ಇದರಿಂದ ಸುಮಾರು 1,000 ಕೋಟಿ ರೂ. ಉಳಿತಾಯವಾಗಲಿದ್ದು, ಅರ್ಹರಿಗೂ ಸರಿಯಾಗಿ ತಲುಪಲು ಸಾಧ್ಯವಾಗಲಿದೆ ಎಂದವರು ವಿವರಿಸಿದರು.

ಪ್ರತಿಯೊಬ್ಬ ಫಲಾನುಭವಿಯೂ ಆಧಾರ್‌ಗೆ ಲಿಂಕ್ ಪಡೆದಿರುವುದರಿಂದ, ನಿಗದಿತ ವಯೋಮಿತಿಯನ್ನು ದಾಟಿದ ವೃದ್ಧರನ್ನು ಸುಲಭದಲ್ಲಿ ಗುರುತಿಸಿ, ಯಾವುದೇ ಅರ್ಜಿ ಸಲ್ಲಿಸದೇ ಸರಕಾರವೇ ವೃಧ್ದರನ್ನು ಸ್ವಯಂ ಗುರುತಿಸಿ ಅವರ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ತಲುಪಿಸುವ ವ್ಯವಸ್ಥೆ ಮಾಡಲಿದ್ದೇವೆ. ಇದರಿಂದ ಅವರು ಪಿಂಚಣಿಗಾಗಿ ಕಚೇರಿಗಳಿಗೆ ಅಲೆದಾಡುವ ಪ್ರಮೇಯ ತಪ್ಪಲಿದೆ. ಮನೆಯಲ್ಲೇ ಕುಳಿತು ಅವರು ಸರಕಾರದ ಸೌಲಭ್ಯವನ್ನು ಪಡೆಯಲು ಸಾಧ್ಯವಾಗಲಿದೆ ಎಂದು ಅಶೋಕ್ ತಿಳಿಸಿದರು.

ಈ ಯೋಜನೆಯ ಪೈಲೆಟ್ ಪ್ರಾಜೆಕ್ಟ್‌ಗಾಗಿ ಉಡುಪಿ ಜಿಲ್ಲೆಯನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆಯಲ್ಲಿ ಸುಮಾರು 3000ದಷ್ಟು ಫಲಾನುಭವಿಗಳನ್ನು ಗುರುತಿಸುವ ಕಾರ್ಯ ನಡೆದಿದೆ. ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ಮುಖ್ಯ ಕಾರ್ಯದರ್ಶಿ ಯವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.

ಇನ್ನು ಮುಂದೆ ಜನನ ಪ್ರಮಾಣಪತ್ರವನ್ನು ಆಯಾ ತಹಶೀಲ್ದಾರ್ ಕಚೇರಿ ಯಿಂದಲೇ ಪಡೆಯುವ ಕುರಿತಂತೆ ಆದೇಶ ಮಾಡಲು ನಿರ್ಧರಿಸಿದ್ದೇವೆ. ಕಂದಾಯ ಇಲಾಖೆಗೆ ಸಂಬಂಧಿಸಿದ ಖಾತೆ ಮತ್ತು ಪೋಡಿಯಲ್ಲಿನ ವ್ಯತ್ಯಾಸ ಗಳನ್ನು ಸರಿಪಡಿಸಲು ಅಭಿಯಾನ ಕೈಗೊಳ್ಳಲಾಗುವುದು. ಹಿಂದೆ ಆರೋಗ್ಯ ಸಚಿವನಾಗಿ ‘ಮಡಿಲು ಕಿಟ್’ ಯೋಜನೆಯನ್ನು ಗರ್ಭಿಣಿ ಮಹಿಳೆಯರಿಗೆ ಜಾರಿಗೆ ತಂದಿದ್ದೆ. ಸಾರಿಗೆ ಸಚಿವನಾಗಿ ಆಧುನಿಕ ಬಸ್‌ನಿಲ್ದಾಣವನ್ನು ಎಲ್ಲಾ ಕಡೆಗಳಲ್ಲಿ ನಿರ್ಮಿಸಲು ಕ್ರಮಕೈಗೊಂಡಿದ್ದೆ. ಈಗ ಕಂದಾಯ ಸಚಿವನಾಗಿ ಸರಕಾರದ ಸೌಲಭ್ಯಗಳನ್ನು ಮನೆ ಬಾಗಿಲಿಗೆ ತಲುಪಿಸಲು ಮುಂದಾಗಿದ್ದೇನೆ ಎಂದು ಅಶೋಕ್ ನುಡಿದರು.

