ನಾಳೆಯಿಂದ ‘ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ’: ಸಚಿವ ಅಶೋಕ್ ಲೇವಡಿ

Update: 2019-12-08 16:13 GMT

ಮುನಿಯಾಲು (ಹೆಬ್ರಿ), ಡಿ.8: ನಾಳೆ ನಡೆಯುವ ಉಪಚುನಾವಣೆಯ ಮತಗಳ ಎಣಿಕೆಯಲ್ಲಿ ಆಡಳಿತ ಬಿಜೆಪಿ ಪಕ್ಷ 14 ರಿಂದ 15 ಸ್ಥಾನ ಗೆಲ್ಲುವ ವಿಶ್ವಾಸವಿದೆ. ಸೋಮವಾರದ ಫಲಿತಾಂಶದ ಬಳಿಕ ಕಾಂಗ್ರೆಸ್ ನಡಿಗೆ ಶೂನ್ಯದ ಕಡೆಗೆ ಎಂದು ಹಿರಿಯ ಬಿಜೆಪಿ ನಾಯಕ ಹಾಗೂ ರಾಜ್ಯ ಕಂದಾಯ ಸಚಿವ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ಮುನಿಯಾಲು ಪ್ರಾಥಮಿಕ ಆರೋಗ್ಯ ಕೇಂದ್ರದ ನೂತನ ಕಟ್ಟಡ ಉದ್ಘಾಟನೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತಿದ್ದ ಅವರನ್ನು ನಾಳಿನ ಉಪಚುನಾವಣಾ ಮತ ಎಣಿಕೆಯ ಫಲಿತಾಂಶದ ಬಗ್ಗೆ ಪ್ರಶ್ನಿಸಿದಾಗ ಮೇಲಿನಂತೆ ನುಡಿದರು.

ನಾಳಿನ ಬಳಿಕ ರಾಜ್ಯದಲ್ಲಿ ಹೊಸ ಹಾದಿ- ಹೊಸ ಹೆಜ್ಜೆ ಇಡುವ ಸರಕಾರ ಬರಲಿದೆ. ನೂರಕ್ಕೆ ನೂರು ನಮಗೆ ಬಹುಮತಕ್ಕಿಂತ ಹೆಚ್ಚಿನ ಸ್ಥಾನ ಸಿಗಲಿದೆ. ಈಗ ಬಂದಿರುವ ಸಮೀಕ್ಷೆಗಳೆಲ್ಲವೂ ಇದನ್ನೇ ಹೇಳುತ್ತಿವೆ. ನನ್ನನ್ನು ಕೇಳಿದರೆ ಬಿಜೆಪಿ 14ರಿಂದ 15 ಸ್ಥಾನ ಗೆಲ್ಲಲಿದೆ ಎಂದು ಅಶೋಕ್ ತಿಳಿಸಿದರು.

ದೇಶದ ಜನರು ಉಪಚುನಾವಣೆ ಫಲಿತಾಂಶಕ್ಕೆ ಕಾಯುತಿದ್ದಾರೆ. ನಾಳೆ ಕಾಂಗ್ರೆಸ್ ನಾಯಕರನ್ನು ಮನೆಗೆ ಕಳುಹಿಸುವ ಫಲಿತಾಂಶ ಬರುತ್ತೆ. ಸಿದ್ದರಾಮಯ್ಯ ವಿಪಕ್ಷ ನಾಯಕ ಸ್ಥಾನ ತ್ಯಾಗ ಮಾಡಬೇಕಾಗಬಹುದು. ಮೈತ್ರಿ ಸರಕಾರದ ದುರಾಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದಿಂದ ಜನರು ರೋಸಿ ಹೋಗಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಆಡಳಿತದಲ್ಲಿರುವ ಯಡಿಯೂರಪ್ಪ ಸರಕಾರವನ್ನು ಮುಂದುವರಿಸಲು ಮತದಾರರು ತೀರ್ಮಾನಿಸಿದ್ದಾರೆ. ಭೀಕರ ಪ್ರವಾಹಕ್ಕೆ ಸಿಲುಕಿದ ರಾಜ್ಯದ ಜನತೆಗೆ ತ್ವರಿತಗತಿಯ ಪರಿಹಾರ ಒದಗಿಸಿದ ಸರಕಾರದ ಕ್ರಮಕ್ಕೆ ಜನ ಮೆಚ್ಚುಗೆ ವ್ಯಕ್ತವಾಗಿದೆ. ಫಲಿತಾಂಶದ ಬಳಿಕ ಜೆಡಿಎಸ್ ಕರ್ನಾಟಕದಿಂದ ಗೇಟ್ಪಾಸ್ ಪಡೆಯುತ್ತೆ ಎಂದರು.

