ಈರುಳ್ಳಿ ದರ ಏರಿಕೆ ವಿರೋಧಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಪ್ರತಿಭಟನೆ

Update: 2019-12-10 15:59 GMT

ಮಂಗಳೂರು, ಡಿ.10: ದಿನಬಳಕೆಯ ವಸ್ತು ಈರುಳ್ಳಿ ದರ ಏರಿಕೆ ವಿರೋಧಿಸಿ ಹಾಗೂ ಕೇಂದ್ರ ಸರಕಾರದ ಜನವಿರೋಧಿ ನೀತಿ ಖಂಡಿಸಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಮಂಗಳವಾರ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರು ಈರುಳ್ಳಿ ಕಟ್ಟಿದ ಹಾರ ಧರಿಸಿ ಪ್ರತಿಭಟಿಸಿದರು.

ಪ್ರತಿಭಟನಾ ಸಭೆ ಉದ್ದೇಶಿಸಿ ಮಾತನಾಡಿದ ಜಿಲ್ಲಾ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆ ಶಾಲೆಟ್ ಪಿಂಟೊ, ಜನಸಾಮಾನ್ಯರು ಹಾಗೂ ಮಧ್ಯಮ ವರ್ಗದ ಜನರು ಈರುಳ್ಳಿಗಾಗಿ ಕಣ್ಣೀರು ಸುರಿಸುವ ಪರಿಸ್ಥಿತಿ ಬಂದೊದಗಿದೆ. ಮಹಿಳೆಯರಿಗೆ ಇದೊಂದು ಕಷ್ಟದ ಕಾಲವಾಗಿದೆ. ಪ್ರತಿ ಕೆ.ಜಿ. ಈರುಳ್ಳಿ ದರ ದ್ವಿ ಶತಕ ದಾಟಿದೆ. ಇದೇ ಸ್ಥಿತಿ ಮುಂದುವರಿದರೆ ದುರಂತದ ದಿನಗಳು ಬರಲಿವೆ ಎಂದು ಆತಂಕ ವ್ಯಕ್ತಪಡಿಸಿದರು.

2014ರಲ್ಲಿ ಗುಜರಾತ್‌ನಲ್ಲಿ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಆಡಳಿತ ನಡೆಸುತ್ತಿದ್ದ ಮನ್‌ಮೋಹನ್ ಸಿಂಗ್ ಅವರನ್ನು ಟೀಕಿಸಿದ್ದರು. ‘ದೇಶದಲ್ಲಿ ಅತ್ಯಾಚಾರ ನಿಲ್ಲಬೇಕಾದರೆ, ಈರುಳ್ಳಿ ದರ ಇಳಿಕೆಯಾಗಬೇಕಾದರೆ, ಜನತೆ ಬಿಜೆಪಿಗೆ ಮತ ಚಲಾಯಿಸಬೇಕು’ ಎಂದು ಭರವಸೆ ನೀಡಿದ್ದರು. ಸುಳ್ಳು ಭರವಸೆ ನಂಬಿದ ಜನತೆ ಮತ ನೀಡಿ ಗೆಲ್ಲಿಸಿದ್ದರು. ಅದರ ಪರಿಣಾಮ ದೇಶ ಇಂದು ಸಂಕಷ್ಟದಲ್ಲಿ ಸಿಲುಕಿದೆ. ದೇದಲ್ಲಿ ಅತ್ಯಾಚಾರ-ಅನಾಚಾರ ತಾಂಡವವಾಡುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈರುಳ್ಳಿ ದರ ಏರಿಕೆ ಬಗ್ಗೆ ಲೋಕಸಭೆಯಲ್ಲಿ ಸಂಸದರೊಬ್ಬರ ಪ್ರಶ್ನೆಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ತಾವು ಈರುಳ್ಳಿಯನ್ನೇ ಬಳಸುವುದಿಲ್ಲ ಎಂದು ಹೇಳುವ ಮೂಲಕ ಜನತೆಯ ಕಷ್ಟದಲ್ಲಿ ಭಾಗಿಯಾಗದೆಯೇ ನುಣುಚಿಕೊಂಡಿದ್ದಾರೆ. ಈರುಳ್ಳಿಯನ್ನು ಸಚಿವೆ ಬಳಸುವುದಿಲ್ಲ ಎನ್ನುವುದಾದರೆ ಜನಸಾಮಾನ್ಯರೂ ಬಳಸಬಾರದೇ ಎಂದು ಅವರು ಪ್ರಶ್ನಿಸಿದರು.

