ದಕ್ಷಿಣ ವಲಯ ಅಂತರ್ ವಿವಿ ಪುರುಷರ ಕಬಡ್ಡಿ ಟೂರ್ನಿಗೆ ಚಾಲನೆ

Update: 2019-12-11 15:57 GMT

ಉಡುಪಿ, ಡಿ.11: ಮಂಗಳೂರು ವಿವಿಯ ದೈಹಿಕ ಶಿಕ್ಷಣ ವಿಭಾಗ ಹಾಗೂ ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ತೆಂಕನಿಡಿಯೂರು ಕಾಲೇಜಿನ ಕ್ರೀಡಾಂಗಣದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ದಕ್ಷಿಣ ವಲಯ ಅಂತರ ವಿವಿ ಪುರುಷರ ಹೊನಲು ಬೆಳಕಿನ ಕಬಡ್ದಿ ಟೂರ್ನಿಗೆ ಬುಧವಾರ ಸಂಜೆ ಅಧಿಕೃತ ಚಾಲನೆ ನೀಡಲಾಯಿತು.

ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಬಲೂನ್‌ಗಳನ್ನು ಹಾರಿ ಬಿಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಗ್ರಾಮೀಣ ಮಟ್ಟಕ್ಕೆ ಸೀಮಿತವಾಗಿದ್ದ ಕಬಡ್ಡಿಗೆ ಇಂದು ಅಂತಾ ರಾಷ್ಟ್ರೀಯ ಮನ್ನಣೆ ಸಿಕ್ಕಿದೆ. ಶಕ್ತಿ ಮತ್ತು ಯುಕ್ತಿ ಬಳಸಿ ಆಡುವ ಕಬಡ್ಡಿಯಿಂದ ದೈಹಿಕ, ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂದರು.

5 ಲಕ್ಷ ರೂ. ಘೋಷಣೆ: ತೆಂಕನಿಡಿಯೂರು ಕಾಲೇಜಿನ ಮೈದಾನದಲ್ಲಿ ಒಳಾಂಗಣ ಕ್ರೀಡಾಂಗಣ ನಿರ್ಮಾಣ ಹಂತದಲ್ಲಿದ್ದು, ನೂರಾರು ವಿದ್ಯಾರ್ಥಿ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಸಜ್ಜಿತವಾಗಿ ನಿರ್ಮಿಸಬೇಕಾಗಿದೆ. ಈ ಕ್ರೀಡಾಂಗಣಕ್ಕೆ ನನ್ನ ಶಾಸಕರ ನಿಧಿಯಿಂದ 5 ಲಕ್ಷ ರೂ. ನೀಡುವುದಾಗಿ ಬೋಜೇಗೌಡ ಭರವಸೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಉಡುಪಿ ಶಾಸಕ ಕೆ.ರಘುಪತಿ ಭಟ್ ಧ್ವಜಾರೋಹಣ ನೆರವೇರಿಸಿದರು. ಜಿಪಂ ಅಧ್ಯಕ್ಷ ದಿನಕರ ಬಾಬು, ಸದಸ್ಯ ಜನಾರ್ದನ ತೋನ್ಸೆ, ರಾಜ್ಯ ಕಬಡ್ಡಿ ಅಸೋಸಿಯೇಶನ್‌ನ ಅಧ್ಯಕ್ಷ ರಾಕೇಶ್ ಮಲ್ಲಿ, ಮಂಗಳೂರು ವಿವಿ ರಿಜಿಸ್ಟ್ರಾರ್ ಪ್ರೊ.ಎ.ಎಂ.ಖಾನ್, ಕರಾವಳಿ ಕಾವಲು ಪಡೆಯ ಚೇತನ್ ಆರ್., ತೆಂಕನಿಡಿಯೂರು ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ಪ್ರಾಂಶುಪಾಲ ಪ್ರೊ. ಬಾಲಕೃಷ್ಣ ಎಸ್.ಹೆಗ್ಡೆ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಆನಂದ ಪಿ. ಸುವರ್ಣ, ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್ ಶೆಟ್ಟಿ, ಮುಖಂಡರಾದ ಶರತ್ ಬೈಲಕೆರೆ, ಧನಂಜಯ ಕುಂದರ್ , ಕೃಷ್ಣ ಶೆಟ್ಟಿ, ವಿಜಯ ಕೊಡವೂರು, ಆನಂದ್ ಸಿ. ಕುಂದರ್, ಹರಿಯಪ್ಪ ಕೋಟ್ಯಾನ್, ಅಣ್ಣಯ್ಯ ಪೂಜಾರಿ, ರಘು ಪೂಜಾರಿ, ಎಸ್.ವಿ.ಭಟ್, ಮಂಜುಳಾಪ್ರಸಾದ್, ರಾಘವೇಂದ್ರ ಕಿಣಿ, ಬಾಲಕೃಷ್ಣ ಹೆಗ್ಡೆ, ರಾಜೇಂದ್ರ ಸುವರ್ಣ, ಗಿರೀಶ್ ಶೆಟ್ಟಿ, ಜಗದೀಶ್ ಕುಂಬ್ಳೆ ಉಪಸ್ಥಿತರಿದ್ದರು.

ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗ ನಿರ್ದೇಶಕ ಡಾ. ಕಿಶೋರ್ ಕುಮಾರ್ ಸಿ.ಕೆ. ಸ್ವಾಗತಿಸಿದರು. ದೈಹಿಕ ಶಿಕ್ಷಣ ಶಿಕ್ಷಕ ಡಾ.ರಾಮಚಂದ್ರ ಪಾಟ್ಕರ್ ವಂದಿಸಿದರು. ಪ್ರೊ. ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ದಕ್ಷಿಣ ಭಾರತದ 6ರಾಜ್ಯಗಳ 90 ವಿವಿ ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ. ಪ್ರಥಮ ದಿನದಲ್ಲಿ ಒಟ್ಟು 45 ಪಂದ್ಯಗಳು ನಡೆದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News