ಉಡುಪಿಗೆ ಇನ್ನೊಂದು ಎಸಿ ಕಚೇರಿ: ಸದ್ಯ ಉಡುಪಿ ಜಿಲ್ಲೆಗೆ ಸಂಬಂಧಿ ಸಿದಂತೆ ಕುಂದಾಪುರದಲ್ಲಿ ಒಂದು ಉಪವಿಭಾಗಾಧಿಕಾರಿ ಕಚೇರಿ (ಎಸಿ ಕಚೇರಿ) ಕಾರ್ಯ ನಿರ್ವಹಿಸುತಿದ್ದು, ಇದರಿಂದ ಹೆಬ್ರಿ, ಕಾರ್ಕಳ, ಕಾಪುವಿನ ಜನರಿಗೆ ತೊಂದರೆಯುಂಟಾಗುತ್ತಿದೆ. ಹೀಗಾಗಿ ಇನ್ನೊಂದು ಪ್ರತ್ಯೇಕ ಉಪವಿಭಾಗ ಕಚೇರಿಯ ರಚನೆಗೆ ಬೇಡಿಕೆ ಬಂದಿದ್ದು, ಉಡುಪಿಯಲ್ಲಿ ಈ ಕಚೇರಿಯನ್ನು ಪ್ರಾರಂಭಿಸಲು ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.

ಅದೇ ರೀತಿ ಶಾಸಕ ಸುನಿಲ್ ಕುಮಾರ್ ಅವರ ಬೇಡಿಕೆಯಾದ ಹೆಬ್ರಿ ಮತ್ತು ಬಜಗೋಳಿಯಲ್ಲಿ ಹೊಸ ಹೋಬಳಿ ಆರಂಭಿಸುವ ಬಗ್ಗೆಯೂ ಸಚಿವರು ಪರಿಶೀಲಿಸುವ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಕಾರ್ಕಳ ಶಾಸಕ ಸುನೀಲ್‌ಕುಮಾರ್ ಮಾತನಾಡಿ, ಸುವರ್ಣ ಕಾರ್ಕಳ ಯೋಜನೆಯಡಿಯಲ್ಲಿ ಹೆಬ್ರಿ ತಾಲೂಕಿನಲ್ಲಿ ಅನೇಕ ಅಭಿವೃದ್ದಿ ಕಾರ್ಯಗಳು ನಡೆದಿದ್ದು, 2 ಕೋಟಿ ವೆಚ್ಚದಲ್ಲಿ ದ್ವಿಪಥ ರಸ್ತೆ ಅಭಿವೃದ್ಧಿ, ಟ್ರೀಪಾರ್ಕ್ ಅಭಿವೃದ್ದಿ, ಬಹುಗ್ರಾಮ ಕುಡಿಯುವ ನೀರು ಯೋಜನೆ, 89 ಕಾಲು ಸಂಕಗಳ ನಿರ್ಮಾಣ ಸೇರಿದಂತೆ ಹಲವು ಕಾಮಗಾರಿಗಳು ನಡೆದಿದ್ದು, ನೂತನ ತಾಲೂಕು ಕಚೇರಿ ನಿರ್ಮಾಣದ ನಂತರ, ಸಬ್ ರಿಜಿಸ್ಟ್ರಾರ್ ಕಚೇರಿ, ಕೃಷಿ ಇಲಾಖೆ, ತಾಲೂಕು ಪಂಚಾಯತ್, ಆರ್‌ಟಿಓ ಸೇರಿದಂತೆ ಪ್ರಮುಖ ಎಲ್ಲಾ ಇಲಾಖೆಗಳು ಪ್ರಾರಂಭಗೊಳ್ಳಲಿವೆ ಎಂದರು.

ಇದೇ ವೇಳೆ ಕಾರ್ಕಳ ಶಾಸಕನ ನೆಲೆಯಲ್ಲಿ ಕೆಲವು ಬೇಡಿಗಳನ್ನು ಸಚಿವರ ಮುಂದಿಟ್ಟ ಸುನಿಲ್ ಕುಮಾರ್, ಅಕ್ರಮ ಸಕ್ರಮ ಯೋಜನೆಯಲ್ಲಿ ನಿವೇಶನ ಪಡೆದಿರುವವರು ಅದನ್ನು ಮಾರಾಟ ಮಾಡಲು ಇರುವ ಅವಧಿಯನ್ನು 15 ವರ್ಷಗಳಿಂದ 25 ವರ್ಷಗಳಿಗೆ ಏರಿಸಿದ್ದು, ಅದನ್ನು ಇಳಿಸುವಂತೆ, ಕಸ್ತೂರಿ ರಂಗನ್ ವರದಿಯಿಂದ ಜನವಸತಿ ಪ್ರದೇಶಗಳಿಗೆ ಯಾವುದೇ ತೊಂದರೆ ಯಾಗದಂತೆ ನೋಡಿಕೊಳ್ಳುವ ಬಗ್ಗೆ, ಆಧಾರ್ ಕಾರ್ಡ್ ತಿದ್ದುಪಡಿಗಳನ್ನು ಗ್ರಾಪಂ ಕಚೇರಿಗಳಲ್ಲಿ ಮಾಡಲು ಅವಕಾಶ ಕಲ್ಪಿಸಿ ಕೊಡುವಂತೆ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಗೆ ಹೆಚ್ಚಿನ ಗ್ರಾಮಗಳನ್ನು ಸೇರ್ಪಡೆ ಮಾಡುವ ಕುರಿತಂತೆ ಅಗತ್ಯ ಕ್ರಮಗಳನ್ನು ಕೆಗೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಮಾತನಾಡಿ, ವೃದ್ದಾಪ್ಯ ವೇತನ,ವಿಧವಾ ವೇತನ ಗಳಿಗೆ ಫಲಾನುಭವಿಗಳನ್ನು ಗುರುತಿಸಿ ಅವರ ಮನೆ ಬಾಗಿಲಿಗೆ ತಲುಪಿಸಲು ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಇದಕ್ಕಾಗಿ 3000 ಮಂದಿ ಅರ್ಹ ರನ್ನು ಗುರುತಿಸ ಲಾಗಿದೆ. ಈ ವೇಳೆ ಯಾವುದೇ ಅರ್ಹರು ಬಿಟ್ಟುಹೋಗದಂತೆ ಎಚ್ಚರ ವಹಿಸಬೇಕೆಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು.

