ಕುಂದಾಪುರ: 14ಕ್ಕೆ ಭಾಕಿಸಂನಿಂದ ಜಿಲ್ಲಾ ರೈತ ಸಮ್ಮೇಳನ

Update: 2019-12-10 15:55 GMT

ಉಡುಪಿ, ಡಿ.10: ರಾಷ್ಟ್ರಮಟ್ಟದಲ್ಲಿ ರಾಜಕೀಯ ರಹಿತ ಅತೀ ದೊಡ್ಡ ರೈತ ಸಂಘಟನೆಯಾದ ಭಾರತೀಯ ಕಿಸಾನ್ ಸಂಘ ಕರ್ನಾಟಕ ಪ್ರದೇಶದ ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಉಡುಪಿ ಜಿಲ್ಲಾ ಮಟ್ಟದ 12ನೇ ರೈತ ಸಮ್ಮೇಳನ ಡಿ.14ರ ಶನಿವಾರ ಕುಂದಾಪುರದಲ್ಲಿ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ನವೀನ್‌ಚಂದ್ರ ಜೈನ್ ನಿಟ್ಟೆ ತಿಳಿಸಿದ್ದಾರೆ.

ಉಡುಪಿಯಲ್ಲಿ ಇಂದು ಭಾಕಿಸಂ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1979ರ ಮಾ.4ರಂದು ರಾಜಸ್ಥಾನದ ಕೋಟಾದಲ್ಲಿ ಪ್ರಾರಂಭಗೊಂಡ ಭಾಕಿಸಂ ಇಂದು ದೇಶಾದ್ಯಂತ 50ಸಾವಿರಕ್ಕೂ ಅಧಿಕ ಗ್ರಾಮಗಳಲ್ಲಿ 20 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ ಎಂದರು.

ಉಡುಪಿ ಜಿಲ್ಲೆಯಲ್ಲೂ 200ಕ್ಕೂ ಅಧಿಕ ಗ್ರಾಮಗಳಲ್ಲಿ ಸಕ್ರೀಯವಾಗಿರುವ ಭಾಕಿಸಂ, 20000 ಕುಟುಂಬಗಳನ್ನು ಸದಸ್ಯರಾಗಿ ಹೊಂದಿದೆ. ಜಿಲ್ಲಾ ಸಮ್ಮೇಳನಗಳ ಮೂಲಕ ಕೃಷಿಕ ವರ್ಗವನ್ನು ಸಂಘಟಿಸಿ, ಅವರಿಗೆ ಕೃಷಿ ಕ್ಷೇತ್ರದ ಕುರಿತು ಸಮಗ್ರ ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದೆ. ಅಲ್ಲದೇ ಕೃಷಿಕ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿ ಅವುಗಳ ಪರಿಹಾರಕ್ಕೂ ಚಿಂತನೆ ನಡೆಸುವ ಹಾಗೂ ಕೃಷಿ ಕ್ಷೇತ್ರದ ಹೊಸ ಆವಿಷ್ಕಾರಗಳನ್ನು ಪರಿಚಯಿಸುವ ಪ್ರಯತ್ನ ನಡೆಯಲಿದೆ ಎಂದರು.

ಈ ಬಾರಿಯ ಜಿಲ್ಲಾ ರೈತ ಸಮ್ಮೇಳನ ಡಿ.14ರ ಶನಿವಾರ ಕುಂದಾಪುರದ ಶ್ರೀವ್ಯಾಸರಾಜ ಕಲಾಮಂದಿರದಲ್ಲಿ ಬೆಳಗ್ಗೆ 9ರಿಂದ ಸಂಜೆ 4:30ರವರೆಗೆ ನಡೆಯಲಿದೆ. ಸಮ್ಮೇಳನವನ್ನು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್‌ ಉದ್ಘಾಟಿಸಲಿದ್ದಾರೆ. ಭಾಕಿಸಂನ ರಾಷ್ಟ್ರೀಯ ಅಧ್ಯಕ್ಷ ಐ.ಎನ್.ಬಸವೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ದ.ಕ.ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ ಕೊಡವೂರು, ಕಾಸರಗೋಡು ಸಿಪಿಸಿಆರ್‌ಐನ ಕಾರ್ಯ ನಿರ್ವಾಹಕ ನಿರ್ದೇಶಕರಾದ ಡಾ.ಅನಿತಾ ಕರುಣ್, ರಾಜ್ಯ ಸಾವಯವ ಕೃಷಿ ಮಿಷನ್‌ನ ಅಧ್ಯಕ್ಷ ಆ.ಶ್ರೀ.ಆನಂದ, ಮಂಗಳೂರು ಹಾಪ್‌ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪ ಭಾಗವಹಿಸುವರು.

