ಆರೋಗ್ಯದ ಬಗ್ಗೆ ಶಾಲೆಗಳಲ್ಲಿ ಜಾಗೃತಿ ಅಭಿನಂದನಾರ್ಹ: ದಿನಕರ ಬಾಬು

Update: 2019-12-11 14:20 GMT

ಉಡುಪಿ, ಡಿ.11: ವಿದ್ಯಾಭ್ಯಾಸ ಮತ್ತು ವೃತ್ತಿ ಬದುಕಿನಲ್ಲಿ ಏಳಿಗೆಯನ್ನು ಸಾಧಿಸಲು ಉತ್ತಮ ಆರೋಗ್ಯ ಅತ್ಯಗತ್ಯ. ಮಕ್ಕಳ ಆರೋಗ್ಯ ಚೆನ್ನಾಗಿದ್ದಾಗ ಕಲಿಯುವುದರಲ್ಲಿ ಹುಮ್ಮಸ್ಸು ಹೆಚ್ಚಾಗಿ ಜೀವನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಶಾಲೆಗಳಲ್ಲಿ ಹಮ್ಮಿ ಕೊಳ್ಳಲಾಗುವ ಕಾರ್ಯಕ್ರಮಗಳಿಂದ ಸಮಾಜದಲ್ಲಿ ಜಾಗೃತಿ ಮೂಡುತ್ತದೆ ಎಂದು ಉಡುಪಿ ಜಿಪಂ ಅಧ್ಯಕ್ಷ ದಿನಕರಬಾಬು ಹೇಳಿದ್ದಾರೆ.

ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿ ಯಿಂದ ಆದಿಉಡುಪಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶೇಷ ಶಾಲಾ ಮಕ್ಕಳ ಲಸಿಕಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಮಕ್ಕಳಿಗೆ ವೈಯಕ್ತಿಕ ಸ್ವಚ್ಛತೆ ಮತ್ತು ಆರೋಗ್ಯ ರಕ್ಷಣೆ ಬಗ್ಗೆ ಶಾಲೆಗಳಲ್ಲಿ ಮಾಹಿತಿ ನೀಡುತ್ತಿರುವುದು ಉತ್ತಮ ವಿಚಾರ. ಆರೋಗ್ಯದ ದೃಷ್ಟಿಯಿಂದ ನೋಡಿದರೆ ಜಿಲ್ಲೆಯ ಎಲ್ಲಾ ಶಾಲೆಗಳು ಉತ್ತಮ ಸಾಧನೆ ಮಾಡಿವೆ. ಈ ಸಾಧನೆಗೆ ಕಾರಣಕರ್ತರಾದ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಅಭಿನಂದನಾರ್ಹರು ಎಂದವರು ನುಡಿದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮಾತನಾಡಿ, ಎಲ್ಲಾ ಶಾಲೆಗಳಲ್ಲಿಯೂ ಲಸಿಕಾ ಕಾರ್ಯಕ್ರಮ ನಡೆಸಿದಾಗ ಯಾವುದೇ ತೆರನಾದ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ. ಜನಸಾಂದ್ರತೆ ಹೆಚ್ಚಿರುವ ದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆಯೂ ಹೆಚ್ಚಿರುತ್ತದೆ. ಈಗ ದೇಶವು ವಿಜ್ಞಾನದ ವಿಷಯದಲ್ಲಿ ಮುಂದುವರಿದಿರುವುದರಿಂದ ಎಲ್ಲಾ ರೋಗಗಳ ವಿರುದ್ದವೂ ಜಯ ಸಾಧಿಸಲಾಗಿದೆ. ಸ್ವಚ್ಛತೆಗೆ ಆದ್ಯತೆ ನೀಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್ ಪ್ರಾಸ್ತಾವಿಕ ಮಾತು ಗಳನ್ನಾಡಿ, ಆರೋಗ್ಯವಂತ ಸಮಾಜವನ್ನು ರೂಪಿಸಲು ಹಲವಾರು ಕಾರ್ಯ ಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಡಿಪ್ತೀರಿಯಾ, ಟೆಟನಸ್ ಮತ್ತು ನಾಯಿ ಕೆಮ್ಮಿನಂತಹ ಸಾಂಕ್ರಾಮಿಕ ರೋಗಗಳ ಮೇಲೆ ಪೂರ್ಣ ಪ್ರಮಾಣದ ಹತೋಟಿ ಸಾಧ್ಯವಾಗಿಲ್ಲ. ಇವು ಸಾಂಕ್ರಾಮಿಕ ರೋಗಗಳಾಗಿರುವುದರಿಂದ ಶಾಲಾ ಮಕ್ಕಳಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಎಂದರು.

ಈ ರೋಗಗಳನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಕ್ರಮವಾಗಿ ಶಾಲಾ ಮಕ್ಕಳಿಗೆ ಲಸಿಕೆಯನ್ನು ನೀಡಲಾಗುತ್ತಿದೆ. 5ರಿಂದ 6 ವರ್ಷ ವಯಸ್ಸಿನ 4700 ಮಕ್ಕಳಿಗೆ ಡಿಫ್ತೀರಿಯಾ ಲಸಿಕೆ, 10ರಿಂದ 11 ವಯಸ್ಸಿನ 4700 ಮಕ್ಕಳಿಗೆ ಟಿ.ಡಿ ಲಸಿಕೆ ಮತ್ತು 15ರಿಂದ 16 ವಯಸ್ಸಿನ 4800 ಮಕ್ಕಳಿಗೆ ಟಿ.ಡಿ ಬೂಸ್ಟರ್ ಲಸಿಕೆಗಳನ್ನು ನೀಡಲಾುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಎಂ.ಜಿ. ರಾಮ, ಆದಿ ಉಡುಪಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಉಷಾ, ರೋಟರಿ ಕ್ಲಬ್ ಸದಸ್ಯ ರಾದ ರಾಮಚಂದ್ರ ಐತಾಳ್, ಜಯಚಂದ್ರ ರಾವ್ ಉಪಸ್ಥಿತರಿದ್ದರು.

ಹಿರಿಯ ಆರೋಗ್ಯ ಸಹಾಯಕ ಸತೀಶ್ ರಾವ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ರೋಟರಿ ಕ್ಲಬ್ ಅಧ್ಯಕ್ಷ ಜನಾರ್ಧನ್ ಭಟ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News