×
Ad

ಬಂಟ್ವಾಳ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಸಿಎಫ್‍ಐ ಧರಣಿ

Update: 2019-12-10 22:09 IST

ಬಂಟ್ವಾಳ, ಡಿ. 10: ಪೌರತ್ವ ತಿದ್ದುಪಡಿ ಮಸೂದೆ ಕೇಂದ್ರ ಸಂಪುಟ ಸಭೆಯ ಅನುಮೋದನೆಗೆ ಆಕ್ಷೇಪ ವ್ಯಕ್ತಪಡಿಸಿ, ಪೌರತ್ವ ಮಸೂದೆಯನ್ನು ಹಿಂಪಡೆಯುವಂತೆ ಒತ್ತಾಯಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಬಂಟ್ವಾಳ ಸಮಿತಿ ವತಿಯಿಂದ ಬಿ.ಸಿ.ರೋಡ್ ಕೈಕಂಬ ಜಂಕ್ಷನ್‍ನಲ್ಲಿ ಮಂಗಳವಾರ ಸಂಜೆ ಧರಣಿ ನಡೆಯಿತು.

ಸಿಎಫ್‍ಐ ಜಿಲ್ಲಾ ಮುಖಂಡ ಸವಾದ್ ಪುತ್ತೂರು ಧರಣಿನಿರತರನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸಂಪುಟ ಸಭೆಯು ಅನುಮೋದನೆಗೊಳಿಸಿದ ಪೌರತ್ವ ಮಸೂದೆಯು ಸಂವಿಧಾನ ವಿರೋಧಿಯಾಗಿದೆ. ಯಾವುದೇ ಕಾಯಿದೆಯನ್ನು ಜಾರಿಗೊಳಿಸು ವಾಗ ಒಂದು ಧರ್ಮವನ್ನು ಗುರುಪಡಿಸುವುದು ಸರಿಯಲ್ಲ. ಸಮಾನತೆ, ಸಮಾನ ಕಾನೂನು, ಸಮಾನ ನ್ಯಾಯ ಸಂವಿಧಾನದ ಆಶಯವಾಗಿದ್ದು, ಇದು ಸಂವಿಧಾನದ 14ನೇ ವಿಧಿಯ ನೇರ ಉಲ್ಲಂಘನೆಯಾಗಿದೆ ಎಂದು ಹೇಳಿದರು.

ಸಿಎಫ್‍ಐ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷ ಫಹದ್ ಅನ್ವರ್ ತಲಪಾಡಿ ಮಾತನಾಡಿ, ಈ ದೇಶದಲ್ಲಿ ಜನಿಸಿದ ಪ್ರತಿಯೊಬ್ಬ ವ್ಯಕ್ತಿಯೂ ಪೌರರಾಗಿದ್ದು, ಸುಮಾರು 5 ವರ್ಷಗಳ ವಾಸ್ತವ್ಯವನ್ನು ಹೊಂದಿರುವವರು ದೇಶದ ಪೌರತ್ವ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ಕೇವಲ ಮುಸ್ಲಿಮರನ್ನು ಗುರಿಯಾಗಿಸುವ ಹಿಂದುತ್ವದ ಮಸೂದೆಯಾಗಿದೆ. ಇದು ನುಸುಳುಕೋರರ ತಡೆಯುವ ಮಸೂದೆ ಅಲ್ಲ. ಈ ದೇಶದಿಂದ ಮುಸ್ಲಿಮರನ್ನು ಹತ್ತಿಕ್ಕುವ ಮತ್ತು ಅವರ ಹಕ್ಕನ್ನು ಕಸಿಯುವ ಕರಾಳ ಮಸೂದೆಯಾಗಿದೆ ಎಂದು ಹೇಳಿದರು.

ಸಿಎಫ್‍ಐ ಬಂಟ್ವಾಳ ಸಮಿತಿಯ ಪ್ರಮುಖರಾದ ರಮ್ಲಾನ್, ಹಮೀದ್, ಹಂದನ್, ಸಾಬಿತ್ ಹಾಜರಿದ್ದರು. ಅಸ್ವರ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News