ಉಡುಪಿ ಪ್ರಥಮ: ಕಂದಾಯ ಇಲಾಖೆ ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆ ಇದ್ದಂತೆ. ಇದರ ಸೇವೆಗಳನ್ನು ಜನರಿಗೆ ಒದಗಿಸುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಸರ್ವೆಯಲ್ಲೂ ಸಹ ನಾವು ಪ್ರಥಮ ಸ್ಥಾನದಲ್ಲಿದ್ದು, ಸಕಾಲ ಅಡಿ ಅರ್ಜಿ ವಿಲೇವಾರಿಯಲ್ಲಿ ಪ್ರಥಮ, ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ನೀಡುವ ಸೇವೆಗಳಲ್ಲೂ ಜಿಲ್ಲೆ ರಾಜ್ಯದಲ್ಲಿ ಅಗ್ರ ಸ್ಥಾನದಲ್ಲಿದ್ದು, ಜನಪರ ಕೆಲಸಗಳ ಮೂಲಕ ರಾಜ್ಯಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು.

ಕಂದಾಯ ಇಲಾಖೆ ಎಲ್ಲಾ ಇಲಾಖೆಗಳಿಗೆ ಮಾತೃ ಇಲಾಖೆ ಇದ್ದಂತೆ. ಇದರ ಸೇವೆಗಳನ್ನು ಜನರಿಗೆ ಒದಗಿಸುವಲ್ಲಿ ಉಡುಪಿ ಜಿಲ್ಲೆ ರಾಜ್ಯದಲ್ಲಿ ಪ್ರಥಮ ಸ್ಥಾನದಲ್ಲಿದೆ. ಸರ್ವೆಯಲ್ಲೂ ಸಹ ನಾವು ಪ್ರಥಮ ಸ್ಥಾನದಲ್ಲಿದ್ದು, ಸಕಾಲ ಅಡಿ ಅರ್ಜಿ ವಿಲೇವಾರಿಯಲ್ಲಿ ಪ್ರಥಮ, ಅಟಲ್ ಜೀ ಜನಸ್ನೇಹಿ ಕೇಂದ್ರಗಳ ಮೂಲಕ ನೀಡುವ ಸೇವೆಗಳಲ್ಲೂ ಜಿಲ್ಲೆ ರಾಜ್ಯದಲ್ಲಿ ಅಗ್ರಸ್ಥಾನದಲ್ಲಿದ್ದು, ಜನಪರ ಕೆಲಸಗಳ ಮೂಲಕ ರಾಜ್ಯಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಹೆಬ್ರಿ ಗ್ರಾಪಂ ಅಧ್ಯಕ್ಷ ಎಚ್.ಕೆ.ಸುಧಾಕರ್, ಕಾರ್ಕಳ ತಾಪಂ ಅದ್ಯಕ್ಷೆ ಸೌಬಾಗ್ಯ ಮಡಿವಾಳ, ಜಿಪಂ ಸದಸ್ಯರಾದ ಜ್ಯೋತಿ ಹರೀಶ್, ಸುಪ್ರೀತಾ ಕುಲಾಲ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪವಿಬಾಗಾಧಿಕಾರಿ ಕೆ.ರಾಜು, ಕಾರ್ಕಳ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೇಜರ್ ಡಾ.ಹರ್ಷ ಮುಂತಾದವರು ಉಪಸ್ಥಿತರಿದ್ದರು.

ಹೆಬ್ರಿ ತಹಶೀಲ್ದಾರ್ ಕೆ.ಮಹೇಶ್ಚಂದ್ರ ಸ್ವಾಗತಿಸಿದರೆ, ಜ್ಯೋತಿ ಹರೀಶ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸೀತಾನದಿ ವಿಠಲ ಶೆಟ್ಟಿ ವಂದಿಸಿ, ನಿತ್ಯಾನಂದ ಶೆಟ್ಟಿ ಮತ್ತು ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News