×
Ad

ರಂಗಮಂದಿರ ನಿರ್ಮಾಣ ತಾರ್ತಿಕ ಅಂತ್ಯ ಕಾಣಲಿ: ಡಾ.ಬಿ.ಎ.ವಿವೇಕ ರೈ

Update: 2019-12-08 22:06 IST

ಮಂಗಳೂರು, ಡಿ.8: ನಾಲ್ಕು ದಶಕಗಳಿಂದ ರಂಗ ಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸಿ ಕಲಾವಿದರು ಹೋರಾಟ ಮಾಡುತ್ತಲೇ ಬಂದಿದ್ದಾರೆ. ಕಾಮಗಾರಿ ನನೆಗುದಿಗೆ ಬಿದ್ದಿದೆ. ಈ ಹೋರಾಟ ತಾರ್ತಿಕ ಅಂತ್ಯ ಕಾಣಬೇಕು ಎಂದು ವಿದ್ವಾಂಸ, ಹಿರಿಯ ಸಾಹಿತಿ ಡಾ.ಬಿ.ಎ.ವಿವೇಕ ರೈ ತಿಳಿಸಿದ್ದಾರೆ.

ನಗರದ ಕೆನರಾ ಕಾಲೇಜಿನಲ್ಲಿ ರವಿವಾರ ನಡೆದ ರಂಗಮಂದಿರ ನಿರ್ಮಾಣಕ್ಕಾಗಿ ಆಗ್ರಹಿಸುವ ಕಲಾವಿದರ ಸಮಾವೇಶ ಕಾರ್ಯಕ್ರಮದ ರೂಪುರೇಷೆಯ ಸಮಾಲೋಚನಾ ಸಭೆಯಲ್ಲಿ ಅವರು ಮಾತನಾಡಿದರು.

ರಂಗಮಂದಿರ ನಿರ್ಮಾಣದ ಹಂತದಲ್ಲಿ ನಮ್ಮವರನ್ನು ಸೇರಿಸಿ ಸಲಹಾ ಸಮಿತಿ ಮಾಡಬೇಕು. ನಮಗೆ ಅದರಲ್ಲಿ ಹಿಡಿತ ಇರಬೇಕು ಎಂದು ಹೇಳುವ ಮೂಲಕ ಪಿಲಿಕುಳದ ಗುತ್ತಿನಮನೆ ಮತ್ತು ಗಿಳಿವಿಂಡು ಇವುಗಳನ್ನು ಉಲ್ಲೇಖಿಸಿದರು. ಸೌಹಾರ್ದದಿಂದ ಈ ಸಮಸ್ಯೆ ಶೀಘ್ರ ಬಗೆಹರಿಯಲಿ ಎಂದು ಆಶಿಸಿದರು. ಕಲಾವಿದರ ಸಮಾವೇಶವು ಇದೇ ಡಿ.14ರಂದು ಪುರಭವನದ ಮುಂಭಾಗದಲ್ಲಿ ನಡೆಯಲಿದೆ. ಸಮಾವೇಶ ಯಶಸ್ವಿಯಾಗಬೇಕು ಎಂದು ಹೇಳಿದರು.

ಹೋರಾಟ ಸಮಿತಿಯ ಅಧ್ಯಕ್ಷ ನ್ಯಾಯವಾದಿ ಶಶಿರಾಜ್ ಕಾವೂರು ಮಾತನಾಡಿ, ಕಳೆದ 40 ವರ್ಷಗಳಿಂದ ರಂಗಮಂದಿರ ನಿರ್ಮಾಣಕ್ಕಾಗಿ ಕಲಾವಿದರು ಆಗ್ರಹಿಸುತ್ತಿದ್ದಾರೆ. ನಮ್ಮ ಆಡಳಿತ ವ್ಯವಸ್ಥೆ ಔದಾಸೀನ್ಯತೆ ತೋರಿಸುತ್ತಿದೆ. ನಮ್ಮ ಹೋರಾಟ ಮುಂದುವರಿಯಲಿದೆ. ಈ ಸಮಾವೇಶ ಯಾವುದೇ ಪಕ್ಷ ಅಥವಾ ವ್ಯಕ್ತಿಯ ವಿರುದ್ಧ ಅಲ್ಲ. ಇದು ಬುದ್ಧಿವಂತರ ಜಿಲ್ಲೆ ಎಂದು ಹಣೆಪಟ್ಟಿ ಕಟ್ಟಿಕೊಂಡಿರುವ ನಮ್ಮ ಜಿಲ್ಲೆಯನ್ನು ಅಣಕಿಸುತ್ತಿರುವ ವ್ಯವಸ್ಥೆಯ ವಿರುದ್ಧ ಎಂದು ಹೇಳಿದರು. ಸಭೆಯಲ್ಲಿ ಸಾಹಿತ್ಯ ಕ್ಷೇತ್ರ, ನಾಟಕ, ಚಲನಚಿತ್ರ, ಯಕ್ಷಗಾನ, ಭರತನಾಟ್ಯ ಮುಂತಾದ ಕ್ಷೇತ್ರದ ಪ್ರತಿನಿಧಿಗಳು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಗೌರವಾಧ್ಯಕ್ಷ ರಾಮಚಂದ್ರ ಬೈಕಂಪಾಡಿ, ಕಾರ್ಯದರ್ಶಿ ಜಗನ್ ಪವಾರ್, ಕಿಶೋರ್ ಡಿ. ಶೆಟ್ಟಿ, ಚಿತ್ರ ನಿರ್ಮಾಪಕ ಪಮ್ಮಿ ಕೊಡಿಯಾಲ್‌ಬೈಲ್, ರಮೇಶ ಕುಕ್ಕುವಳ್ಳಿ, ಬಶೀರ್ ಬೈಕಂಪಾಡಿ, ಯತೀಶ್ ಬೈಕಂಪಾಡಿ, ಉಮೇಶ್ ಮಿಜಾರ್, ಡಾ.ಪ್ರಭಾಕರ್ ಜೋಶಿ, ಡಾ.ನರಸಿಂಹಮೂರ್ತಿ, ಸನಾತನ ನಾಟ್ಯಾಲಯದ ಚಂದ್ರಶೇಖರ ಶೆಟ್ಟಿ, ರಾಜೇಶ್ ಸ್ಕೈಲಾರ್ಕ್, ಚಿದಾನಂದ ಅದ್ಯಪಾಡಿ, ಸುರೇಶ್ ಬಜ್ಪೆ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News