ನಮ್ಮ ರಾಷ್ಟ್ರಭಕ್ತಿಯ ಬಗ್ಗೆ ಪ್ರಮಾಣಪತ್ರ ಬೇಕಿಲ್ಲ: ರಾಜ್ಯಸಭೆಯಲ್ಲಿ ಶಿವಸೇನೆಯ ಸಂಜಯ್ ರಾವತ್

Update: 2019-12-19 05:05 GMT

ಹೊಸದಿಲ್ಲಿ: ಲೋಕಸಭೆಯಲ್ಲಿ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ಬೆಂಬಲಿಸಿ ಮತ ಚಲಾಯಿಸಿದ್ದ ಶಿವಸೇನೆ ಇಂದು ರಾಜ್ಯಸಭೆಯಲ್ಲಿ ಮಸೂದೆ ಕುರಿತು ಚರ್ಚೆಯ ವೇಳೆ ಯು-ಟರ್ನ್ ಹೊಡೆದಿದೆ.  ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ಶಿವಸೇನೆಯ ಸಂಸದ ಸಂಜಯ್ ರಾವತ್, ಬಿಜೆಪಿ ವಿರುದ್ಧ ಕಿಡಿಕಾರಿದರಲ್ಲದೆ ಮಸೂದೆಯನ್ನು ವಿರೋಧಿಸುತ್ತಿರುವವರಿಗೆ ರಾಷ್ಟ್ರವಿರೋಧಿಗಳು ಎಂಬ ಹಣೆಪಟ್ಟಿಯನ್ನು ಏಕೆ ಕಟ್ಟಲಾಗುತ್ತಿದೆ ಎಂದು ಪ್ರಶ್ನಿಸಿದರು.

"ಈ ಮಸೂದೆಯನ್ನು ಬೆಂಬಲಿಸದೇ ಇರುವವರು ರಾಷ್ಟ್ರವಿರೋಧಿಗಳು ಹಾಗೂ ಬೆಂಬಲಿಸುವವರು ರಾಷ್ಟ್ರವಾದಿಗಳೆಂಬ ಮಾತುಗಳನ್ನು ನಿನ್ನೆಯಿಂದ ನಾನು ಕೇಳುತ್ತಿದ್ದೇನೆ. ನಮ್ಮ ರಾಷ್ಟ್ರಭಕ್ತಿಯ ಅಥವಾ ಹಿಂದುತ್ವದ ಕುರಿತಂತೆ ನಮಗೆ ಯಾವುದೇ ಪ್ರಮಾಣಪತ್ರ ಬೇಡ,''ಎಂದು ರಾವತ್ ಹೇಳಿದರು.

ಲೋಕಸಭೆಯಲ್ಲಿ ಶಿವಸೇನೆ ಮಸೂದೆಯನ್ನು ಬೆಂಬಲಿಸಿದಂದಿನಿಂದ ಮಹಾರಾಷ್ಟ್ರದಲ್ಲಿ ಅದರ ಮಿತ್ರ  ಪಕ್ಷ ಕಾಂಗ್ರೆಸ್ಸಿನ ನಾಯಕ ಬಾಳಾಸಾಹೇಬ್ ಥೋರಟ್ ಪ್ರತಿಕ್ರಿಯಿಸಿ ಶಿವಸೇನೆ ಸಂವಿಧಾನದ ತತ್ವದಂತೆ ಹಾಗೂ ಮಹಾರಾಷ್ಟ್ರದಲ್ಲಿ ಮೂರು ಮಿತ್ರ ಪಕ್ಷಗಳು ಒಪ್ಪಿರುವ ಸಮಾನ ಕನಿಷ್ಠ ಕಾರ್ಯಕ್ರಮದಂತೆ ನಡೆದುಕೊಳ್ಳಬೇಕೆಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಶಿವಸೇನೆ ತನ್ನ ನಿಲುವು ಬದಲಾಯಿಸಿದೆಯೆನ್ನಲಾಗಿದೆ. "ನಾವು ಪ್ರಧಾನಿ ಹಾಗೂ ಗೃಹ ಸಚಿವರ ಸಾಮರ್ಥ್ಯದ ಮೇಲೆ ನಂಬಿಕೆ ಹೊಂದಿದ್ದೇವೆ. ಆದರೆ ಒಮ್ಮೆ ಈ ಮಸೂದೆ ಅಂಗೀಕಾರಗೊಂಡರೆ ಅದು ನುಸುಳುಕೋರರನ್ನು ತಡೆಯಬಲ್ಲುದೇ, ನಿರಾಶ್ರಿತರನ್ನು ಸ್ವೀಕರಿಸಿದರೆ ಈ ವಿಚಾರದಲ್ಲಿ ರಾಜಕೀಯ ಕೂಡ ಸೇರುತ್ತದೆ. ಅವರಿಗೆ ಮತದಾನದ ಹಕ್ಕು ನೀಡುತ್ತೀರಾ?,'' ಎಂದು ರಾವತ್ ಪ್ರಶ್ನಿಸಿದರು.

ರಾಜ್ಯಸಭಾ ಕಲಾಪಕ್ಕೂ ಮುನ್ನ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ರಾವತ್ ತಮ್ಮ ಪಕ್ಷ ಮಸೂದೆಯನ್ನು ರಾಜ್ಯಸಭೆಯಲ್ಲಿ ಬೆಂಬಲಿಸಲಿದೆಯೇ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News