3 ಲಕ್ಷ ಜನಸಂಖ್ಯೆಯಿರುವ ನೂತನ ದೇಶ ಉದಯ

Update: 2019-12-11 14:20 GMT
Photo: wikipedia

ಸಿಡ್ನಿ, ಡಿ. 11: ದಕ್ಷಿಣ ಪೆಸಿಫಿಕ್ ಸಾಗರದ ದ್ವೀಪಗಳ ಸಮೂಹ ಬೋಗನ್‌ವಿಲ್ ಬುಧವಾರ ಪಪುವ ನ್ಯೂ ಗಿನಿಯಿಂದ ಬೇರ್ಪಟ್ಟು ಹೊಸ ಸ್ವತಂತ್ರ ದೇಶವಾಗಿದೆ.

ಬುಕ ದ್ವೀಪದಲ್ಲಿರುವ ಬುಕ ಪಟ್ಟಣವು ಸುಮಾರು 3 ಲಕ್ಷ ಜನಸಂಖ್ಯೆಯಿರುವ ದೇಶದ ರಾಜಧಾನಿಯಾಗಿರುತ್ತದೆ ಹಾಗೂ ಸರಕಾರದ ಪ್ರಧಾನ ಕಚೇರಿಯು ಇಲ್ಲೇ ಇರುತ್ತದೆ.

ಜನರು ಹೆಚ್ಚಾಗಿ ಬುಕದ ಹೊರವಲಯದ ಹಳ್ಳಿಗಳು ಮತ್ತು ಇತರ ಎರಡು ಪ್ರಮುಖ ಪಟ್ಟಣಗಳಾದ ಅರಾವ ಮತ್ತು ಬುಯಿನ್‌ಗಳಲ್ಲಿ ವಾಸಿಸುತ್ತಿದ್ದಾರೆ. 2011ರ ಜನಗಣತಿಯ ಪ್ರಕಾರ, ಬೋಗನ್‌ವಿಲ್ ದ್ವೀಪ ಸಮೂಹದಲ್ಲಿ 2,49,358 ಜನರಿದ್ದರು.

ಬೋಗನ್‌ವಿಲ್ ಸ್ವತಂತ್ರ ದೇಶವಾಗುವುದಕ್ಕೆ ಸಂಬಂಧಿಸಿದ ಜನಮತಗಣನೆಯಲ್ಲಿ ಮತ ಚಲಾಯಿಸಲು 2 ಲಕ್ಷಕ್ಕೂ ಅಧಿಕ ಜನರು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ ಎಂಬುದಾಗಿ ಮುಖ್ಯ ಜನಮತ ಗಣನೆ ಅಧಿಕಾರಿ ವೌರೀಶಿಯೊ ಕ್ಲಾಡಿಯೊ ಕಳೆದ ತಿಂಗಳು ಹೇಳಿದ್ದರು.

ಟೊಕ್ ಪಿಸಿನ್ ಇಲ್ಲಿನ ಮುಖ್ಯ ಪ್ರಧಾನ ಭಾಷೆಯಾಗಿದೆ. ಇದನ್ನು ಹೊರತುಪಡಿಸಿ ಇಲ್ಲಿ ಕನಿಷ್ಠ 19 ಬುಡಕಟ್ಟು ಭಾಷೆಗಳಿವೆ.

ಬೋಗನ್‌ವಿಲ್ ಹೆಸರು ಹೇಗೆ ಬಂತು?:

1768ರಲ್ಲಿ ಬೋಗನ್‌ವಿಲ್ ದ್ವೀಪ ಸಮೂಹದ ಪೂರ್ವ ಕರಾವಳಿಯಲ್ಲಿ ಫೆಂಚ್ ನಾವಿಕ ಲೂಯಿಸ್ ಆ್ಯಂಟನಿ ಡಿ ಬೋಗನ್‌ವಿಲ್ ಹಾದು ಹೋದ ಹಿನ್ನೆಲೆಯಲ್ಲಿ, ಅವರ ಹೆಸರನ್ನು ಈ ದ್ವೀಪಕ್ಕೆ ಇಡಲಾಗಿದೆ.

19ನೇ ಶತಮಾನದಲ್ಲಿ ಜರ್ಮನಿಯು ಬೋಗನ್‌ವಿಲ್ಲನ್ನು ತನ್ನ ವಸಾಹತುವನ್ನಾಗಿಸಿತು. ಎರಡನೇ ಮಹಾಯುದ್ಧದ ವೇಳೆ ಅದನ್ನು ಜಪಾನ್ ತನ್ನ ಸೇನಾ ನೆಲೆಯನ್ನಾಗಿ ಮಾಡಿಕೊಂಡಿತು. ಬಳಿಕ ಅದರ ಆಡಳಿತ ಆಸ್ಟ್ರೇಲಿಯದ ಕೈಗೆ ಹೋಯಿತು. 1975ರಲ್ಲಿ ಪಪುವ ನ್ಯೂ ಗಿನಿ ಆಸ್ಟ್ರೇಲಿಯದಿಂದ ಸ್ವತಂತ್ರಗೊಂಡ ಬಳಿಕ, ಬೋಗನ್‌ವಿಲ್ ಅದರ ನಿಯಂತ್ರಣಕ್ಕೆ ಒಳಪಟ್ಟಿತು.

ಆಂತರಿಕ ಸಮರದಲ್ಲಿ 20,000 ಸಾವು:

ಬೋಗನ್‌ವಿಲ್‌ನ ಬಂಡುಕೋರ ಗೆರಿಲ್ಲಾ ಪಡೆ ಮತ್ತು ಪಪುವಾ ನ್ಯೂ ಗಿನಿ ಪಡೆಗಳ ನಡುವೆ ನಡೆದ ಆಂತರಿಕ ಯುದ್ಧದಲ್ಲಿ ಸುಮಾರು 20,000 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಆಂತರಿಕ ಯುದ್ಧವು 1998ರಲ್ಲಿ ಕೊನೆಗೊಂಡಿತು. ಅದು ಎರಡನೇ ಮಹಾಯುದ್ಧದ ಬಳಿಕ ಓಶಾನಿಯ ವಲಯದಲ್ಲಿ ನಡೆದ ಅತ್ಯಂತ ಭೀಕರ ಸಂಘರ್ಷವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News