ತಪ್ಪು ಮಾಡಿದರೆ ಎನ್‌ಕೌಂಟರ್ ನಡೆಯುತ್ತದೆ: ಅತ್ಯಾಚಾರಿಗಳಿಗೆ ತೆಲಂಗಾಣ ಸಚಿವರ ಎಚ್ಚರಿಕೆ

Update: 2019-12-08 16:10 GMT

ಹೈದರಾಬಾದ್,ಡಿ.8: ಹೈದರಾಬಾದ್ ಪಶುವೈದ್ಯೆಯ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ನಾಲ್ವರು ಆರೋಪಿಗಳನ್ನು ಪೊಲೀಸರು ಎನ್‌ಕೌಂಟರ್‌ನಲ್ಲಿ ಮುಗಿಸಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿರುವ ತೆಲಂಗಾಣದ ಪಶು ಸಂಗೋಪನಾ ಸಚಿವ ತಲಸಾನಿ ಶ್ರೀನಿವಾಸ ಯಾದವ ಅವರು,ಇಷ್ಟೊಂದು ಕ್ರೂರ ಅಪರಾಧವನ್ನು ಎಸಗುವ ಯಾರೇ ಆದರೂ ತಮ್ಮ ಕಥೆ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮುಗಿಯುತ್ತದೆ ಎಂದು ನಿರೀಕ್ಷಿಸಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಸ್ಥಳೀಯ ಟಿವಿ ವಾಹಿನಿಗೆ ಸಂದರ್ಶನ ನೀಡಿದ ಯಾದವ,‘ ಅಪರಾಧಿಗಳಿಗೆ ಇದೊಂದು ಪಾಠವಾಗಿದೆ. ನಿಮ್ಮ ನಡವಳಿಕೆಯು ತಪ್ಪಾಗಿದ್ದರೆ ಯಾವುದೇ ನ್ಯಾಯಾಲಯ ವಿಚಾರಣೆ,ಜೈಲು ಶಿಕ್ಷೆ ಅಥವಾ ಜಾಮೀನು ಅಥವಾ ಪ್ರಕರಣದ ಇತ್ಯರ್ಥದಲ್ಲಿ ವಿಳಂಬ ಇವ್ಯಾವುಗಳ ಲಾಭವೂ ನಿಮಗೆ ದೊರೆಯವುದಿಲ್ಲ. ಇನ್ನು ಮುಂದೆ ಇಂತಹುದಕ್ಕೆಲ್ಲ ಅವಕಾಶವಿರುವುದಿಲ್ಲ. ನೀವು ಅಷ್ಟೊಂದು ಕ್ರೂರ ಅಪರಾಧವನ್ನು ನಡೆಸಿದರೆ ಅದರ ಹಿಂದೆಯೇ ಎನ್‌ಕೌಂಟರ್ ನಡೆಯುತ್ತದೆ ಎಂಬ ಸಂದೇಶವನ್ನು ನಾವು ರವಾನಿಸಿದ್ದೇವೆ ’ಎಂದು ಹೇಳಿದರು.

ಎನ್‌ಕೌಂಟರ್‌ನಲ್ಲಿ ಆರೋಪಿಗಳ ಹತ್ಯೆ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸ್ಥಿತಿಯನ್ನು ಬಲಗೊಳಿಸುವ ಕೆ.ಚಂದ್ರಶೇಖರ ರಾವ್ ಸರಕಾರದ ಬದ್ಧತೆಗೆ ಒಂದು ನಿದರ್ಶನವಾಗಿದೆ ಎಂದು ಬಣ್ಣಿಸಿದ ಅವರು, ‘ ಇದು ನಾವು ರವಾನಿಸಿರುವ ಪ್ರಬಲ ಸಂದೇಶವಾಗಿದೆ. ಇದು ನಾವು ದೇಶದ ಮುಂದೆ ಇಟ್ಟಿರುವ ಆದರ್ಶವಾಗಿದೆ. ನಾವು ನಮ್ಮ ಸಮಾಜ ಕಲ್ಯಾಣ ಯೋಜನೆಗಳ ಮೂಲಕ ಮಾತ್ರವಲ್ಲ,ಕಾನೂನು ಮತ್ತು ಸುವ್ಯವಸ್ಥೆಯನ್ನು ನಿರ್ವಹಿಸುವ ನಮ್ಮ ಕ್ರಮಗಳ ಮೂಲಕವೂ ಮಾದರಿಯೊಂದನನ್ನು ಸ್ಥಾಪಿಸಿದ್ದೇವೆ ’ಎಂದರು.

ಎನ್‌ಕೌಂಟರ್‌ಗಳಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳನ್ನು ಗುರಿಯಾಗಿಸಿಕೊಳ್ಳುವುದರಿಂದ ಯಾವುದೇ ಪ್ರಯೋಜನವಿಲ್ಲ,ಏಕೆಂದರೆ ಹಲವಾರು ಜನರು ಅವರ ಬೆಂಬಲಕ್ಕಿದ್ದಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News