ನೌಕರರ ತರಬೇತಿಗೆ ಸಿದ್ದಗೊಂಡಿದೆ ಉಡುಪಿ ಜಿಲ್ಲಾ ಸಂಪನ್ಮೂಲ ಕೇಂದ್ರ

Update: 2019-12-11 16:03 GMT

ಉಡುಪಿ, ಡಿ.11: ಸರಕಾರ ಜಾರಿಗೆ ತರುವವಿವಿಧ ನೂತನ ಯೋಜನೆಗಳು, ನಿಯಮಗಳು ಮತ್ತು ಅವುಗಳ ಅನುಷ್ಠಾನ ಕುರಿತಂತೆ ಸರಕಾರಿ ನೌಕರರಿಗೆ ಅಗತ್ಯವಿರುವ ತರಬೇತಿಯನ್ನು ನೀಡಲು ಮಣಿಪಾಲದ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದ ಸಮೀಪ ಜಿಪಂ ಸಂಪನ್ಮೂಲ ಕೇಂದ್ರ ತಲೆ ಎತ್ತಿ ನಿಂತಿದೆ.

ಕೆಆರ್‌ಐಡಿಎಲ್ ಇಲಾಖೆ ವತಿಯಿಂದ 1.75 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಈ ಕೇಂದ್ರದಲ್ಲಿ ನೌಕರರಿಗೆ ತರಬೇತಿ ನೀಡಲು ಅಗತ್ಯವಿರುವ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲಾಗಿದೆ.

ತರಬೇತಿ ಕೇಂದ್ರದಲ್ಲಿ ಕಂಪ್ಯೂಟರ್ ಕೊಠಡಿ, ಸಭಾಂಗಣ, ಪ್ರೊಜೆಕ್ಟರ್ ವ್ಯವಸ್ಥೆ ಕಲ್ಪಿಸಲಾಗಿದ್ದು, ಎರಡು ಅಥವಾ ಮೂರು ದಿನಗಳ ತರಬೇತಿ ಆಯೋಜಿಸಿದಲ್ಲಿ ನೌಕರರು ತಂಗಲು ಅಗತ್ಯವಿರುವ ಬೆಡ್‌ಗಳು, ಸ್ನಾನಗೃಹ, ಶೌಚಾಲಯ ಸೇರಿದಂತೆ ಎಲ್ಲಾ ವ್ಯವಸ್ಥೆಗಳನ್ನು ಸಹ ಮಾಡಲಾಗಿದೆ. ಸುಮಾರು 30 ಮಂದಿ ತರಬೇತಿ ನಿರತ ಸಿಬ್ಬಂದಿ ತಂಗಲು ಇಲ್ಲಿ ಸ್ಥಳಾವಕಾಶವಿದೆ. ಅಲ್ಲದೇ 2 ಗೆಸ್ಟ್‌ರೂಂ ವ್ಯವಸ್ಥೆ ಸಹ ಇದ್ದು, ಇದು ಸಂಪೂರ್ಣ ಹವಾನಿಯಂತ್ರಿತವಾಗಿದೆ.

ಮುಂದಿನ ದಿನಗಳಲ್ಲಿ ಈ ಕಟ್ಟಡದ ಮುಂಭಾಗದಲ್ಲಿ ಉದ್ಯಾನವನ, ವಾಕಿಂಗ್‌ಪಾಥ್ ಹಾಗೂ ನೀರಿನ ಕಾರಂಜಿ ನಿರ್ಮಿಸುವ ಮೂಲಕ ರಾಜ್ಯದಲ್ಲೇ ಅತ್ಯಂತ ಆಕರ್ಷಕ ತರಬೇತಿ ಕೇಂದ್ರವನ್ನಾಗಿ ಅಭಿವೃದ್ದಿಗೊಳಿಸುವ ಯೋಜನೆಯೂ ಇದೆ ಎನ್ನುತ್ತಾರೆ ಕೆಆರ್‌ಐಡಿಎಲ್‌ನ ಯೊೀಜನಾ ನಿರ್ದೇಶಕ ಕೃಷ್ಣ ಹೆಪ್ಸೂರ್.

ರಾಜ್ಯದ ಎಲ್ಲಾ ಜಿಲ್ಲೆಗಳಿಗೂ ಇಂತಹ ಕೇಂದ್ರ ನಿರ್ಮಿಸಲು ಅನುದಾನ ಬಿಡುಗಡೆಯಾಗಿದ್ದು, ಉಡುಪಿ ಜಿಲ್ಲೆಯಲ್ಲಿ ಅತ್ಯಂತ ಶೀಘ್ರದಲ್ಲಿ, ಸುಸುಜ್ಜಿತ ರೀತಿಯಲ್ಲಿ ತರಬೇತಿ ಕೇಂದ್ರದ ಕಟ್ಟಡ ನಿರ್ಮಾಣಗೊಂಡಿದೆ. ಬುಧವಾರ ಇಲ್ಲಿ ಉಡುಪಿ ತಾಲೂಕಿನ ಗ್ರಾಪಂ ಸಿಬ್ಬಂದಿಗಳಿಗೆ ನಡೆದ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆ ಕುರಿತ ತರಬೇತಿ ಕಾರ್ಯಗಾರವನ್ನು ನಡೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News