ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧ ತೀವ್ರಗೊಂಡ ಪ್ರತಿಭಟನೆ: ತ್ರಿಪುರಾ, ಅಸ್ಸಾಂನಲ್ಲಿ ಸೇನೆಯ ನಿಯೋಜನೆ

Update: 2019-12-19 05:06 GMT

ಹೊಸದಿಲ್ಲಿ: ಪೌರತ್ವ ತಿದ್ದುಪಡಿ ಮಸೂದೆಯ ಕುರಿತಂತೆ ರಾಜ್ಯಸಭೆಯಲ್ಲಿ ಬಿಸಿಯೇರಿದ ಚರ್ಚೆ ನಡೆಯುತ್ತಿರುವಂತೆಯೇ ಅತ್ತ  ಮಸೂದೆಯನ್ನು ವಿರೋಧಿಸಿ  ಭಾರೀ ಪ್ರತಿಭಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ತ್ರಿಪುರಾ ಹಾಗೂ ಅಸ್ಸಾಂನಲ್ಲಿ ಸೇನೆಯನ್ನು ನಿಯೋಜಿಸಲಾಗಿದೆ.

ಸೇನೆಯ ವಕ್ತಾರ ಕರ್ನಲ್ ಅಮನ್ ಆನಂದ್ ಅವರು ನೀಡಿದ ಮಾಹಿತಿಯಂತೆ ತ್ರಿಪುರಾದ ಕಂಚನಪುರ್ ಹಾಗೂ ಮನು ಪ್ರದೇಶಗಳಿಗೆ ಸೇನೆಯ ಎರಡು ಕಲಮುಗಳನ್ನು ಈಗಾಗಲೇ ಕಳುಹಿಸಲಾಗಿದೆ. ಇನ್ನೊಂದು ಸೇನಾ ಕಲಮು ಅಸ್ಸಾಂ ರಾಜ್ಯದ ಬೊಂಗೈನ್ಗೊನ್‍ಗಿಂತ ಒಂದು ಕಿಮೀ ದೂರದಲ್ಲಿ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ. ಒಂದು ಸೇನಾ ಕಲಮಿನಲ್ಲಿ ಕನಿಷ್ಠ 70 ಸೈನಿಕರಿರಲಿದ್ದು ಎರಡು ಅಧಿಕಾರಿಗಳು ಅದರ ನೇತೃತ್ವ ವಹಿಸುತ್ತಾರೆ. ತ್ರಿಪುರಾ ಹಾಗೂ  ಅಸ್ಸಾಂನಲ್ಲಿನ ಪರಿಸ್ಥಿತಿಯನ್ನು ಸೇನೆಯ ಹಿರಿಯ ಅಧಿಕಾರಿಗಳು ಸೂಕ್ಷ್ಮವಾಗಿ ಅವಲೋಕಿಸುತ್ತಿದ್ದಾರೆಂದೂ ಕರ್ನಲ್ ಆನಂದ್ ಹೇಳಿದ್ದಾರೆ.

ಅಸ್ಸಾಂನ ದಿಬ್ರೂಘರ್ ಎಂಬಲ್ಲಿ ಜಿಲ್ಲಾಡಳಿತದ ಮನವಿ ಮೇರೆಗೆ ಕ್ಷಿಪ್ರ ಕಾರ್ಯಾಚರಣೆ ತಂಡವನ್ನು ಕಳುಹಿಸಲಾಗಿದೆ.  ಪೌರತ್ವ ಕಾಯಿದೆಯನ್ನು ವಿರೋಧಿಸಿ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಿಗೆ 5,000 ಅರೆಸೇನಾ ಸಿಬ್ಬಂದಿಯನ್ನು ಕಳುಹಿಸಲಾಗುತ್ತಿದೆ ಎಂಬ ಮಾಹಿತಿಯಿದೆ.

ತ್ರಿಪುರಾ ಸರಕಾರ ಮಂಗಳವಾರ ರಾಜ್ಯದಲ್ಲಿ ಮೊಬೈಲ್ ಇಂಟರ್ನೆಟ್ ಹಾಗೂ ಎಸ್ಸೆಮ್ಮೆಸ್ ಸೇವೆಗಳಿಗೆ 48 ಗಂಟೆಗಳ ನಿರ್ಬಂಧ ಹೇರಿದೆ. ಅಸ್ಸಾಂನ ಗುವಹಾಟಿಯಲ್ಲಿ ನಾರ್ತ್ ಈಸ್ಟ್ ಸ್ಟೂಡೆಂಟ್ಸ್ ಆರ್ಗನೈಸೇಶನ್ ಬಂದ್‍ಗೆ ಕರೆ ನೀಡಿರುವುದರಿಂದ ಜನಜೀವನ ಬಾಧಿತವಾಗಿದೆ.

ಅರುಣಾಚಲ ಪ್ರದೇಶದಲ್ಲಿ ಶಿಕ್ಷಣ ಸಂಸ್ಥೆಗಳು, ಬ್ಯಾಂಕುಗಳು, ವಾಣಿಜ್ಯ ಮಳಿಗೆಗಳು ಹಾಗೂ ಮಾರುಕಟ್ಟೆಗಳು ಬಂದ್ ಆಗಿದ್ದು ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News