ಮಂಗಳೂರು : ‘ಹ್ಯಾಟ್‌ಹಿಲ್’ನ ‘ಸಾಲಿಟೇರ್’ ವಸತಿ ಸಮುಚ್ಚಯಕ್ಕೆ ಸ್ವಾಧೀನತಾ ಪ್ರಮಾಣಪತ್ರ

Update: 2019-12-11 12:27 GMT

ಮಂಗಳೂರು : ನಗರದ ‘ಹ್ಯಾಟ್‌ಹಿಲ್’ನ ‘ಸಾಲಿಟೇರ್’ ವಸತಿ ಸಮುಚ್ಚಯಕ್ಕೆ ಸ್ವಾಧೀನತಾ ಪ್ರಮಾಣಪತ್ರ ನೀಡುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದ್ದು, ಅದರಂತೆ ಆದೇಶ ಬಂದ ಒಂದು ದಿನದೊಳಗೆ ಮನಪಾ ಸ್ವಾಧೀನತಾ ಪತ್ರವನ್ನು (Occupancy Certificate) ವಸತಿ ಸಮುಚ್ಚಯಕ್ಕೆ ನೀಡಿದೆ.

2019ರ ಜುಲೈ 19ರಂದು ಸುಪ್ರೀಂ ಕೋರ್ಟ್, ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್‌ ಆ್ಯಂಡ್ ಡೆವೆಲಪ್ಪರ್ಸ್‌ನ ಮಾಲಕರಿಗೆ ಸ್ವಾಧೀನತಾ ಪ್ರಮಾಣಪತ್ರ ನೀಡುವಂತೆ ಮನಪಾಗೆ ಸೂಚಿಸಿತ್ತು. ಆದರೆ ಮನಪಾ ಪ್ರಮಾಣ ಪತ್ರ ನೀಡಿರಲಿಲ್ಲ. ಇದರಿಂದ ಕಟ್ಟಡ ಮಾಲಕರು ತೊಂದರೆ ಅನುಭವಿಸುವಂತಾಗಿತ್ತು. ಬಿಲ್ಡರ್ ಕಡೆಯಿಂದ ಎಲ್ಲ ಕಾನೂನು ಪಾಲನೆಯಾಗಿದ್ದು, ಸುಪ್ರೀಂ ಕೋರ್ಟ್‌ನ ತೀರ್ಪಿನ ಹೊರತಾಗಿಯೂ ಪಾಲಿಕೆಯು ನಾಲ್ಕು ತಿಂಗಳಿನಿಂದ ಪ್ರಮಾಣ ಪತ್ರ ನೀಡಿರಲಿಲ್ಲ. ಅಲ್ಲದೆ ರೆರಾ ಪೂರ್ಣತಾ ಪತ್ರ ಪಡೆಯಲು ಡಿಸೆಂಬರ್ ಮೊದಲ ವಾರ ಕೊನೆಯ ಗಡುವಾಗಿತ್ತು. ಈ ಕಾರಣದಿಂದ ಮತ್ತು ಬಿಲ್ಡರ್ ಸಂಸ್ಥೆಯು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗುವುದು ಅನಿವಾರ್ಯವಾಗಿತ್ತು. ಬಿಲ್ಡರ್ ಸಂಸ್ಥೆಯ ಮನವಿ ಆಲಿಸಿದ ನ್ಯಾಯಾಲಯವು ಪಾಲಿಕೆಯನ್ನು ಪ್ರಮಾಣಪತ್ರ ಏಕೆ ವಿತರಿಸಿಲ್ಲ ಮತ್ತು ವಿತರಣೆಯಾಗುವುದೇ ಇಲ್ಲವೇ ಎಂದು ಪ್ರಶ್ನಿಸಿತು. ಪಾಲಿಕೆಯ ಪರ ನ್ಯಾಯವಾದಿಗಳು ನ್ಯಾಯಾಲಯದ ಆಜ್ಞೆಯನ್ನು ಪಾಲಿಸುವುದಾಗಿ ಹೇಳಿದರು. ಅದರಂತೆ ನವೆಂಬರ್ 29ರಂದು ಪ್ರಮಾಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿ, ಬಳಿಕ ಬಿಲ್ಡರ್‌ಗೆ ಹಸ್ತಾಂತರಿಸಲಾಯಿತು.

ನನಗೆ ಮತ್ತು ನನ್ನ ಗ್ರಾಹಕರಿಗೆ ನ್ಯಾಯ ಒದಗಿಸಿದ ಬಗ್ಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಕೃತಜ್ಞನಾಗಿದ್ದೇನೆ. ಪಿಐಎಲ್‌ನಂತ ವ್ಯವಸ್ಥೆಯು ನಾಗರಿಕರ ಹಿತರಕ್ಷಣೆಗಾಗಿ ಇದೆ. ಖಾಸಗಿ ಹಿತಾಸಕ್ತಿ ಮತ್ತು ಸಾರ್ವಜನಿಕ ಹಿತಾಸಕ್ತಿಯ ನಡುವೆ ವ್ಯತ್ಯಾಸವಿದೆ. ಕಾನೂನುಬಾಹಿರ ಲಾಭಕ್ಕಾಗಿ ಪಿಐಎಲ್ ದುರ್ಬಳಕ್ಕೆ ಸಲ್ಲವೆಂದು ನ್ಯಾಯಾಲಯ ತೋರ್ಪಡಿಸಿದೆ. ನ್ಯಾಯಾಂಗದ ಮೇಲಿನ ತನ್ನ ನಂಬಿಕೆ ಮತ್ತಷ್ಟು ಧೃಡವಾಗಿದೆ.

-ಕೆ. ಶ್ರೀನಾಥ್ ಹೆಬ್ಬಾರ್, ಮಾಲಕರು, ಲ್ಯಾಂಡ್‌ಟ್ರೇಡ್ಸ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News