ಉದ್ಯಮಿ ವಹಾಝ್ ಯೂಸುಫ್‍ಗೆ 'ಉದಯೋನ್ಮುಖ ಯುವ ಉದ್ಯಮಿ' ಪ್ರಶಸ್ತಿ

Update: 2019-12-11 15:46 GMT

ಮಂಗಳೂರು : ಕೆ.ಎಸ್. ಹೆಗ್ಡೆ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಮತ್ತು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ವತಿಯಿಂದ ಆಯೋಜಿಸಲಾದ ಎಂಎಸ್‍ಎಂಇ ಕಾನ್‍ಕ್ಲೇವ್ ಮತ್ತು ಬಿಸ್ನೆಸ್ ಎಕ್ಸಲೆನ್ಸ್ ಅವಾರ್ಡ್ 2019 ಕಾರ್ಯಕ್ರಮದಲ್ಲಿ ಉದ್ಯಮಿ ವಹಾಝ್ ಯೂಸುಫ್‍ಗೆ ‘ಉದಯೋನ್ಮುಖ ಯುವ ಉದ್ಯಮಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಇನ್‍ಲ್ಯಾಂಡ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕರಾಗಿರುವ ವಹಾಝ್ ಯೂಸುಫ್‍ ಅವರು ನಿಟ್ಟೆ ಯುನಿವರ್ಸಿಟಿಯ ಉಪ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಅವರಿಂದ ನಗರದ ಸ್ಟಾರ್ ಹೊಟೇಲ್ ಓಷಿನ್ ಪರ್ಲ್‍ನಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಸ್ವೀಕರಿಸಿದರು.

ನಿಟ್ಟೆ- ಕೆಪಿಎಲ್ ಕಾನ್‍ಕ್ಲೇವ್ ಮತ್ತು ಬಿಸ್ನೆಸ್ ಎಕ್ಸಲೆನ್ಸ್ ಪ್ರಶಸ್ತಿಗಳನ್ನು ಜಸ್ಟಿಸ್ ಕೆ.ಎಸ್. ಹೆಗ್ಡೆ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ ಮೆಂಟ್ ಮತ್ತು ಕರ್ನಾಟಕ ಬ್ಯಾಂಕ್ ಲಿಮಿಟೆಡ್ ಜಂಟಿಯಾಗಿ ಪ್ರಾಯೋಜಿಸಿತ್ತು.

ರಾಜ್ಯದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಿಗಳಲ್ಲಿ (ಎಂಎಸ್‍ಎಂಇ) ಅತ್ಯುತ್ತಮ ಸಾಧಕರನ್ನು ಗುರುತಿಸಿ ಈ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗುತ್ತದೆ ಮತ್ತು ವ್ಯವಹಾರದಲ್ಲಿನ ಅವರ ಅತ್ಯುತ್ತಮ ಸೇವೆಯನ್ನು ಗೌರವಿಸಲಾಗುತ್ತದೆ.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನುರಿತ ವಾಸ್ತುಶಿಲ್ಪಿಯೂ ಆಗಿರುವ ವಹಾಝ್ ಯೂಸುಫ್, “ಕರ್ನಾಟಕ ರಾಜ್ಯಕ್ಕೆ ಅಮೂಲಾಗ್ರ ಸೇವೆಯನ್ನು ನೀಡಿರುವ ಎರಡು ಪ್ರತಿಷ್ಠಿತ ಸಂಸ್ಥೆಗಳಿಂದ ನೀಡಲಾಗಿರುವ ಈ ಮಾನ್ಯತೆ ನಿಜಕ್ಕೂ ನನಗೆ ಖುಷಿ ನೀಡಿದೆ, ಉದ್ಯಮಶೀಲತೆಯ ಸವಾಲಿನ ಹಾದಿಯ ಬೆನ್ನು ಹತ್ತುವ ನನ್ನಂತಹ ಯುವಜನರನ್ನು ಪ್ರೇರೇಪಿಸುವಲ್ಲಿ ಈ ಪ್ರಶಸ್ತಿಗಳು ಪೂರಕ. ವ್ಯವಹಾರದ ಮೂರು ವರ್ಷಗಳಲ್ಲಿ ನಾನು ಮಾಡುವುದನ್ನು ಒಂದು ದಿನದ ಈ ಸಮಾವೇಶದಲ್ಲಿ ನಾನು ಕಲಿತುಕೊಂಡಿದ್ದೇನೆ'' ಎಂದು ಪ್ರತಿಕ್ರಿಯಿಸಿದರು.

