ಕೇರಳ ಚಿತ್ರೋತ್ಸವ ವೇದಿಕೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ವಿರೋಧಿ ಬ್ಯಾನರ್

Update: 2019-12-19 05:05 GMT

ತಿರುವನಂತಪುರಂ, ಡಿ.11: ಕೊಚ್ಚಿಯಲ್ಲಿ ನಡೆಯುತ್ತಿರುವ ಅಂತರಾಷ್ಟ್ರೀಯ ಚಿತ್ರೋತ್ಸವದ ವೇದಿಕೆಯಲ್ಲಿ ಮಂಗಳವಾರ ವಿವಾದಾತ್ಮಕ ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿದ ಬ್ಯಾನರ್ ಪ್ರದರ್ಶಿಸಿ ಪ್ರತಿಭಟನೆ ನಡೆಸಲಾಗಿದೆ. 2019ರಲ್ಲಿ ತೆರೆಕಂಡ ಮಲಯಾಳಂ ಸಿನೆಮ ‘ಉಂಡಾ’ದ ಚಿತ್ರಕತೆ ಬರೆದಿರುವ ಹರ್ಷದ್, ನಿರ್ದೇಶಕ ಖಾಲಿದ್ ರಹ್ಮಾನ್ ಸಹಿತ ಚಿತ್ರತಂಡದವರು ಈ ಪ್ರತಿಭಟನೆ ನಡೆಸಿದ್ದಾರೆ.

ತಿರುವನಂತಪುರಂನ ಠಾಗೋರ್ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಚಿತ್ರೋತ್ಸವದ ವೇದಿಕೆ ಏರಿದ ‘ಉಂಡಾ’ ಚಿತ್ರತಂಡ ಪೌರತ್ವ ತಿದ್ದುಪಡಿ ಮಸೂದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ(ಎನ್‌ಆರ್‌ಸಿ) ಮಸೂದೆಯನ್ನು ವಿರೋಧಿಸುವ ಬ್ಯಾನರ್ ಪ್ರದರ್ಶಿಸಿ ಪ್ರತಿಭಟಿಸಿದರು. ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದ ಕೆಲವು ಪ್ರತಿನಿಧಿಗಳು ಹಾಗೂ ಪ್ರೇಕ್ಷಕರೂ ಮಸೂದೆಯ ಪ್ರತಿಯನ್ನು ಹರಿದು ಹಾಕಿ, ಇದೊಂದು ತಾರತಮ್ಯ ಸ್ವರೂಪವನ್ನು ಹೊಂದಿರುವ ಮತ್ತು ದೇಶದ ಜಾತ್ಯಾತೀತ ತತ್ವವನ್ನು ಉಲ್ಲಂಘಿಸಿದ ಮಸೂದೆಯಾಗಿದೆ ಎಂದು ಆರೋಪಿಸಿದರು.

2014ರ ಡಿಸೆಂಬರ್ 31ರವರೆಗೆ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಪಘಾನಿಸ್ತಾನದಿಂದ ಭಾರತ ಪ್ರವೇಶಿಸಿರುವ ಹಿಂದು, ಸಿಖ್, ಬೌದ್ಧ, ಕ್ರಿಶ್ಚಿಯನ್, ಜೈನ್ ಮತ್ತು ಪಾರ್ಸಿ ನಿರಾಶ್ರಿತರಿಗೆ (ಮುಸ್ಲಿಮರನ್ನು ಹೊರತುಪಡಿಸಿ) ಭಾರತದ ಪೌರತ್ವ ಒದಗಿಸುವ ವಿವಾದಾತ್ಮಕ ಮಸೂದೆಗೆ ಲೋಕಸಭೆಯಲ್ಲಿ ಅಂಗೀಕಾರ ದೊರಕಿದ್ದು ರಾಜ್ಯಸಭೆಯಲ್ಲಿ ಮಂಡಿಸಲಾಗಿದೆ. ಈ ಮಧ್ಯೆ ಮಸೂದೆಯನ್ನು ವಿರೋಧಿಸಿ ಅಸ್ಸಾಂ, ತ್ರಿಪುರ ಮತ್ತು ಮಣಿಪುರದಲ್ಲಿ ತೀವ್ರ ಪ್ರತಿಭಟನೆ ಮುಂದುವರಿದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News