ಬಳಿಕ ಕೃಷಿಗೆ ಸಂಬಂಧಿಸಿದಂತೆ ಎರಡು ಗೋಷ್ಠಿಗಳು 11:45ಕ್ಕೆ ಹಾಗೂ ಅಪರಾಹ್ನ 2:00ಕ್ಕೆ ನಡೆಯಲಿವೆ. ಹಲವು ಕೃಷಿ ತಜ್ಞರು, ಪ್ರಗತಿಪರ ಕೃಷಿಕರು, ವಿಷಯ ತಜ್ಞರು ಗೋಷ್ಠಿಗಳಲ್ಲಿ ವಿಷಯ ಮಂಡನೆ ಮಾಡಲಿದ್ದಾರೆ. ಸಮಾರೋಪ ಸಮಾರಂಭ 3:30ಕ್ಕೆ ಭಾಕಿಸಂನ ಕರ್ನಾಟಕ ಪ್ರದೇಶ ಅಧ್ಯಕ್ಷ ಪುಟ್ಟಸ್ವಾಮಿ ಗೌಡರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಗಂಗಾಧರ ಕಾಸರಘಟ್ಟ ಸಮಾರೋಪ ಭಾಷಣ ಮಾಡಲಿದ್ದಾರೆ.

ಒಂದು ದಿನದ ಈ ಜಿಲ್ಲಾ ರೈತ ಸಮ್ಮೇಳನದಲ್ಲಿ 3,000 ಮಂದಿ ರೈತರು ಭಾಗವಹಿಸುವ ನಿರೀಕ್ಷೆ ಇದೆ. ಅಲ್ಲದೇ 20ಕ್ಕೂ ಅಧಿಕ ಕೃಷಿ ಸಂಬಂಧಿಸಿದ ಮಳಿಗೆಗಳು ಆಗಮಿಸುವ ನಿರೀಕ್ಷೆ ಇದೆ ಎಂದು ಜೈನ್ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಬಿ.ವಿ. ಪೂಜಾರಿ, ಜಿಲ್ಲಾ ಪ್ರಧಾನ ಕಾರ್ಯದಶಿ ಸತ್ಯನಾರಾಯಣ ಉಡುಪ, ಜಿಲ್ಲಾ ಉಪಾಧ್ಯಕ್ಷರಾದ ರಾಮಚಂದ್ರ ಅಲ್ಸೆ, ಶ್ರೀನಿವಾಸ್ ಟ್, ಕುಂದಾಪುರ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗ, ಉಡುಪಿ ತಾಲೂಕು ಅಧ್ಯಕ್ಷ ಪಾಂಡುರಂಗ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಆಸ್ತಿಕ ಶಾಸ್ತ್ರೀ, ಕಾರ್ಕಳ ತಾಲೂಕು ಅಧ್ಯಕ್ಷ ಉಮಾನಾಥ ರಾನಡೆ, ಪ್ರಧಾನ ಕಾರ್ಯದರ್ಶಿ ಚಂದ್ರಹಾಸ ಶೆಟ್ಟಿ, ಜಿಲ್ಲಾ ಸಮಿತಿ ಸದಸ್ಯರಾದ ರಾಜೀವ್ ಶೆಟ್ಟಿ, ಅನಂತಪದ್ಮನಾ ಉಡುಪ, ಮಹಾಬಲ ಬಾಯರಿ, ಸುಂದರ ಶೆಟ್ಟಿ, ಕೆ.ಪಿ.ಭಂಡಾರಿ, ಸದಾನಂದ ಶೆಟ್ಟಿ, ಗೋವಿಂದರಾಜ್ ಭಟ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News