ಈ ಸಂದರ್ಭ ಅವರು ತನ್ನ ವೃತ್ತಿಪರ ಜೀವನದಲ್ಲಿ ಮಾರ್ಗದರ್ಶಕರಾಗಿರುವ ನಗರದ ಖ್ಯಾತ ಸಿಎ ಎಸ್.ಎಸ್. ನಾಯಕ್, ತನ್ನ ತಂದೆ ಹಾಗೂ ಇನ್‍ಲ್ಯಾಂಡ್ ಗ್ರೂಪ್‍ನ ಚೇರ್‍ಮೆನ್ ಸಿರಾಜ್ ಅಹ್ಮದ್‍ರವರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ವಹಾಝ್ ಯೂಸಫ್‍ ಪ್ರತಿಷ್ಟಿತ ಇನ್‍ಲ್ಯಾಂಡ್ ಸಮೂಹ ಸಂಸ್ಥೆಯ ಅಂಗ ಸಂಸ್ಥೆಯಾದ ಇನ್‍ಲ್ಯಾಂಡ್ ಇಂಜಿನಿಯರಿಂಗ್ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್‍ನ ಆಡಳಿತ ನಿರ್ದೇಶಕರಾಗಿರುತ್ತಾರೆ. ಈ ಸಂಸ್ಥೆಯು ಇನ್‍ಗ್ಲೇಝ್ ಬ್ರಾಂಡ್‍ನ ಅಲ್ಯೂಮಿನಿಯಂ ಮತ್ತು ಯುಪಿವಿಸಿ ಕಿಟಕಿ ಮತ್ತು ಬಾಗಿಲು ನಿರ್ಮಾಣದಲ್ಲಿ ವಿಶೇಷ ವಿನ್ಯಾಸವನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಅತ್ಯುತ್ತಮ ಸೇವೆಯನ್ನು ನೀಡುತ್ತಿದೆ.

ಇನ್‍ಗ್ಲೇಝ್ ಜಗತ್ತಿನ ಖ್ಯಾತ ಅಲ್ಯೂಮಿನಿಯಂ ಕಿಟಕಿ ಬಾಗಿಲು ತಯಾರಿಕ ಸಂಸ್ಥೆ ಅಲುಮಿಲ್ (ಗ್ರೀಸ್) ಮತ್ತು ಯುಪಿವಿಸಿ ಉತ್ಪನ್ನಗಳ ತಯಾರಕ ಸಂಸ್ಥೆ ಎಲ್ ಜಿ ಹೌಸೇಸ್ (ದಕ್ಷಿಣಕೊರಿಯಾ) ಇದರ ಜೊತೆ ವವ್ಯಹಾರ ಸಂಬಂಧವನ್ನು ಹೊಂದಿದೆ.

ಬೆಂಗಳೂರಿನ ಪೀಣ್ಯದಲ್ಲಿರುವ ಇನ್‍ಗ್ಲೇಝ್ ಕಾರ್ಖಾನೆ ಇಟೆಲಿಯ ಉತ್ಕೃಷ್ಠ ಗುಣಮಟ್ಟದ ಯಂತ್ರೋಪಕರಣಗಳನ್ನು ಹೊಂದಿದೆ ಅಲ್ಲದೇ ಇಂಜಿನಿಯರ್ ಗಳು, ಮೇಲ್ವಿಚಾರಕರು ಹಾಗೂ ನುರಿತ ತಜ್ಞರನ್ನೊಳಗೊಂಡ ಕೆಲಸಗಾರರ ತಂಡವನ್ನು ಹೊಂದಿದೆ. ಇನ್‍ಗ್ಲೇಝ್ ಸಂಸ್ಥೆಯು ಉತ್ಪನ್ನಗಳ ಗುಣಮಟ್ಟ ಮತ್ತು ಹೊಸ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News