ಒಡಿಯೂರು ಬಳಿ ಗುಡ್ಡ ಕುಸಿದು ಮೂವರು ಮೃತ್ಯು ಪ್ರಕರಣ : ಶೀಘ್ರ ಪರಿಹಾರ ನೀಡುವಂತೆ ಕಾರ್ಮಿಕ ಇಲಾಖೆ ನೊಟೀಸ್

Update: 2019-12-11 14:12 GMT

ಬಂಟ್ವಾಳ, ಡಿ. 7: ಬಂಟ್ವಾಳ ತಾಲೂಕಿನ ಕರೊಪಾಡಿ ಗ್ರಾಮಾದ ಒಡಿಯೂರು ದೇವಸ್ಥಾನವೊಂದರ ಬಳಿ ಗುಡ್ಡ ಕುಸಿತದಲ್ಲಿ ಮೂವರು ಕಾರ್ಮಿಕರು ಮೃತಪಟ್ಟು, ಓರ್ವ ಗಾಯಗೊಂಡ ಪ್ರಕರಣ ಸಂಬಂಧಿಸಿ ಈ ನಾಲ್ವರ ಕುಟುಂಬಕ್ಕೆ ಶೀಘ್ರ ಪರಿಹಾರ ನೀಡುವಂತೆ ಕಾರ್ಮಿಕ ಇಲಾಖೆಯ ಮಂಗಳೂರು ಉಪವಿಭಾಗವು, ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೊಟೀಸ್ ನೀಡಿದೆ.

ಕಾರ್ಮಿಕರ ಇಲಾಖೆ ಮಂಗಳೂರು ಉಪವಿಭಾಗ-2ರ ಕಾರ್ಮಿಕ ಅಧಿಕಾರಿ ಅವರು ಘಟನೆಯ ಬಗ್ಗೆ ಡಿ. 9ರಂದು ನೊಟೀಸ್ ಅನ್ನು ಜಾರಿಗೊಳಿಸಿ, ಒಡಿಯೂರು ಗುಡ್ಡ ಕುಸಿತ ಘಟನೆಯ ಬಗ್ಗೆ ಡಿ. 7ರಂದು "ವಾರ್ತಾಭಾರತಿ" ಪತ್ರಿಕೆಯಲ್ಲಿ ಪ್ರಕಟವಾದ ವರದಿಯ ಆಧಾರವಾಗಿ ಟ್ವಿಟರ್ ಸಂದೇಶದಲ್ಲಿ ಉಲ್ಲೇಖಿಸಿದೆ.

ನೊಟೀಸ್‍ನಲ್ಲೇನಿದೆ?

ಬಂಟ್ವಾಳ ತಾಲೂಕಿನ ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಂ ದೇವಸ್ಥಾನದ ಮುಂಭಾಗದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯ ಸಂದರ್ಭ  ಗುಡ್ಡ ಜರಿದು ಮೂವರು ಕಾರ್ಮಿಕರಾದ ಬಾಳಪ್ಪ ನಾಯ್ಕ್, ರಮೇಶ್, ಪ್ರಕಾಶ್ ಎಂಬವರು ಮೃತಪಟ್ಟಿದ್ದು, ಪ್ರಭಾಕರ್ ಎಂಬವರು ಗಂಭೀರ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೃತ ಕಾರ್ಮಿಕರು ಮಂಡಳಿಯ ಕಟ್ಟಡ ಕಾರ್ಮಿಕರ ಗುರುತಿನ ಚೀಟಿ ಹೊಂದಿದ್ದು, ಕಾರ್ಮಿಕರ ನಾಮನಿರ್ದೇಶಿತರಿಗೆ ಅಪಘಾತ ಮರಣ ಪರಿಹಾರ ಪಡೆಯುವ ಬಗ್ಗೆ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಮರಣ ಪರಿಹಾರ ಪಡೆಯಲು ಕ್ರಮಕೈಗೊಳ್ಳಲಾಗುವುದು ಎಂದು ನೊಟೀಸ್‍ನಲ್ಲಿ ತಿಳಿಸಲಾಗಿದೆ.

