ಪೊಲೀಸ್ ಇಲಾಖೆ ಮಹಿಳೆಯರ ರಕ್ಷಣೆಗೆ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ : ಬಸವರಾಜ ಬೊಮ್ಮಾಯಿ

Update: 2019-12-08 16:53 GMT

ಬೆಳ್ತಂಗಡಿ: ಉಜಿರೆಯ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ರವಿವಾರ ಬೆಳ್ತಂಗಡಿ ತಾಲೂಕಿನಲ್ಲಿ ರಾಜ್ಯ ಸರಕಾರದ ವಿವಿಧ ಇಲಾಖೆಗಳಿಂದ ಮಂಜೂರಾದ 347 ಕೋಟಿ ಅನುದಾನದ 818 ಕಾಮಗಾರಿಗಳ ಶಂಕುಸ್ಥಾಪನೆಯನ್ನು ಕರ್ನಾಟಕದ ಮುಖ್ಯ ಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ನೆರವೇರಿಸಿದರು. 

ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಸರಕಾರದ ಗೃಹ ಸಚಿವರಾದ ಬಸವರಾಜ ಬೊಮ್ಮಾಯಿ ರಾಜ್ಯದಲ್ಲಿ ಪೊಲೀಸ್ ಇಲಾಖೆ ಮಹಿಳೆಯರ ರಕ್ಷಣೆಗೆ ಎಲ್ಲ ರೀತಿಯ ಕ್ರಮವನ್ನು ಕೈಗೊಳ್ಳಲಿದೆ. ಮಹಿಳೆಯರಲ್ಲಿ ಆತ್ಮವಿಶ್ವಾಸ ತುಂಬುವ ಕಾರ್ಯವನ್ನು ಇಲಾಖೆ ಮಾಡಲಿದ್ದು ಅದಕ್ಕಾಗಿ ಈಗಾಗಲೆ ಹಲವು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಯಾವುದೇ ಸಂದರ್ಭದಲ್ಲಿ ಅಗತ್ಯವಿದ್ದರೆ ಮಹಿಳೆಯರು ಪೊಲೀಸರನ್ನು ಸಂಪರ್ಕಿಸಬಹುದಾಗಿದೆ ಇಲಾಖೆ ತಕ್ಷಣ ಅವರ ನೆರವಿಗೆ ಧಾವಿಸಲಿದೆ ಎಂದು ಹೇಳಿದರು.

ರಾಜ್ಯದ ಪೊಲೀಸ್ ಇಲಾಖೆಯನ್ನು ದೇಶಕ್ಕೆ ಮಾದರಿಯಾಗಿ ರೂಪಿಸುವ ಕಾರ್ಯ ಮಾಡಲಾಗುತ್ತಿದೆ. ಧರ್ಮಸ್ಥಳ ಪೊಲೀಸ್ ಠಾಣೆಗೆ ಹೊಸ ಕಟ್ಟಡ ಹಾಗೂ ಪೊಲೀಸ್ ವಸತಿ ಸಮುಚ್ಚಯ ನಿರ್ಮಾಣಕ್ಕೆ ಹಾಗೂ ಅಗ್ನಿ ಶಾಮಕ ಠಾಣೆ ಸ್ಥಾಪನೆಗೆ ಅನುದಾನ ಒದಗಿಸುವುದಾಗಿ ತಿಳಿಸಿದರು.

ರಾಜ್ಯದ ಉಪಮುಖ್ಯಮಂತ್ರಿ ಹಾಗೂ ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಸಚಿವರಾದ ಗೋವಿಂದ ಎಂ ಕಾರಜೋಳ ಅವರು ಮಾತನಾಡಿ ಶಂಕುಸ್ಥಾಪನೆಯಾಗಿರುವ ಎಲ್ಲ ಕಾಮಗಾರಿಗಳು ಮಾರ್ಚ್ ಅಂತ್ಯದೊಳಗೆ ಪೂರ್ಣಗೊಳಿಸಬೇಕಾಗಿದೆ ಇದಕ್ಕೆ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡಬೇಕಾಗಿದೆ. ಬೆಳ್ತಂಗಡಿಯ ರಸ್ತೆಗಳಿಗೆ ಇನ್ನು ಐದು ಕೊಟಿ ಅನುದಾನ ಒದಗಿಸುವುದಾಗಿ ಪ್ರಕಟಿಸಿದರು.

ತಾಲೂಕಿನ ಅಭಿವೃದ್ಧಿಯ ಬಗ್ಗೆ  ತಯಾರಿಸಲಾದ 'ಅಭಿವೃದ್ಧಿಯ ಬೆಸುಗೆ' ಪುಸ್ತಕವನ್ನು ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದರು. ವಿವಿಧ ಇಲಾಖೆಗಳ ಫಲಾನುಭಾವಿಗಳಿಗೆ ಸವಲತ್ತುಗಳನ್ನು ವಿತರಿಸಲಾಯಿತು. ಕ್ರೀಡೆಯಲ್ಲಿ ಉನ್ನತ ಸಾಧನೆ ಮಾಡಿದ ಬಂದಾರು ಶಾಲೆಯ ಮಕ್ಕಳಿಗೆ ನಗದು ಬಹುಮಾನವನ್ನು ವಿತರಿಸಲಾಯಿತು.

ವೇದಿಕೆಯಲ್ಲಿ ಶಾಸಕರುಗಳಾದ ಭರತ್ ಶೆಟ್ಟಿ, ರಾಜೇಶ್ ನಾಯಕ್, ವೇದವ್ಯಾಸ ಕಾಮತ್, ಸಂಜೀವ ಮಠಂದೂರು, ಜಿ.ಪಂ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಐಜಿ ಅರುಣ್ ಚಕ್ರವರ್ತಿ, ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್, ತಾ.ಪಂ ಅಧ್ಯಕ್ಷೆ ದಿವ್ಯಜ್ಯೋತಿ,  ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಬಿ.ಎಂ ಲಕ್ಷ್ಮೀ ಪ್ರಸಾದ್ ಹಾಗೂ ಇತರರು ಇದ್ದರು ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಸ್ವಾಗತಿಸಿದರು, ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News