ಪ್ರಮೋದ್ ನೇತೃತ್ವದಲ್ಲಿ ಎಸ್ಪಿ ಭೇಟಿ: ಶೀಘ್ರ ತನಿಖೆಗೆ ಒತ್ತಾಯ

Update: 2019-12-10 14:04 GMT

ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನಿಯೋಗದಿಂದ ಎಸ್ಪಿ ಭೇಟಿ

ಉಡುಪಿ, ಡಿ.10: ಕರ್ಜೆ ಸಮೀಪದ ಕುರ್ಪಾಡಿಯ ಶ್ರೇಯಸ್(19) ಎಂಬಾತನ ಅನುಮಾನಾಸ್ಪದ ಸಾವಿನ ಪ್ರಕರಣದ ಆರೋಪಿ ಗಳ ವಿರುದ್ಧ ಈವರೆಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ನೇತೃತ್ವ ದಲ್ಲಿ ಹೆತ್ತವರು ಹಾಗೂ ಗ್ರಾಮಸ್ಥರು ಮಂಗಳವಾರ ಉಡುಪಿ ಎಸ್ಪಿ ನಿಶಾ ಜೇಮ್ಸ್ ಅವರನ್ನು ಭೇಟಿ ಮಾಡಿ ಅಸಮಾಧಾನ ವ್ಯಕ್ತಪಡಿಸಿದರು.

ನ.5ರಂದು ಬಿಜೆಪಿ ಕಾರ್ಯಕರ್ತರಾದ ಸದಾನಂದ, ಯೋಗೀಶ್, ರಾಕೇಶ್ ಎಂಬವರು ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ಜೆ ಹರಾವು ಸಮೀಪದ ಮಡಿಸಾಲು ಹೊಳೆಯಲ್ಲಿ ತೋಟೆ(ಸ್ಪೋಟಕ) ಹಾಕಿ ಮೀನು ಹಿಡಿಯಲು ಶ್ರೇಯಸ್‌ನನ್ನು ಕರೆದು ಕೊಂಡು ಹೋಗಿದ್ದು, ಈ ವೇಳೆ ಸ್ಪೋಟಕ ಸಿಡಿದು ಶ್ರೇಯಸ್ ಮೃತಪಟ್ಟಿದ್ದರು. ಇದು ಪೂರ್ವಯೋಜಿತ ಕೊಲೆ ಎಂಬು ದಾಗಿ ಮೃತರ ತಾಯಿ ಶೋಭಾ ಹಾಗೂ ತಂದೆ ಸುರೇಶ್ ಸೇರ್ವೆಗಾರ್ ನೇರ ಆರೋಪ ಮಾಡಿದ್ದರು.

ಈ ಬಗ್ಗೆ ಸುರೇಶ್ ಸೇರ್ವೆಗಾರ್ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಪ್ರಕರಣ ದಾಖಲಿಸಲಾಗಿತ್ತು. ಈ ಕುರಿತು ನ.11ರಂದು ಮೃತರ ಮನೆಗೆ ಭೇಟಿ ನೀಡಿದ್ದ ಪ್ರಮೋದ್ ಮಧ್ವರಾಜ್ ತನಿಖೆ ಚುರುಕುಗೊಳಿಸಿ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಎಸ್ಪಿ ಅವರನ್ನು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಎಸ್ಪಿಯವರೇ ಮೃತರ ಮನೆಗೆ ಭೇಟಿ ನೀಡಿದ ಹೆತ್ತರಿಂದ ಮಾಹಿತಿ ಪಡೆದುಕೊಂಡಿದ್ದರು.

ಆದರೆ ಪ್ರಕರಣ ನಡೆದು ತಿಂಗಳು ಕಳೆದರೂ ಈವರೆಗೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಪ್ರಮೋದ್ ಮಧ್ವರಾಜ್, ಹೆತ್ತವರು, ಗ್ರಾಮಸ್ಥರು, ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರು ಎಸ್ಪಿ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆೆದು ಕೊಳ್ಳುವಂತೆ ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮೃತ ಶ್ರೇಯಸ್ ತಾಯಿ ಶೋಭಾ, ತಂದೆ ಸುರೇಶ್ ಸೇರ್ವೆಗಾರ್, ಜಿಪಂ ಸದಸ್ಯ ಸುಧಾಕರ ಶೆಟ್ಟಿ ಮೈರ್ಮಾಡಿ, ತಾಪಂ ಸದಸ್ಯರಾದ ಡಾ.ಸುನೀತಾ ಶೆಟ್ಟಿ, ಗೋಪಿ ನಾಯ್ಕಿ, ಮುಖಂಡರಾದ ಚಂದ್ರಿಕಾ ಶೆಟ್ಟಿ, ಗಣೇಶ್ ನೆರ್ಗಿ, ರಮೇಶ್ ಕಾಂಚನ್, ದಿನೇಶ್ ಪುತ್ರನ್ ಮೊದಲಾದವರು ಉಪಸ್ಥಿತರಿದ್ದರು.

ಎಫ್‌ಎಸ್‌ಎಲ್ ವರದಿಯ ನಿರೀಕ್ಷೆ: ಎಸ್ಪಿ

ಶ್ರೇಯಸ್ ಸಾವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ತನಿಖೆಯ ವರದಿಯು ಸಿದ್ಧ ಇದೆ. ಈಗಾಗಲೇ ಸಂಗ್ರಹಿಸಲಾದ ಕೆಲವೊಂದು ವಸ್ತುಗಳನ್ನು ಬೆಂಗಳೂರಿನ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಪರೀಕ್ಷೆಗಾಗಿ ಕಳುಹಿಸಿಕೊಡ ಲಾಗಿದ್ದು, ಇದರ ವರದಿಯ ನಿರೀಕ್ಷೆಯಲ್ಲಿ ಇದ್ದೇವೆ. ಈ ವರದಿ ಬಂದ ಕೂಡಲೇ ಪರಿಶೀಲಿಸಿ ಸೂಕ್ತ ಕ್ರಮ ತೆಗೆದುಕೊಳ್ಳ ಲಾಗುವುದು ಎಂದು ಎಸ್ಪಿ ನಿಶಾ ಜೇಮ್ಸ್ ತಿಳಿಸಿದರು.

ತನ್ನನ್ನು ಭೇಟಿಯಾದ ನಿಯೋಗಕ್ಕೆ ಭರವಸೆ ನೀಡಿದ ಎಸ್ಪಿ, ಈ ಪ್ರಕರಣದಲ್ಲಿ ಯಾವುದೇ ತಪ್ಪಿತಸ್ಥ ಆರೋಪಿಗಳನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಯಾವುದೇ ವ್ಯಕ್ತಿಯ, ರಾಜಕಾರಣಿಗಳ, ಪ್ರಭಾವಿಗಳ ಅಥವಾ ಇನ್ನಾವುದೇ ಮೂಲಗಳ ಪ್ರಭಾವಕ್ಕೆ ಮಣಿಯದೆ ಖಂಡಿತವಾಗಿಯೂ ಶ್ರೇಯಸ್‌ನ ಹೆತ್ತವರಿಗೆ ನ್ಯಾಯ ಒದಗಿಸಿಕೊಡಲಾಗುವುದು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News