ಅದಲ್ಲದೆ, ಮೂವರು ಮೃತರಿಗೆ ಹಾಗೂ ಗಾಯಾಳುವಿಗೆ ಸೂಕ್ತ ಪರಿಹಾರ ನೀಡುವಂತೆ ಮೂಲ ಮಾಲಕರಿಗೆ ಈಗಾಗಲೇ ಸೂಚನಾ ಪತ್ರ ನೀಡಲಾಗಿದೆಂದು ತಿಳಿಸಿದೆ. ಪರಿಹಾರ ನೀಡಿದ ಮಾಹಿತಿಯನ್ನು ಮೂರು ದಿನಗಳೊಳಗೆ ಇಲಾಖೆಗೆ ನೀಡುವಂತೆ ಹಾಗೂ ಕಾರ್ಮಿಕರ ಕಾಯ್ದೆ ಉಲ್ಲಂಘನೆಗಳನ್ನು ಸರಿಪಡಿಸಿಕೊಂಡು ವಾರದೊಳಗೆ ಕಚೇರಿಗೆ ವರದಿ ನೀಡುವಂತೆಯೂ ನೊಟೀಸ್‍ನಲ್ಲಿ ಸೂಚಿಸಲಾಗಿದೆ.

ಏನಿದು ಪ್ರಕರಣ ?

ಬಂಟ್ವಾಳ ತಾಲೂಕಿನ ಕರೊಪಾಡಿ ಗ್ರಾಮಾದ ಒಡಿಯೂರು ದೇವಸ್ಥಾನವೊದರ ಬಳಿ ಅನ್ನ ಛತ್ರದ ಕಟ್ಟಡ ನಿರ್ಮಾಣ ನಡೆಯುತ್ತಿತ್ತು. ಈ ಪ್ರದೇಶದಲ್ಲಿ ಗುಡ್ಡವೊಂದನ್ನು ಜೆಸಿಬಿ ಮೂಲಕ ಅಗೆದು ನೆಲಸಮ ಮಾಡಲಾಗಿತ್ತು. ಡಿ. 7ರ ಸಂಜೆ 5:30ರ ಸುಮಾರಿಗೆ ಕಟ್ಟಡ ಕಾಮಗಾರಿಗೆ ಜೆಸಿಬಿ ಮೂಲಕ ಪಿಲ್ಲರ್ ಗುಂಡಿ ತೆಗೆಯುತ್ತಿ ವೇಳೆ ಏಕಾಏಕಿ ಮಣ್ಣು ಕುಸಿದು ಬಿದ್ದ ಪರಿಣಾಮ  ನಾಲ್ವರು ಕಾರ್ಮಿಕರು ಮಣ್ಣಿನೊಳಗೆ ಸಿಲುಕಿಕೊಂಡಿದ್ದರು. ತಕ್ಷಣ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಮೂವರು ಕಾರ್ಮಿಕರು ಮೃತಪಟ್ಟಿದ್ದು, ಓರ್ವ ಗಂಭೀರ ಗಾಯಗೊಂಡಿದ್ದರು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಘಟನೆಯ ಬಗ್ಗೆ "ವಾರ್ತಾಭಾರತಿ" ಪತ್ರಿಕೆಯು ಫೋಟೊ ಸಹಿತ ವರದಿಯೊಂದನ್ನು ಡಿ.8ರಂದು ಪ್ರಕಟಿಸುವ ಮೂಲಕ ಕಾಮಗಾರಿಯಲ್ಲಾದ ನಿರ್ಲಕ್ಷ್ಯ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನ ಸೆಳೆದಿತ್ತು. ಇದೀಗ ಡಿ.8ರಂದು ವಾರ್ತಾಭಾರತಿಯ ವರದಿಯನ್ನಾಧರಿಸಿ ಕಾರ್ಮಿಕ ಇಲಾಖೆಯು ಮಂಗಳೂರು ಉಪವಿಭಾಗವು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಗೆ ನೊಟೀಸ್ ನೀಡಿದೆ.

ಮುಖ್ಯಮಂತ್ರಿ ನಿಧಿಯಿಂದ ಪರಿಹಾರದ ಧನ ಚೆಕ್ ಅನ್ನು ಮೃತರ ಕುಟುಂಬಸ್ಥರಿಗೆ ನೀಡಲಾಗಿದೆ. ಘಟನೆಯ ಕುರಿತ ತನಿಖಾ ಪ್ರಕ್ರಿಯೆ ನಡೆಯುತ್ತಿದ್ದು, ಗುತ್ತಿಗೆದಾರ ಹಾಗೂ ಒಡಿಯೂರುನಿಂದ ಶೀಘ್ರ ಪರಿಹಾರದ ಮೊತ್ತವನ್ನು ನೀಡಲಾಗುವುದು ಎಂದು ಗುತ್ತಿಗೆದಾರರೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News