ಸಿಐಟಿಯು ಅಭ್ಯರ್ಥಿಗಳ ಗೆಲುವು ಖಚಿತ: ಬಿ.ಕೆ. ಇಮ್ತಿಯಾಝ್

Update: 2019-12-10 14:30 GMT

ಮಂಗಳೂರು, ಡಿ.10: ಪಟ್ಟಣ ವ್ಯಾಪಾರ ಸಮಿತಿ ಚುನಾವಣೆಯಲ್ಲಿ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ (ಸಿಐಟಿಯು) ಎಲ್ಲ ಅಭ್ಯರ್ಥಿಗಳು ಜಯಶಾಲಿಯಾಗಲಿದ್ದಾರೆ ಎಂದು ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಗರದ ಸರಕಾರಿ ನೌಕರರ ಸಂಘದ ಸಭಾಂಗಣದಲ್ಲಿ ಪಟ್ಟಣ ವ್ಯಾಪಾರ ಸಮಿತಿ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಗೊಳಿಸಿ ಅವರು ಮಾತನಾಡುತ್ತಿದ್ದರು. ಬೀದಿಬದಿ ವ್ಯಾಪಾರಸ್ಥರ ಪರವಾಗಿ ಸಿಐಟಿಯು ದೇಶಾದ್ಯಂತ ಹೋರಾಟ ನಡೆಸಿದ ಫಲವಾಗಿ ಬೀದಿಬದಿ ವ್ಯಾಪಾರಸ್ಥರ ಜೀವನೋಪಾಯ ಹಕ್ಕುಗಳು ಮತ್ತು ನಿಯಂತ್ರಣ ವಿಧೇಯಕ-2014 ಜಾರಿಗೆ ಬಂದಿದೆ. ಈ ಕಾಯ್ದೆಯ ನಿರ್ದೇಶನದಂತೆ ಚುನಾವಣೆ ನಡೆಯುತ್ತಿದೆ ಎಂದರು.

ಚುನಾವಣೆ ನಂತರ ರಸ್ತೆಬದಿ ವ್ಯಾಪಾರಸ್ಥರ ಮೇಲಿನ ದೌರ್ಜನ್ಯಗಳಿಗೆ ಕಡಿವಾಣ ಬೀಳಲಿದೆ. ಬೀದಿಬದಿ ವ್ಯಾಪಾರಸ್ಥರ ಸಮಸ್ಯೆಗಳ ಪರಿಹಾರಕ್ಕೆ ಕಾನೂನಾತ್ಮಕ ವೇದಿಕೆ ಸೃಷ್ಟಿ ಆಗಲಿದೆ. ರಸ್ತೆ ಬದಿ ವ್ಯಾಪಾರಸ್ಥರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಡಿ.21ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಅಧಿಸೂಚನೆ ಪ್ರಕಟವಾದೆ. ಬೀದಿಬದಿ ವ್ಯಾಪಾರಸ್ಥರ ಗುರುತು ಚೀಟಿ ಮತ್ತು ಪ್ರಮಾಣಪತ್ರ ಹೊಂದಿರುವ ಬೀದಿಬದಿ ವ್ಯಾಪಾರಸ್ಥರು ಚುನಾವಣೆಯಲ್ಲಿ ಸ್ಪರ್ಧಿಸಲು ಮತ್ತು ಮತದಾನ ಮಾಡಲು ಅರ್ಹರಾಗಿರುತ್ತಾರೆ ಎಂದು ಹೇಳಿದರು.

ಪಟ್ಟಣ ವ್ಯಾಪಾರ ಸಮಿತಿಯ 10 ಸ್ಥಾನಗಳಿಗೆ ಚುನಾವಣೆ ನಡೆಯುತ್ತದೆ. 3 ಮಹಿಳಾ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಅಲ್ಪಸಂಖ್ಯಾತ, ಹಿಂದುಳಿದ ವರ್ಗ, ಅಂಗವಿಕಲ ವಿಭಾಗದಲ್ಲಿ ತಲಾ ಒಬ್ಬರು ಮತ್ತು ಸಾಮಾನ್ಯ ವಿಭಾಗದಲ್ಲಿ ಇಬ್ಬರು ಅಭ್ಯರ್ಥಿ ಗಳು ಸ್ಪರ್ಧಿಸಲಿದ್ದಾರೆ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಎಲ್ಲ 10 ಅಭ್ಯರ್ಥಿಗಳ ಆಯ್ಕೆಯನ್ನು ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ಪ್ರಕಟಿಸಿ ಸರ್ವ ಸದಸ್ಯರ ಅನುಮೋದನೆ ಪಡೆಯಲಾಯಿತು. ಸಂಘದ ಗೌರವಾಧ್ಯಕ್ಷ ಬಿ.ಕೆ. ಇಮ್ತಿಯಾಝ್ ನೇತೃತ್ವದಲ್ಲಿ ಚುನಾವಣೆ ಎದುರಿಸಲು ತೀರ್ಮಾನಿಸಲಾಯಿತು.

 ಈ ಸಂದರ್ಭ ಸಂಘದ ಅಧ್ಯಕ್ಷ ಮುಹಮ್ಮದ್ ಮುಸ್ತಫ ಅಧ್ಯಕ್ಷತೆ ವಹಿಸಿದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ಹರೀಶ್ ಪೂಜಾರಿ ಸಂಘದ ಮುಖಂಡರಾದ ಹಸನ್ ಕುದ್ರೋಳಿ, ಶಿವಪ್ಪ, ಹಿತೇಶ್, ಶ್ರೀಧರ, ಆದಮ್ ಬಜಾಲ್, ಸಿಖಂದರ್, ಶಂಕರ್, ನಾಗರಾಜ್, ಮಾರುತಿ, ಮೇರಿ, ಸಿದ್ದಮ್ಮ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News