ಈರುಳ್ಳಿ ದರ ಏರಿಕೆಯಿಂದ ದೇಶವೇ ತತ್ತರಿಸುವ ಸಮಯದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಈರುಳ್ಳಿ ದರ ಇಳಿಕೆ ಮಾಡಿದ್ದಾರೆ. ದಿಲ್ಲಿವಾಲಾಗಳ ಸಂಕಷ್ಟಕ್ಕೆ ಸ್ಪಂದಿಸಿದ್ದಾರೆ. ಅದರಂತೆ, ರಾಜ್ಯದಲ್ಲೂ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರಕಾರವು ಈರುಳ್ಳಿ ದರವನ್ನು ಕೂಡಲೇ ಇಳಿಕೆ ಮಾಡಬೇಕು ಎಂದು ಶಾಲೆಟ್ ಪಿಂಟೊ ಆಗ್ರಹಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿರುವ ಬಿಜೆಪಿ ಸರಕಾರಗಳಿಗೆ ಅಭಿವೃದ್ಧಿ ಕೆಲಸಗಳು ಬೇಕಾಗಿಲ್ಲ. ಕೇವಲ ಧರ್ಮದ ಹೆಸರಿನಲ್ಲಿ ರಾಜಕಾರಣ ಮಾಡುತ್ತಿವೆ. ದೇಶದಲ್ಲಿ ಆರ್ಥಿಕ ಹಿಂಜರಿತದಿಂದಾಗಿ ಎಲ್ಲ ಕ್ಷೇತ್ರಗಳೂ ಪಾತಾಳಕ್ಕೆ ಕುಸಿಯುತ್ತಿವೆ. ಸರಕಾರದ ವಿರುದ್ಧ ಮಾತನಾಡುವವರನ್ನು ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು ಅವರು, ಸರಕಾರಗಳು ಜನರ ಕಷ್ಟಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.

ಈರುಳ್ಳಿ ದರ 50 ರೂ. ಇದ್ದಾಗ ಬಿಜೆಪಿ ನಾಯಕಿಯರಾದ ಸ್ಮತಿ ಇರಾನಿ, ಶೋಭಾ ಕರಂದ್ಲಾಜೆ ಸೇರಿದಂತೆ ಮಹಿಳಾ ಮೋರ್ಚಾ ಮುಖಂಡರು ಬೀದಿಗೆ ಬಂದು ಪ್ರತಿಭಟಿಸಿದ್ದರು. ಇಂದು 200 ರೂ. ಗಡಿ ದಾಟಿದ್ದರೂ ತುಟಿ ಬಿಚ್ಚುತ್ತಿಲ್ಲ. ಬಿಜೆಪಿ ನಾಯಕಿಯರು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ.

ಪ್ರತಿಭಟನೆಯಲ್ಲಿ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಿತಿ ಸದಸ್ಯರಾದ ಜೆಸಿಂತಾ ಆಲ್ಫ್ರೆಡ್, ಶಾಂತಲಾ ಗಟ್ಟಿ, ಸುರೇಖಾ ಚಂದ್ರಹಾಸ್, ಶೋಭಾ ಕೇಶವ್, ಮಲ್ಲಿಕಾ ಶೆಟ್ಟಿ, ದೇವಕಿ ಉಳ್ಳಾಲ, ವೃಂದಾ ಪೂಜಾರಿ, ರತಿಕಲಾ, ನಮಿತಾ ಡಿ. ರಾವ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News