ಅಮೆರಿಕದಲ್ಲಿ ಸೌದಿ ಸೈನಿಕರಿಗೆ ನೀಡುತ್ತಿರುವ ತರಬೇತಿಯನ್ನು ನಿಲ್ಲಿಸಿದ ಪೆಂಟಗನ್

Update: 2019-12-11 15:37 GMT

ವಾಶಿಂಗ್ಟನ್, ಡಿ. 11: ಸೌದಿ ಅರೇಬಿಯದ ಸೇನಾ ಸಿಬ್ಬಂದಿಗೆ ಅಮೆರಿಕದಲ್ಲಿ ನೀಡಲಾಗುತ್ತಿರುವ ಎಲ್ಲ ತರಬೇತಿಯನ್ನು ಮುಂದಿನ ಸೂಚನೆಯವರೆಗೆ ನಿಲ್ಲಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಇಲಾಖೆ ಪೆಂಟಗನ್ ಮಂಗಳವಾರ ಘೋಷಿಸಿದೆ.

ಕಳೆದ ವಾರ ಫ್ಲೋರಿಡದಲ್ಲಿರುವ ಸೇನಾ ನೆಲೆಯೊಂದರಲ್ಲಿ ಸೌದಿ ವಾಯು ಪಡೆ ಲೆಫ್ಟಿನೆಂಟ್ ಒಬ್ಬ ಮೂವರನ್ನು ಗುಂಡು ಹಾರಿಸಿ ಕೊಂದ ಬಳಿಕ ಈ ಬೆಳವಣಿಗೆ ನಡೆದಿದೆ.

ಅಮೆರಿಕದ ಈ ನಿರ್ಧಾರವು ಸೌದಿ ಸೇನಾ ಸಿಬ್ಬಂದಿಯ ಅಮೆರಿಕ ತರಬೇತಿ ಕಾರ್ಯಕ್ರಮಗಳ ಮೇಲೆ ದೂರಗಾಮಿ ಪರಿಣಾಮವನ್ನು ಬೀರಲಿದೆ. ಅಮೆರಿಕದಲ್ಲಿ ತರಬೇತಿ ಪಡೆಯುತ್ತಿರುವ ಸೌದಿ ಅರೇಬಿಯದ 300ಕ್ಕೂ ಹೆಚ್ಚು ಯುದ್ಧವಿಮಾನ ಹಾರಾಟ ವಿದ್ಯಾರ್ಥಿಗಳ ತರಬೇತಿಯೂ ನಿಂತಿದೆ.

ಸೌದಿ ಅರೇಬಿಯದ ಯುದ್ಧ ವಿಮಾನ ಪೈಲಟ್‌ಗಳ ತರಬೇತಿ ಮಾತ್ರವಲ್ಲದೆ, ಪದಾತಿ ದಳದ ಸಿಬ್ಬಂದಿ ತರಬೇತಿ ಮತ್ತು ಇತರ ಎಲ್ಲ ಸೌದಿ ತರಬೇತಿ ಕಾರ್ಯಕ್ರಮಗಳ ಮೇಲೂ ಇದು ಪರಿಣಾಮ ಬೀರುತ್ತದೆ ಎಂದು ಪೆಂಟಗನ್ ಹೇಳಿದೆ.

ಆದರೆ, ತರಗತಿ ಕೋಣೆಗಳಲ್ಲಿ ನೀಡಲಾಗುತ್ತಿರುವ ಇಂಗ್ಲಿಷ್ ಭಾಷೆಯ ತರಗತಿಗಳು ಸೇರಿದಂತೆ ಇತರ ತರಗತಿಗಳು ಮುಂದುವರಿಯುತ್ತವೆ ಎಂದು ಅದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News