ಸ್ಪರ್ಶ ಯೋಜನೆಯ ಮೂಲಕ ಕ್ಯಾನ್ಸರ್ ಜಾಗೃತಿ

Update: 2019-12-10 14:34 GMT

ಮಂಗಳೂರು, ಡಿ.10: ಸಿಒಡಿಪಿ ಮಂಗಳೂರು ಮತ್ತು ಕಾರಿತಾಸ್ ಇಂಡಿಯಾ ಇವರ ಜಂಟಿ ಆಶ್ರಯದಲ್ಲಿ ಕ್ಯಾನ್ಸರ್ ಕಾಯಿಲೆ ವಿರುದ್ಧ ಆಂದೋಲನ ‘ಸ್ಪರ್ಶ’ ಯೋಜನೆಗೆ ಸಿಒಡಿಪಿಯ ಸಭಾಂಗಣದಲ್ಲಿ ಚಾಲನೆ ನೀಡಲಾಯಿತು.

ಸ್ಪರ್ಶ ಯೋಜನೆಯ ಲಾಂಛನ ಬಿಡುಗಡೆ ಮಾಡಿ ಮಾತನಾಡಿದ ಮಂಗಳೂರು ಧರ್ಮಪ್ರಾಂತದ ಧರ್ಮಾಧ್ಯಕ್ಷ ಅ.ವಂ.ಡಾ.ಪೀಟರ್ ಪೌಲ್ ಸಲ್ಡಾನ, ಸಮಾಜದಲ್ಲಿ ಅತ್ಯಾಧುನಿಕ ಉಪಕರಣಗಳು ಹಾಗೂ ಸುಸರ್ಜಿತ ಆಸ್ಪತ್ರೆಗಳು ಇವೆ. ಆದರೆ ಕ್ಯಾನ್ಸರ್ ಪೀಡಿತರಿಗೆ ಸರಿಯಾದ ಪುನರ್ ವಸತಿ ಕೇಂದ್ರಗಳು ಇಲ್ಲದಿರುವುದು ವಿಪರ್ಯಾಸ. ಈ ನಿಟ್ಟಿನಲ್ಲಿ ಸಿಒಡಿಪಿ ಹಾಗೂ ಕಾರಿತಾಸ್ ಇಂಡಿಯಾ ಕೈಗೆತ್ತಿಕೊಂಡಿರುವ ಕ್ಯಾನ್ಸರ್ ಜಾಗೃತಿ, ಪತ್ತೆ ಹಚ್ಚಿ ಚಿಕಿತ್ಸೆ ಮಾಡುವುದು ಮತ್ತು ಕ್ಯಾನ್ಸರ್ ರೋಗ ತಡೆಗಟ್ಟುವ ಈ ಸ್ಪರ್ಶ ಯೋಜನೆ ಶ್ಲಾಘನೀಯ ಎಂದರು.

ಫಾದರ್ ಮುಲ್ಲರ್ ಆಸ್ಪತ್ರೆಯ ನಿರ್ದೇಶಕ ವಂ.ಫಾ.ರಿಚರ್ಡ್ ಕುವೆಲ್ಲೊ ಮಾತನಾಡಿ, ಲಕ್ಷ್ಮಣಫಲ ಗಿಡಕ್ಕೆ ನೀರೆರೆಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಕಂಕನಾಡಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಮಾಹಿತಿ ನೀಡಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಷ್ಮಾನ್ ಭಾರತ್/ಆರೋಗ್ಯ ಕರ್ನಾಟಕ ಯೋಜನೆಯ ಜಿಲ್ಲಾ ಸಂಯೋಜನಾ ಅಧಿಕಾರಿ ಸಚಿದಾನಂದ ಎಂ.ಎಲ್. ಆರೋಗ್ಯ ಸಂಬಂಧ ಸರಕಾರದಿಂದ ಲಭಿಸುವ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು.

ಸಂಪನ್ಮೂಲ ವ್ಯಕ್ತಿ ಎ.ಜೆ. ಆಸ್ಪತ್ರೆಯ ವೈದ್ಯ ಡಾ.ನವೀನ್ ರುಡೊಲ್ಫ್ ರೊಡ್ರಿಗಸ್ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಸವಿಸ್ತರವಾಗಿ ಮಾತನಾಡಿದರು. ಜೆಸೆಲ್ ಡಿಸೋಜ ಕ್ಯಾನ್ಸರ್ ರೋಗದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

ಸಿಒಡಿಪಿ ಸಂಸ್ಥೆಯ ನಿರ್ದೇಶಕ ವಂ.ಫಾ.ಓಸ್ವಲ್ಡ್ ಮೊಂತೇರೊ ಸ್ವಾಗತಿಸಿದರು. ಸಿಒಡಿಪಿ ಸಂಸ್ಥೆಯ ಸಿಬ್ಬಂದಿ ಶಿಲ್ಪಾ ರೈನಾ ಡಿಸೋಜ ಹಾಗೂ ಲೆನೆಟ್ ಗೊನ್ಸಾಲ್ವಿಸ್ ಕಾರ್ಯಕ್ರಮ ನಿರೂಪಿಸಿದರು. ಸಿಒಡಿಪಿ ಸಂಸ್ಥೆಯ ಸಂಯೋಜಕಿ ರೀಟಾ ಡಿಸೋಜ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News