×
Ad

ರಾಜ್ಯದಲ್ಲಿ ವೈದ್ಯರ ನೇಮಕಾತಿಗೆ ಆದ್ಯತೆಯಲ್ಲಿ ಕ್ರಮ: ಸಚಿವ ಅಶೋಕ್

Update: 2019-12-08 20:33 IST

ಮುನಿಯಾಲು (ಹೆಬ್ರಿ), ಡಿ.8: ರಾಜ್ಯದ ಆರೋಗ್ಯ ಇಲಾಖೆಯ ನೇಮಕಾತಿ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರ ಕೊರತೆಯಾಗದಂತೆ ನೋಡಿಕೊಳ್ಳಲು ಮೊನ್ನಿನ ಸಚಿವ ಸಂಪುಟದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ಆರ್. ಅಶೋಕ್ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಪಂ ಉಡುಪಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಂಜಿನಿಯರಿಂಗ್ ಘಟಕಗಳ ಸಹಯೋಗದಲ್ಲಿ ಮುನಿಯಾಲುನಲ್ಲಿ ಸುಮಾರು 1.78 ಕೋಟಿ ರೂ.ವೆಚ್ಚದ ನಿರ್ಮಿಸಲಾದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಇತ್ತೀಚಿನ ದಿನಗಳಲ್ಲಿ ಜನತೆಯಲ್ಲಿ ಆರೋಗ್ಯದ ಬಗ್ಗೆ ಕಾಳಜಿ ಮೂಡುತ್ತಿದೆ. ಇಂಥ ಕಾಳಜಿ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಆಧುನಿಕ ಯುಗದಲ್ಲಿ ಹಿಂದೆಂದಿಗಿಂತ 100 ಪಟ್ಟು ಹೊಸ ಕಾಯಿಲೆಗಳು ಬರುತ್ತಿವೆ. ಇದಕ್ಕೆ ನೆಲ, ಜಲ ಹಾಗೂ ವಾತಾವರಣದ ಮಾಲಿನ್ಯವೇ ಕಾರಣ ಎಂದವರು ನುಡಿದರು.

ಇಂದು ಜಲಮೂಲದ ನೀರು ಸಹ ಕುಡಿಯಲು ಯೋಗ್ಯವಲ್ಲದ ರೀತಿಯಲ್ಲಿದೆ. ವಾಯು ಮಾಲಿನ್ಯದಿಂದ ಹೊಸದಿಲ್ಲಿಯಲ್ಲಿ ಇಂದು ಆಕ್ಸಿಝನ್ ಕ್ಲಬ್‌ಗಳು ಪ್ರಾರಂಭಗೊಂಡಿವೆ. ಇದು ದಿಲ್ಲಿಯಿಂದ ಬೆಂಗಳೂರು, ಅಲ್ಲಿಂದ ಉಡುಪಿ, ಮುನಿಯಾಲಿಗೂ ಬಂದೇ ಬರುತ್ತದೆ. ಮುಂದಿನ ದಿನಗಳಲ್ಲಿ ರೋಗರುಜಿನಗಳಿಗೆ ಜನತೆ ದೊಡ್ಡ ಬೆಲೆ ತೆರಬೇಕಾಗುವುದು ಎಂದರು.

ಹೀಗಾಗಿ ವೈದ್ಯರು ರೋಗಗಳಿಗೆ, ರೋಗಿಗಳಿಗೆ ಚಿಕಿತ್ಸೆ ನೀಡುವುದಕ್ಕಿಂತ ರೋಗಗಳು ಬಾರದಂತೆ ಯಾವ ರೀತಿಯ ಮುಂಜಾ ಗ್ರತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಜನರಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಬೇಕು ಎಂದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.ಕಾರ್ಕಳ ತಾಪಂ ಅಧ್ಯಕ್ಷೆ ಸೌಬಾಗ್ಯ ಮಡಿವಾಳ, ಉಪಾಧ್ಯಕ್ಷ ಹರೀಶ್ ನಾಯ್ಕ, ಜಿಪಂ ಸದಸ್ಯೆ ಜ್ಯೋತಿ ಹರೀಶ್, ಪ್ರತಾಪ್ ಹೆಗ್ಡೆ ಮಾರಾಳಿ, ತಾ.ಪಂ. ಸದಸ್ಯೆ ಸುಲತಾ ನ್‌ಕಾ, ಜಿಲ್ಲಾಧಿಕಾರಿ ಜಿ.ಜಗದೀಶ್, ಕುಂದಾಪುರ ಉಪ ವಿಬಾಗಾಧಿಕಾರಿ ರಾಜು, ಕಾರ್ಕಳ ತಾಪಂ ಕಾರ್ಯ ನಿರ್ವಹಣಾಧಿಕಾರಿ ಮೇಜರ್ ಡಾ.ಹರ್ಷ, ಕಾರ್ಕಳ ತಹಶೀಲ್ದಾರ್ ಪುರಂದರ ಹೆಗಡೆ, ಡಿಹೆಚ್‌ಓ ಡಾ. ಸುಧೀರ್‌ಚಂದ್ರ ಸೂಡಾ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ 9 ತಿಂಗಳಲ್ಲೇ ಪಿಎಚ್‌ಸಿ ಕಟ್ಟಡವನ್ನು ನಿರ್ಮಿಸಿಕೊಟ್ಟ ಗುತ್ತಿಗೆದಾರ ಸುಧೀರ್‌ಕುಮಾರ್ ಶೆಟ್ಟಿ ಹಾಗೂ ಮುನಿಯಾಲಿನ ನಾಟಿ ವೈದ್ಯ ಶೀನ ಶೆಟ್ಟಿಗಾರ್ ಇವರನ್ನು ಸಚಿವರು ಸನ್ಮಾನಿಸಿದರು.

ತಾಲೂಕು ವೈದ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ ಸ್ವಾಗತಿಸಿದರು. ಪಿಎಚ್‌ಸಿ ವೈದ್ಯಾಧಿಕಾರಿ ಡಾ. ಸೌಮ್ಯ ವಂದಿಸಿದರು. ಸೀತಾರಾಮ ಹೆಬ್ಬಾರ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News