ಕಾಂಗ್ರೆಸ್ ಮತ್ತು ಜೆಡಿಎಸ್ ಮತ್ತೆ ಒಂದಾಗಿ ಆಡಳಿತ ನಡೆಸುವ ಪ್ರಯತ್ನ ನಡೆಯುತ್ತಿರುವ ಬಗ್ಗೆ ಪ್ರಶ್ನಿಸಿದಾಗ, ವಿಪಕ್ಷಗಳು ನಿಜವಾಗಿಯೂ ಭ್ರಮೆಯಲ್ಲಿವೆ. ಮತ್ತೊಮ್ಮೆ ಕಾಂಗ್ರೆಸ್-ಜೆಡಿಎಸ್ ಒಂದಾಗೋದು ಕೇವಲ ಭ್ರಮೆ. ದೇವೇಗೌಡರು ಕೂಡಾ ಕಾಂಗ್ರೆಸ್ ಜೊತೆ ಹೋಗಲ್ಲ ಅಂದಿದ್ದಾರೆ. ಖರ್ಗೆ ಈಗಾಗಲೇ ಸೋತಿದ್ದಾರೆ, ಕಾಂಗ್ರೇಸ್ ಎರಡು ಭಾಗವಾಗಿದೆ. ಜೆಡಿಎಸ್ ಸಹ ಎರಡು ಭಾಗವಾಗಿದೆ. ಎರಡೂ ಪಕ್ಷಗಳು ಒಡೆದು ನಾಲ್ಕು ಪಾರ್ಟಿ ಆಗಿವೆ. ಈ ನಾಲ್ಕು ಪಾರ್ಟಿಗಳು ಒಂದಾಗೋದು ಯಾವಾಗ ? ನಾಯಕನನ್ನು ಆಯ್ಕೆ ಮಾಡೋದು ಯಾವಾಗ ? ಖಂಡಿತ ಕಾಂಗ್ರೆಸ್ ಭ್ರಮಾಲೋಕದಲ್ಲಿದೆ.

ಫಲಿತಾಂಶ ಬಂದ ಬಳಿಕ ಬಿಜೆಪಿ ರಾಜ್ಯದಲ್ಲಿ ಇನ್ನಷ್ಟು ಸುಭದ್ರವಾಗುತ್ತದೆ. ಕಾಂಗ್ರೆಸ್ ಭ್ರಮಾಲೋಕದಲ್ಲೇ ಇರಲಿ ಎಂಬುದು ಅವರಿಗೆ ನಮ್ಮ ಸಲಹೆಯಾಗಿದೆ ಎಂದು ಸಚಿವ ಅಶೋಕ್ ತಿಳಿಸಿದರು.

ಶಿವಸೇನೆಗೆ ಎಚ್ಚರಿಕೆ: ಶಿವಸೇನೆಯಿಂದ ಮತ್ತೆ ಗಡಿವಿವಾದ ಕೇಳಿಬರುತ್ತಿರುವ ಬಗ್ಗೆ ಸಚಿವರನ್ನು ಪ್ರಶ್ನಿಸಿದಾಗ, ಶಿವಸೇನೆ ಇರಲಿ, ಬೇರೆ ಯಾರೇ ಇರಲಿ ಬೆಳಗಾವಿ ಗಡಿಯ ತಂಟೆಗೆ ಬಂದ್ರೆ ನಾವಂತೂ ಸುಮ್ಮನಿರಲ್ಲ. ನೆಲ-ಜಲದ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಇಲ್ಲ. ಬೆಳಗಾವಿಯು ಕರ್ನಾಟಕದ ಅವಿಭಾಜ್ಯ ಅಂಗ. ಗಡಿ ತಕರಾರು ಮುಗಿದ ಅಧ್ಯಾಯ. ಬೆಳಗಾವಿ ಬಗ್ಗೆ ಕ್ಯಾತೆ ತೆಗೆದು ರಾಜಕೀಯ ದೊಂಬರಾಟ ಮಾಡ್ಬೇಡಿ ಹುಷಾರ್. ಹೇಗೆ ತಿರುಗೇಟು ಕೊಡ್ಬೇಕು ಅಂತ ನಮಗೂ ಗೊತ್ತು ಎಂದು ಅಶೋಕ್ ಕರ್ನಾಟಕಕ್ಕೆ ಖಡಕ್ ಎಚ್ಚರಿಕೆ ನೀಡಿದರು.

