ತ್ಯಾಜ್ಯ ವಿಲೇವಾರಿಯಲ್ಲಿ ಉಡುಪಿ ರಾಜ್ಯಕ್ಕೆ ಮಾದರಿ: ದಿನಕರ ಬಾಬು

Update: 2019-12-11 14:18 GMT

ಉಡುಪಿ, ಡಿ.11: ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯ ನಿರ್ವಹಣೆಯಲ್ಲಿ ಉಡುಪಿ ಜಿಲ್ಲೆ ಅಳವಡಿಸಿಕೊಂಡಿರುವ ವಿಧಾನಗಳು ಇಡೀ ರಾಜ್ಯಕ್ಕೆ ಮಾದರಿ ಯಾಗಿದ್ದು, ಇಲ್ಲಿ ಅಳವಡಿಸಿಕೊಂಡಿರುವ ಮಾದರಿಯನ್ನು ರಾಜ್ಯದ ಇತರೆ ಜಿಲ್ಲೆಗಳಲ್ಲೂ ಸಹ ಅನುಷ್ಠಾನ ಮಾಡಲಾಗುತ್ತಿದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರ ಬಾಬು ಹೇಳಿದ್ದಾರೆ.

ಬುಧವಾರ ಮಣಿಪಾಲದ ಜಿಪಂ ಸಂಪನ್ಮೂಲ ಕೇಂದ್ರದಲ್ಲಿ, ಸ್ವಚ್ಛ ಭಾರತ ಮಿಷನ್ (ಗ್ರಾಮೀಣ) ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ನಡೆದ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಕುರಿತು ಉಡುಪಿ ತಾಲೂಕಿನ ವಿವಿಧ ಗ್ರಾಪಂ ಸಿಬ್ಬಂದಿಗಳಿಗೆ ಆಯೋಜಿಸಿದ್ದ 3 ದಿನಗಳ ತರಬೇತಿ ಕಾರ್ಯಾಗಾರ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಉಡುಪಿ ಜಿಲ್ಲೆಯಲ್ಲಿ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಕೈಗೊಂಡಿರುವ ಯೋಜನೆ ರಾಜ್ಯಕ್ಕೆ ಮಾದರಿಯಾಗಿದೆ. ರಾಜ್ಯದ ಹಲವು ಜಿಲ್ಲೆಗಳ ಗ್ರಾಪಂಗಳ ಪ್ರತಿನಿಧಿಗಳು ಜಿಲ್ಲೆಗೆ ಭೇಟಿ ನೀಡಿ, ಈ ವಿಧಾನದ ಕುರಿತು ಅರಿತು, ತಮ್ಮ ಜಿಲ್ಲೆಗಳಲ್ಲಿ ಸಹ ಇದನ್ನು ಅಳವಡಿಕೊಂಡಿದ್ದಾರೆ ಎಂದವರು ವಿವರಿಸಿದರು.

ಉಡುಪಿ ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾಗಲು ಕಾರಣರಾದ ಸ್ವಚ್ಛ ಭಾರತ ಮಿಷನ್‌ನ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದ ದಿನಕರ ಬಾಬು, ಪ್ರಸ್ತುತ ಜಿಲ್ಲೆಯ ಕೆಲವು ಗ್ರಾಪಂಗಳಲ್ಲಿ ಮಾತ್ರ ತ್ಯಾಜ್ಯ ವಿಲೇವಾರಿ ಕಾರ್ಯ ನಡೆಯುತ್ತಿದ್ದು, ಇದನ್ನು ಜಿಲ್ಲೆಯ ಎಲ್ಲಾ ಗ್ರಾಪಂಗಳಿಗೆ ವಿಸ್ತರಿಸುವ ಉದ್ದೇಶದಿಂದ ಈ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಇಲ್ಲಿ ತರಬೇತಿ ಪಡೆದ ಸಿಬ್ಬಂದಿ ತಮ್ಮ ಗ್ರಾಮದಲ್ಲಿ ಸಾರ್ವಜನಿಕರಿಗೆ ತ್ಯಾಜ್ಯ ವಿಲೇವಾರಿ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ ತ್ಯಾಜ್ಯದ ಕುರಿತು ಸಾರ್ವಜನಿಕರಲ್ಲಿರುವ ಕಲ್ಪನೆ ಬದಲಿಸಿ, ಸ್ವಚ್ಛತೆು ಅರಿವು ಮೂಡಿಸಬೇಕು ಎಂದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ರಕ್ತ ಬೀಜಾಸುರನಂತೆ ಬೆಳೆಯುತ್ತಿರುವ ತ್ಯಾಜ್ಯದ ಸಮಸ್ಯೆಗೆ ಶಾಶ್ವತ ಮುಕ್ತಿ ನೀಡಬೇಕಿದೆ. ಪ್ಲಾಸ್ಟಿಕ್ ಸಮಸ್ಯೆಗೆ ಪೂರ್ಣ ವಿರಾಮ ಹಾಕುವ ಯೋಜನೆ ರೂಪಿಸಿ, ಉಡುಪಿ ಜಿಲ್ಲೆಯನ್ನು ಸ್ವಚ್ಛ, ಸುಂದರ, ನಿರ್ಮಲ ಜಿಲ್ಲೆಯನ್ನಾಗಿಸಲು ಪ್ರತಿಯೊಬ್ಬರ ಸಹಕಾರ ಅಗತ್ಯ ಎಂದರು.

ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರೀತಿ ಗೆಹ್ಲೋಟ್ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ 50ರಿಂದ 60 ಗ್ರಾಪಂಗಳಲ್ಲಿ ಮಾತ್ರ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ನಡೆಯುತ್ತಿವೆ. ಇದನ್ನು ಜಿಲ್ಲೆಯ ಎಲ್ಲಾ 158 ಗ್ರಾಪಂ ಗಳಿಗೂ ವಿಸ್ತರಿಸುವ ಉದ್ದೇಶದಿಂದ ಈ ತರಬೇತಿ ಆಯೋಜಿಸಿದ್ದು, ತ್ಯಾಜ್ಯ ಸಂಗ್ರಹಣೆ ಕಾರ್ಯ ಆರಂಭಿಸದೇ ಇರುವ ಪ್ರತಿ ಗ್ರಾಪಂನ ಮೂವರು ಸಿಬ್ಬಂದಿಗೆ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.

ಮುಂದಿನ ಜ.1ರಿಂದ ಜಿಲ್ಲೆಯ ಎಲ್ಲಾ ಗ್ರಾಮಪಂಚಾಯತ್‌ಗಳಲ್ಲೂ ಶೇ. 100ಕ್ಕೆ ನೂರು ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿ ನಡೆಯಲಿದ್ದು, ಜಿಲ್ಲೆಯ ಎಲ್ಲಾ ಗ್ರಾಮಸ್ಥರು ಸಹ ಇದಕ್ಕೆ ಅಗತ್ಯ ಸಹಕಾರ ನೀಡುವಂತೆ ಕೋರಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಪಂ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಇಲ್ಲಿ ತರಬೇತಿ ಪಡೆಯುವ ಸಿಬ್ಬಂದಿ 2 ದಿನಗಳ ಕಾಲ ವಿವಿಧ ಎಸ್‌ಎಲ್‌ಆರ್‌ಎಂ ಘಟಕಗಳಿಗೆ ಭೇಟಿ ನೀಡಿ, ತ್ಯಾಜ್ಯವಿಂಗಡಣೆ ಬಗ್ಗೆ ಪ್ರಾಯೋಗಿಕ ತರಬೇತಿ ಪಡೆಯಲಿದ್ದಾರೆ. ಡಿ.30ರವರೆಗೆ ತಮ್ಮ ಗ್ರಾಮ ವ್ಯಾಪ್ತಿಯ ಮನೆ ಮನೆಗೆ ಭೇಟಿ ನೀಡಿ, ತ್ಯಾಜ್ಯ ಸಂಗ್ರಹಣೆ ಕುರಿತು ಜಾಗೃತಿ ಮೂಡಿಸಲಿದ್ದು, ಜ.1ರಿಂದ ಜಿಲ್ಲೆಯ ಎಲ್ಲಾ ಗ್ರಾಪಂಗಳಲ್ಲಿ ತ್ಯಾಜ್ಯ ಸಂಗ್ರಹಣೆ ಆರಂಭವಾಗಲಿದೆ ಎಂದು ಹೇಳಿದರು.

ಕೆಆರ್‌ಐಡಿಎಲ್‌ನ ಯೋಜನಾ ನಿರ್ದೇಶಕ ಕೃಷ್ಣ ಹೆಪ್ಸೂರ್ ಉಪಸ್ಥಿತರಿದ್ದರು. ಸ್ವಚ್ಚ ಭಾರತ ಮಿಷನ್‌ನ ಜಿಲ್ಲಾ ಸಮಾಲೋಚಕ ಸುಧೀರ್ ಉಪಸ್ಥಿತರಿದ್ದರು. ಸ್ವಚ್ಚ ಭಾರತ ಮಿಷನ್‌ನ ಜಿಲ್ಲಾ ಸಮಾಲೋಚಕ ರಘುನಾಥ್ ನಿರೂಪಿಸಿ, ವಂದಿಸಿದರು.
ಇಂದಿನ ತರಬೇತಿ ಕಾರ್ಯಕ್ರಮದಲ್ಲಿ ಉಡುಪಿ ತಾಲೂಕಿನ ವಿವಿಧ ಗ್ರಾಪಂ ಸಿಬ್ಬಂದಿಗಳಲ್ಲದೇ, ಹಾವೇರಿ ಜಿಲ್ಲೆಯ ತಂಡ ಕೂಡಾ ತರೇತಿಗೆ ಆಗಮಿಸಿದ್ದು ವಿಶೇಷವಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News