ಡಿ.14ರಂದು ರಾಮಕೃಷ್ಣ ಕ್ರೆಡಿಟ್ ಕೋ.ಅ. ಸೊಸೈಟಿ ಬೆಳ್ಳಿ ಹಬ್ಬ ಸಂಭ್ರಮ

Update: 2019-12-12 11:53 GMT

ಮಂಗಳೂರು, ಡಿ.11: ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ ಬೆಳ್ಳಿ ಹಬ್ಬ ಸಮಾರಂಭ ಡಿ. 14ರಂದು ಬೆಳಗ್ಗೆ 10.35ಕ್ಕೆ ಲೇಡಿಹಿಲ್ ಉರ್ವ ಚರ್ಚ್ ಸೆಂಟಿನರಿ ಹಾಲ್‌ನಲ್ಲಿ ನಡೆಯಲಿದೆ ಎಂದು ಸೊಸೈಟಿ ಅಧ್ಯಕ್ಷ ಕೆ. ಜೈರಾಜ್ ಬಿ. ರೈ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ ಎಂದರು.

ಸಂಸದ ನಳಿನ್‌ ಕುಮಾರ್ ಕಟೀಲು, ಶಾಸಕರಾದ ಡಿ. ವೇದವ್ಯಾಸ ಕಾಮತ್, ಯು. ಟಿ. ಖಾದರ್, ಡಾ. ವೈ. ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಮಾಜಿ ಸಚಿವ ಬಿ. ರಮಾನಾಥ ರೈ, ನಿಟ್ಟೆ ವಿವಿ ಕುಲಪತಿ ಎನ್. ವಿನಯ್ ಹೆಗ್ಡೆ, ತೇಜಸ್ವಿನಿ ಆಸ್ಪತ್ರೆ ಮತ್ತು ಸಮೂಹ ಸಂಸ್ಥೆಗಳ ಸ್ಥಾಪಕಾಧ್ಯಕ್ಷ ಡಾ. ಎಂ. ಶಾಂತರಾಮ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್‌ಕುಮಾರ್ ರೈ, ಇಂಟರ್‌ನ್ಯಾಶನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ. ಸದಾನಂದ ಶೆಟ್ಟಿ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಜಾಗತಿಕ ಬಂಟ ಪ್ರತಿಷ್ಠಾನದ ಅಧ್ಯಕ್ಷ ಬಿ. ಸಚ್ಚಿದಾನಂದ ಶೆಟ್ಟಿ, ಮೈಸೂರು ಪ್ರಾಂತ್ಯ ಸಹಕಾರ ಸಂಘಗಳ ಜಂಟಿ ನಿಬಂಧಕ ಪ್ರಕಾಶ್ ರಾವ್, ದ.ಕ. ಜಿಲ್ಲಾ ಸಹಕಾರ ಸಂಘಗಳ ಉಪನಿಬಂಧಕ ಪ್ರವೀಣ್ ಬಿ. ನಾಯಕ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದವರು ತಿಳಿಸಿದರು.

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 1994ರಲ್ಲಿ ಸ್ಥಾಪನೆಗೊಂಡು 2019ನೇ ಸಾಲಿಗೆ 25 ಸಂವತ್ಸರಗಳನ್ನು ಪೂರ್ಣಗೊಳಿಸಿದೆ. 25 ವರ್ಷಗಳಲ್ಲಿ ತನ್ನ ಕಾರ್ಯವ್ಯಾಪ್ತಿಯಾದ ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ 65 ಸಾವಿರಕ್ಕಿಂತ ಅಧಿಕ ಸದಸ್ಯರನ್ನು ಹೊಂದಿದ್ದು, ಪ್ರಸ್ತುತ 20 ಶಾಖೆಗಳೊಂದಿಗೆ ಮುನ್ನಡೆಯುತ್ತಿದೆ. ಸಂಘವು ಪ್ರಸ್ತುತ 220 ಕೋಟಿ ರೂ. ಠೇವಣಿ, 180 ಕೋಟಿ ರೂ. ಹೊರಬಾಕಿ ಸಾಲವನ್ನು ಹೊಂದಿ ಒಟ್ಟು 400 ಕೋಟಿ ರೂ. ವ್ಯವಹಾರ ದಾಖಲಿಸಿದೆ. 2019 ಮಾ. 31ಕ್ಕೆ 5.77 ಕೋಟಿ ರೂ. ನಿವ್ವಳ ಲಾಭ ಗಳಿಸಿ ಸದಸ್ಯರಿಗೆ 2018-19ನೇ ಸಾಲಿನಲ್ಲಿ ಶೇ. 25 ಡಿವಿಡೆಂಟ್ ವಿತರಿಸಿದೆ ಎಂದವರು ವಿವರಿಸಿದರು.

ನಿರ್ದೇಶಕರಾದ ಕೆ. ಸೀತಾರಾಮ ರೈ ಸವಣೂರು, ಡಾ. ಕೆ. ಸುಭಾಶ್ಚಂದ್ರ ಶೆಟ್ಟಿ, ರವೀಂದ್ರನಾಥ ಜಿ. ಹೆಗ್ಡೆ, ಗಣೇಶ್ ಜಿ. ಕೆ. ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News