ಮಲ್ಪೆ ಬೀಚ್‌ನಲ್ಲಿ ಬೀದಿ, ದೇಶಿ ಶ್ವಾನಗಳ ಪ್ರದರ್ಶನ

Update: 2019-12-08 15:04 GMT

ಮಲ್ಪೆ, ಡಿ.8: ಮಲ್ಪೆಯ ಮಧ್ವರಾಜ್ ಅನಿಮಲ್ ಕೇರ್ ಟ್ರಸ್ಟ್ ಮತ್ತು ಏಂಜೆಲ್ಸ್ ಫಾರ್ ಸ್ಟ್ರೇ ಡಾಗ್ ಜಂಟಿ ಆಶ್ರಯದಲ್ಲಿ ರವಿವಾರ ಮಲ್ಪೆ ಬೀಚ್‌ನಲ್ಲಿ ಏರ್ಪಡಿಸಲಾದ ದೇಶದ ಎರಡನೆಯ ದೇಶಿ ತಳಿಗಳ ದ ಗ್ರೇಟ್ ಇಂಡಿಯನ್ ಡಾಗ್ ಶೋನಲ್ಲಿ ಪಾಲ್ಗೊಂಡ ಭಾರತೀಯ ಶ್ವಾನಗಳು ಗಮನ ಸೆಳೆದವು.

ಭಾರತೀಯ ತಳಿಗಳಾದ ಮುದೋಳ್, ಕ್ಯಾನವಲ್, ಪಶ್ಚಿಮಿಹೌಂಡ್, ಕೊಂಬಾಯ್, ಪರಯ್ಯ, ಕನ್ನಿ ತಳಿಯ ಎಂಟು ನಾಯಿಗಳು ಹಾಗೂ 32 ಬೀದಿ ನಾಯಿಗಳು ರ್ಯಾಂಪ್ ವಾಕ್ ಮೂಲಕ ಪ್ರದರ್ಶನ ನೀಡಿದವು. ಕುಂದಾ ಪುರ, ಮಂಗಳೂರು, ಕಾರ್ಕಳ, ಸಾಲಿಗ್ರಾಮ ಸೇರಿದಂತೆ ಅವಿಭಜಿತ ದ.ಕ. ಜಿಲ್ಲೆಯ ವಿವಿಧ ಪ್ರದೇಶಗಳಿಂದ ಒಟ್ಟು 40 ಶ್ವಾನಗಳು ಇದರಲ್ಲಿ ಪಾಲ್ಗೊಂಡಿದ್ದವು.

ಈ ಪ್ರದರ್ಶನದಲ್ಲಿ ದೇಶಿಯ ತಳಿಗಳು, ಮಿಶ್ರ ತಳಿಗಳು ಮತ್ತು ರಕ್ಷಿಸಲ್ಪಟ್ಟ (ಬೀದಿ) ನಾಯಿಗಳು ಎಂಬ ಮೂರು ವಿಭಾಗಗಳನ್ನು ಮಾಡಲಾಗಿದ್ದು, ಇದರಲ್ಲಿ ಪಾಲ್ಗೊಂಡ ಎಲ್ಲ ನಾಯಿಗಳಿಗೂ ಬಹುಮಾನ ಮತ್ತು ಪ್ರಮಾಣ ಪತ್ರವನ್ನು ನೀಡಲಾಯಿತು. ರವಿವಾರ ರಜಾದಿನ ಆಗಿರುವುದರಿಂದ ಬೀಚ್ ನಲ್ಲಿ ಭಾರೀ ಸಂಖ್ಯೆಯ ಜನ ಭಾರತೀಯ ನಾಯಿಗ ಪ್ರದರ್ಶನವನ್ನು ವೀಕ್ಷಿಸಿ ದರು.

‘ಕಳೆದ ವರ್ಷ ತಮಿಳುನಾಡಿನ ಚೆನೈನಲ್ಲಿ ದೇಶದಲ್ಲಿಯೇ ಪ್ರಥಮ ಬಾರಿಗೆ ಭಾರತೀಯ ತಳಿಗಳ ನಾಯಿಗಳ ಪ್ರದರ್ಶನ ನಡೆದಿತ್ತು. ಇದೀಗ ಇದು ಎರಡನೆ ಪ್ರದರ್ಶನವಾಗಿದೆ. ವಿದೇಶಿ ತಳಿಗಳನ್ನು ಲಕ್ಷಾಂತರ ರೂ.ಹಣ ನೀಡಿ ಖರೀದಿಸಲು ಬೇಕಾದಷ್ಟು ಜನ ಇದ್ದಾರೆ. ಆದರೆ ನಮ್ಮದೇ ತಳಿಗಳನ್ನು ಹಾಗೂ ಬೀದಿನಾಯಿಗಳನ್ನು ಯಾರು ಖರೀದಿಸುತ್ತಿಲ್ಲ. ಈ ಬಗ್ಗೆ ದೇಶಿಯ ತಳಿಯ ನಾಯಿಗಳ ಬಗ್ಗೆ ಹೆಮ್ಮೆ ಮತ್ತು ಕಾಳಜಿ ಮೂಡಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ’ ಎಂದು ಟ್ರಸ್ಟ್‌ನ ಸಂಚಾಲಕಿ ಬಬಿತಾ ಮಧ್ವ ರಾಜ್ ತಿಳಿಸಿದರು.

‘ಈವರೆಗೆ ಸುಮಾರು 300 ಬೀದಿಗಳನ್ನು ನಾವು ದತ್ತು ನೀಡಿದ್ದೇವೆ. ಈ ನಾಯಿಗಳಲ್ಲಿ ಇರುವಷ್ಟು ಪ್ರೀತಿ, ನಿಷ್ಠೆ, ನಿಯತ್ತು ವಿದೇಶಿ ತಳಿಗಳಲ್ಲಿ ಇರು ವುದಿಲ್ಲ. ಹಣ ಕೊಟ್ಟು ಖರೀದಿಸಿದ ವಿದೇಶಿ ತಳಿಯ ನಾಯಿಗಳನ್ನು ನಾವು ಕಾಯುವ ಪರಿಸ್ಥಿತಿ ಇದೆ. ಆದರೆ ಬೀದಿ ನಾಯಿಗಳು ನಮ್ಮನ್ನು ಕಾಯುವ ಕೆಲಸ ಮಾಡುತ್ತವೆ. ಬೀದಿನಾಯಿಗಳಿಗಾಗಿ ಸರಕಾರ ಆಸ್ಪತ್ರೆಯನ್ನು ಸ್ಥಾಪಿಸ ಬೇಕು. ಜನರಿಗೆ ಆ ನಾಯಿಗಳ ಬಗ್ಗೆ ಅನುಕಂಪ ಮೂಡಬೇಕು’ ಎಂದರು.

ಈ ಸಂದರ್ಭದಲ್ಲಿ ಸಂಘಟಕರಾದ ಅಲ್ಕಾ, ಪ್ರೀತಂ ಅಡಿಗ, ಸರಳ, ಕಿಶೋರ್, ಸತ್ಯಾ, ನಿಧಿ, ತೆಂಝಿನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News