ಉದ್ಯೋಗದಲ್ಲಿ ಕನ್ನಡಿಗರಿಗೆ ಆದ್ಯತೆ:  ರಾಜ್ಯದಲ್ಲಿ ಉದ್ಯೋಗದ ವಿಷಯದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ. ರಾಜ್ಯ ಸರ್ಕಾರಕ್ಕೆ ಈ ವಿಚಾರದಲ್ಲಿ ಬದ್ದತೆ ಇದೆ. ಸರೋಜಿನಿ ಮಹಿಷಿ ವರದಿಯನ್ನೂ ಪರಿಗಣಿಸಿ, ಕನ್ನಡಕ್ಕೆ ಅಗ್ರಸ್ಥಾನ ನೀಡುತ್ತೇವೆ. ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಆದ್ಯತೆ ಸಿಗಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯವೂ ಹೌದು. ರಾಜ್ಯದಲ್ಲಿ ಕನ್ನಡಕ್ಕೆ ಅಗ್ರಸ್ಥಾನ ಹಾಗೂ ಕನ್ನಡಿಗರಿಗೆ ಉದ್ಯೋಗದಲ್ಲೂ ಅಗ್ರಸ್ಥಾನ ನೀಡುವುದಕ್ಕೆ ಸರಕಾರ ಪ್ರಾಮಾಣಿಕವಾಗಿ ಪ್ರಯತ್ನಿಸಲಿದೆ ಎಂದರು.

ಹೈದರಾಬಾದ್ ಘಟನೆಗೆ ಇಡೀ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯಾಯ ವಿಳಂಬ ಆಗುತ್ತಿದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ತಾ ಇಲ್ಲ ಎಂಬ ಅಭಿಪ್ರಾಯ ಸರಿಯಲ್ಲ. ನ್ಯಾಯ ಪರಿಪಾಲನೆ ಹೇಗೆ ಮಾಡೋದು ಅಂತ ನ್ಯಾಯಾಲಯ ತೀರ್ಮಾನ ಮಾಡುತ್ತೆ ಎಂದರು.

ಹೈದರಾಬಾದ್ ಘಟನೆಗೆ ಇಡೀ ದೇಶದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನ್ಯಾಯ ವಿಳಂಬ ಆಗುತ್ತಿದೆ, ತಪ್ಪಿತಸ್ಥರಿಗೆ ಶಿಕ್ಷೆ ಆಗ್ತಾ ಇಲ್ಲ ಎಂಬ ಅಭಿಪ್ರಾಯ ಸರಿಯಲ್ಲ. ನ್ಯಾಯ ಪರಿಪಾಲನೆ ಹೇಗೆ ಮಾಡೋದು ಅಂತ ನ್ಯಾಯಾಲಯ ತೀರ್ಮಾನ ಮಾಡುತ್ತೆ ಎಂದರು. ಈ ಶೂಟೌಟ್ ಬಗ್ಗೆ ಅಲ್ಲಿನ ಸರಕಾರ ಇದೆ ನೋಡಿಕೊಳ್ಳುತ್ತೆ. ಅವರು ಈಗಾಗಲೇ ಸಮರ್ಥನೆ ನೀಡಿದ್ದಾರೆ.

ಸ್ವಯಂರಕ್ಷಣೆಗೆ ಪೊಲೀಸರು ಈ ತೀರ್ಮಾನ ಕೈಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಇದೀಗ ಮಾನ ಹಕ್ಕು ಆಯೋಗ ಘಟನೆಯ ತನಿಖೆಗೆ ಮುಂದಾಗಿದೆ. ನೋಟೀಸನ್ನು ಜಾರಿ ಮಾಡಿದೆ. ತನಿಖೆಯ ನಂತರ ಎಲ್ಲಾ ಸತ್ಯಸಂಗತಿಗಳು ಬೆಳಕಿಗೆ ಬರುತ್ತೆ. ನ್ಯಾಯದ ದೃಷ್ಟಿ ಯಿಂದ ಇದು ಸ್ವಾಗತಾರ್ಹ ಕ್ರಮ ಎಂದು ಅಶೋಕ್ ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News