ಉಳ್ಳಾಲ ದರ್ಗಾ ಅಧೀನ ಸಂಸ್ಥೆಗಳ ಅವ್ಯವಹಾರ ಆರೋಪ: ತನಿಖೆಗೆ ಸಯ್ಯದ್ ಮದನಿ ಮೊಹಲ್ಲಾ ಒಕ್ಕೂಟ ಒತ್ತಾಯ

Update: 2019-12-11 13:45 GMT

ಮಂಗಳೂರು, ಡಿ.11: ಉಳ್ಳಾಲ ದರ್ಗಾ ಮತ್ತು ಅಧೀನ ಸಂಸ್ಥೆಗಳಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು, ಮೊಹಲ್ಲ- ವಿವಿಧ ಮದ್ರಸ, ಶಾಲಾ ಕಾಲೇಜುಗಳ ಅಧ್ಯಾಪಕರಿಗೆ ಬಾಕಿ ಇರಿಸಿರುವ ವೇತನವನ್ನು ಶೀಘ್ರ ಪಾವತಿಸಬೇಕು, ನ್ಯಾಯಸಮ್ಮತವಾದ ಚುನಾವಣೆ ನಡೆಸಿ ಉತ್ತಮ ಆಡಳಿತ ಸಮಿತಿ ರೂಪಿಸಬೇಕು ಎಂದು ಉಳ್ಳಾಲದ ಸಯ್ಯದ್ ಮದನಿ ಮೊಹಲ್ಲಾ ಒಕ್ಕೂಟ ಆಗ್ರಹಿಸಿದೆ.

ಉಳ್ಳಾಲ ದರ್ಗಾ ಸಮಿತಿಗೆ ಚುನಾವಣೆ ನಡೆಸದೇ, ಅನಧಿಕೃತವಾಗಿ ಆಡಳಿತವನ್ನು ವಶಪಡಿಸಿಕೊಂಡು ಸ್ವಯಂ ಘೋಷಿತವಾಗಿ ಪದಾಧಿಕಾರಿಗಳನ್ನು ನೇಮಿಸಿ ಪ್ರಸ್ತುತ ವಜಾಗೊಂಡಿರುವ ಅಬ್ದುಲ್ ರಶೀದ್ ಮತ್ತು ಸಹವರ್ತಿಗಳು ಕಳೆದ ಮೂರೂವರೆ ವರ್ಷಗಳಿಂದ ಕಾನೂನು ಉಲ್ಲಂಘನೆ, ಅವ್ಯವಹಾರ, ಭ್ರಷ್ಟಾಚಾರ, ದಬ್ಬಾಳಿಕೆ, ಸರ್ವಾಧಿಕಾರ ಮತ್ತು ಸಮಾಜಘಾತುಕ ಶಕ್ತಿಗಳಿಗೆ ಪೋಷಣೆ ನೀಡುತ್ತಾ ಬಂದಿದ್ದಾರೆ. ಈ ಬಗ್ಗೆ ಊರಿನ ಸಮಸ್ತ ನಾಗರಿಕರ ದೂರಿನಂತೆ ರಾಜ್ಯ ವಕ್ಫ್ ಮಂಡಳಿ ಉಳ್ಳಾಲ ದರ್ಗಾಕ್ಕೆ ಆಡಳಿತಾಧಿಕಾರಿ ನೇಮಿಸಿರುವುದು ಸ್ವಾಗತಾರ್ಹ ಎಂದು ಸಯ್ಯದ್ ಮದನಿ ಮೊಹಲ್ಲಾ ಒಕ್ಕೂಟ ಅಧ್ಯಕ್ಷ ಪಿ.ಎಸ್. ಮುಹಮ್ಮದ್ ಶಿಹಾಬುದ್ದೀನ್ ಸಖಾಫಿ ಅಲ್ ಕಾಮಿಲ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಉಳ್ಳಾಲ ದರ್ಗಾಕ್ಕೆ ಆಡಳಿತಾಧಿಕಾರಿ ನೇಮಿಸಿದ ಬಗ್ಗೆ ಈ ಹಿಂದಿನ ಆಡಳಿತ ಮಂಡಳಿ ಅಯೋಧ್ಯೆ, ದತ್ತಪೀಠದಂತೆ ಉಳ್ಳಾಲ ದರ್ಗಾವನ್ನೂ ಸರಕಾರ ವಶಪಡಿಸಿಕೊಳ್ಳಲು ಮುಂದಾಗಿದೆ ಎಂಬ ತಪ್ಪು ಮಾಹಿತಿ ರವಾನಿಸುತ್ತಿದೆ. ಸರಕಾರದ ವಿರುದ್ಧ ಜನತೆ ಸಿಡಿದೇಳುವಂತೆ ಮಾಡಲಾಗುತ್ತಿದೆ. ಆಡಳಿತಾಧಿಕಾರಿಯನ್ನು ಹಿಮ್ಮೆಟ್ಟಿಸುತ್ತೇವೆ ಎಂದು ಬಹಿರಂಗವಾಗಿ ಕರೆ ನೀಡುತ್ತಿರುವ ಅಬ್ದುಲ್ ರಶೀದ್ ಅವರ ವಿರುದ್ಧ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಹಿಂದಿನ ಆಡಳಿತ ಮಂಡಳಿ ದರ್ಗಾ ಅಧೀನದ ಪಂಪ್‌ವೆಲ್ ಬಳಿಯ ಜಾಗ ಮತ್ತು ಕಟ್ಟಡವನ್ನು ಮಾರಾಟ ಮಾಡಿದೆ. ಉಳ್ಳಾಲ ಒಂಭತ್ತುಕೆರೆಯ ಸಯ್ಯದ್ ಮದನಿ ತಾಂತ್ರಿಕ ಸಂಸ್ಥೆ ಹೆಸರು ಬದಲಾಯಿಸಲಾಗಿದೆ. ವಕ್ಫ್ ಮಂಡಳಿ ನಿರ್ಣಯ, ಹೈಕೋರ್ಟ್ ಆದೇಶಕ್ಕೆ ವಿರುದ್ಧವಾಗಿ ಮದ್ರಸಾ ಪಠ್ಯ ಬದಲಿಸಿ ಗೊಂದಲ ಸೃಷ್ಟಿಸಲಾಗಿದೆ, ಖಾಝಿ ತೀರ್ಮಾನಕ್ಕೆ ವಿರುದ್ಧವಾಗಿ ಹಬ್ಬಗಳ ಆಚರಣೆಯಲ್ಲಿ ಗೊಂದಲ ಮೂಡಿಸಲಾಗಿದೆ, ಸಂಸ್ಥೆಯ ಸಿಬ್ಬಂದಿಗೆ ವೇತನ ಪಾವತಿ ಆಗಿಲ್ಲ ಎಂದು ಆರೋಪಿಸಿದರು.

ಒಕ್ಕೂಟ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಮಂಚಿಲ, ಸಮಿತಿ ಸದಸ್ಯರಾದ ರಿಯಾಝ್ ಅಳೇಕಲ, ಇಜಾಝ್ ಮದನಿನಗರ, ಮನ್ಸೂರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News