ಉಗ್ರ ಚಟುವಟಿಕೆಗಳಿಗೆ ಹಣ: ಸಯೀದ್ ವಿರುದ್ಧ ದೋಷಾರೋಪ

Update: 2019-12-11 14:46 GMT

ಲಾಹೋರ್, ಡಿ. 11: 2008ರ ಮುಂಬೈ ಭಯೋತ್ಪಾದಕ ದಾಳಿಯ ರೂವಾರಿ ಹಫೀಝ್ ಸಯೀದ್ ವಿರುದ್ಧ ಪಾಕಿಸ್ತಾನದ ನ್ಯಾಯಾಲಯವೊಂದು ಬುಧವಾರ ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಪೂರೈಸಿದ ಆರೋಪವನ್ನು ಹೊರಿಸಿದೆ.

ಭಯೋತ್ಪಾದಕ ಚಟುವಟಿಕೆಗಳಿಗೆ ಪೂರೈಕೆಯಾಗುತ್ತಿರುವ ಹಣದ ಮೇಲೆ ಜಾಗತಿಕ ಮಟ್ಟದಲ್ಲಿ ನಿಗಾ ಇಡುತ್ತಿರುವ ಸಂಸ್ಥೆ ‘ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್’ (ಎಫ್‌ಎಟಿಎಫ್)ನ ಸಭೆ ಶೀಘ್ರದಲ್ಲೇ ನಡೆಯಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆ ಸಂಭವಿಸಿದೆ. ಭಯೋತ್ಪಾದಕ ಚಟುವಟಿಕೆಗಳಿಗೆ ಹಣ ಹರಿಯುತ್ತಿರುವುದನ್ನು ನಿಲ್ಲಿಸುವಲ್ಲಿ ಪಾಕಿಸ್ತಾನ ವಿಫಲವಾಗಿರುವುದಕ್ಕಾಗಿ ಅದನ್ನು ಕಪ್ಪು ಪಟ್ಟಿಗೆ ಸೇರಿಸಬೇಕೇ ಎನ್ನುವುದನ್ನು ನಿರ್ಧರಿಸಲು ಮುಂದಿನ ವರ್ಷದ ಆದಿ ಭಾಗದಲ್ಲಿ ಎಫ್‌ಎಟಿಎಫ್ ಸಭೆ ಸೇರಲಿದೆ.

ಭಯೋತ್ಪಾದನೆ ನಿಗ್ರಹ ನ್ಯಾಯಾಲಯದಲ್ಲಿ ಹಾಜರಿದ್ದ ಹಫೀಝ್ ಸಯೀದ್‌ಗೆ ಅವನ ವಿರುದ್ಧದ ಆರೋಪಗಳನ್ನು ಓದಿ ಹೇಳಲಾಯಿತು ಎಂದು ಸರಕಾರಿ ವಕೀಲ ಅಬ್ದುರ್ ರವೂಫ್ ‘ರಾಯ್ಟರ್ಸ್’ ಸುದ್ದಿ ಸಂಸ್ಥೆಗೆ ತಿಳಿಸಿದರು.

 ಪಂಜಾಬ್ ರಾಜ್ಯದ ವಿವಿಧ ನಗರಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಹಣಕಾಸು ಪೂರೈಸಿರುವ ಆರೋಪದಲ್ಲಿ ಸಯೀದ್ ಮತ್ತು ಅವನ ಸಹಚರರ ವಿರುದ್ಧ ಪಂಜಾಬ್ ಪೊಲೀಸರು ಕಳೆದ ವರ್ಷ ಜುಲೈ 17ರಂದು 23 ಎಫ್‌ಐಆರ್‌ಗಳನ್ನು ದಾಖಲಿಸಿದ್ದರು ಹಾಗೂ ಸಯೀದ್‌ನನ್ನು ಬಂಧಿಸಿದ್ದರು.

ಅವನು ಈಗ ಕೋಟ್ ಲಾಖ್‌ಪತಿ ಜೈಲಿನಲ್ಲಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News